More

    ಬೇಕಿದೆ ಸರ್ಕಾರಿ ಬಸ್ ಸೇವೆ

    ವಿಟ್ಲ: ಮೊದಲಿನಂತೆ ಶಾಲೆಗಳು ಪ್ರಾರಂಭವಾಗಿ ವಿದ್ಯಾರ್ಥಿಗಳು ಆಗಮಿಸಲು ಆರಂಭಿಸಿದರೂ ಸೂಕ್ತ ರೀತಿಯಲ್ಲಿ ಸರ್ಕಾರಿ ಬಸ್ ಸೇವೆ ಆರಂಭಿಸದೆ ವಿದ್ಯಾರ್ಥಿಗಳು ಫುಟ್ ಬೋರ್ಡ್‌ನಲ್ಲಿ ನೇತಾಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಪಾಲಕರು ಮಕ್ಕಳನ್ನು ಕರೊನಾ ಭಯದ ನಡುವೆಯೂ ಶಾಲೆ, ಕಾಲೇಜಿಗೆ ಕಳುಹಿಸುತ್ತಿದ್ದರೆ, ಬಸ್ ಸಮಸ್ಯೆಯಿಂದ ಇನ್ನಷ್ಟು ಭಯದಿಂದ ಮನೆ ಮಂದಿ ಇರಬೇಕಾದ ಪರಿಸ್ಥಿತಿ ಇದೆ. ವಿಟ್ಲದಿಂದ ಅಳಿಕೆಗೆ ಕರೊನಾ ಸಂಕಷ್ಟ ಆರಂಭದ ಮೊದಲು ಸಾಕಷ್ಟು ಬಸ್‌ಗಳ ಓಡಾಟವಿತ್ತಾದರೂ ಈಗ ಇರುವ ಬಸ್ಸಿನಲ್ಲೇ ವಿದ್ಯಾರ್ಥಿಗಳು ಸಂಚರಿಸಬೇಕಾಗಿದೆ.
    75ಕ್ಕೂ ಅಧಿಕ ವಿದ್ಯಾರ್ಥಿಗಳು ಶಾಲೆಗೆ ಸಂಚರಿಸುವ ಜತೆಗೆ ಸಾರ್ವಜನಿಕರು ಇದೇ ಸಮಯಕ್ಕೆ ಬಸ್‌ನಲ್ಲಿ ಸಂಚರಿಸಬೇಕಾದ ಕಾರಣದಿಂದ ಬಸ್‌ನಲ್ಲಿ ಜಾಗದ ಅಭಾವ ಕಾಣಿಸುತ್ತಿದೆ. ಬಸ್‌ನ ಫುಟ್ ಬೋರ್ಡ್‌ನಲ್ಲಿ ಸಂಚರಿಸಲು ಭಯ ಪಡುವ ವಿದ್ಯಾರ್ಥಿಗಳು ಪಡಿಬಾಗಿಲು ಭಾಗದಿಂದ ನಡೆದು ಶಾಲೆಯನ್ನು ತಲುಪಬೇಕಾದ ಅನಿವಾರ್ಯತೆ ತಲೆದೋರಿದೆ.

    ಈಗಾಗಲೇ ಶೈಕ್ಷಣಿಕ ವರ್ಷ ಅರ್ಧ ಕಳೆದಾಗಿದ್ದು, ಇನ್ನು ಬಸ್ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾದರೆ ಒಂದು ವರ್ಷದ ಭವಿಷ್ಯ ಹೋಗಲಿದೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಸೂಕ್ತ ಬಸ್ ವ್ಯವಸ್ಥೆ ಮಾಡಬೇಕೆಂಬುದು ನಾಗರಿಕರ ಒತ್ತಾಯ.

    ಅಪಘಾತಗಳಿಂದ ಭಯ: ಕೆಲವು ವರ್ಷಗಳ ಹಿಂದೆ ಅಳಿಕೆಗೆ ಸಂಚರಿಸುವ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಫುಟ್ ಬೋರ್ಡ್‌ನಲ್ಲಿ ನೇತಾಡುತ್ತಾ ಸಂಚರಿಸಿ ಪಡಿಬಾಗಿಲಲ್ಲಿ ವಿದ್ಯಾರ್ಥಿನಿಯೊಬ್ಬಳು ಬಿದ್ದು ಗಾಯಗೊಂಡ ಘಟನೆ ನಡೆದಿತ್ತು. ಕುದ್ದುಪದವು ಸಮೀಪ ಸೀಟಿನಲ್ಲಿ ಕುಳಿತಿದ್ದ ಮಹಿಳೆಯೊಬ್ಬಳು ಬಸ್‌ನಿಂದ ಹೊರಗೆ ಎಸೆಯಲ್ಪಟ್ಟು ಗಾಯಗೊಂಡ ಘಟನೆ ಎರಡು ಮೂರು ದಿನಗಳ ಹಿಂದೆ ನಡೆದಿತ್ತು.

    ವಿಟ್ಲದಿಂದ ವಿತ್ತನಡ್ಕ- ಪದ್ಯಾಣ ಹೋಗುವ ಬಸ್ ಜನರಿಲ್ಲದೆ ಇದೇ ಸಮಯಕ್ಕೆ ಸಂಚರಿಸುತ್ತಿದ್ದು, ಇದನ್ನು ಅಳಿಕೆ ಬೈರಿಕಟ್ಟೆ ಮೂಲಕವಾಗಿ ಸಂಚರಿಸುವಂತೆ ಮಾಡಿದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ನಾಗರಿಕರಿಗೆ ಬಹಳಷ್ಟು ಸಹಕಾರಿಯಾಗಲಿದೆ.
    ಮಹಮ್ಮದ್ ಶರೀಫ್ ಅಳಿಕೆ
    ಸ್ಥಳೀಯ ನಿವಾಸಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts