More

    ಮದ್ಯ ‘ಕಳ್ಳರ’ ಆಟ, ತನಿಖೆಗೆ ಆಗ್ರಹ

    ಗೋಕಾಕ: ಕರೊನಾ ವೈರಾಣು ಹರಡದಂತೆ ತಡೆಯುವುದಕ್ಕಾಗಿ ದೇಶಾದ್ಯಂತ ಮದ್ಯ ಮಾರಾಟ ನಿಷೇಧಗೊಳಿಸಿದ್ದು ಮದ್ಯ ವ್ಯಸನಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನೊಂದೆಡೆ ಮದ್ಯದಂಗಡಿ ಕಳ್ಳತನ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ.

    ಇತ್ತೀಚೆಗೆ ಘಟಪ್ರಭಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದ್ಯದ ಅಂಗಡಿಯಲ್ಲಿ ಸುಮಾರು ಒಂದೂವರೆ ಲಕ್ಷ ರೂ. ಮದ್ಯ ಕಳ್ಳತನವಾಗಿದೆ ಎಂಬ ಪ್ರಕರಣವೊಂದು ದಾಖಲಾಗಿದೆ. ಆದರೆ, ಸ್ಥಳೀಯರು ಹೇಳುವ ಪ್ರಕಾರ ಮದ್ಯದ ಅಂಗಡಿ ಪಕ್ಕದಲ್ಲಿಯೇ ಪೆಟ್ರೋಲ್ ಬಂಕ್ ಇದೆ.

    ನಿತ್ಯವೂ ಅಲ್ಲಿ ಜನಸಂದಣಿ ಇರುವುದರಿಂದ ಇಷ್ಟೊಂದು ಪ್ರಮಾಣದ ಮದ್ಯವನ್ನು ಕಳ್ಳರು ದೋಚಲು ಹೇಗೆ ಸಾಧ್ಯ ಎಂಬ ಸಂಶಯ ಮೂಡಿದೆ. ಅವರು ಕೊರೆದಿರುವ ರಂಧ್ರ ನೋಡಿದರೆ ಇಷ್ಟೊಂದು ದೊಡ್ಡ ಪ್ರಮಾಣದ ಬಾಕ್ಸ್‌ಗಳನ್ನು ಅಲ್ಲಿಂದ ಸಾಗಿಸಿದ್ದಾದರೂ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಜಿಲ್ಲಾದ್ಯಂತ ಮೇಲಿಂದ ಮೇಲೆ ಮದ್ಯದ ಅಂಗಡಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿವೆ.

    ಬಲ್ಲ ಮೂಲಗಳ ಪ್ರಕಾರ ಹಿಂದಿನ ಬಾಗಿಲುಗಳ ಮೂಲಕ ಅಕ್ರಮವಾಗಿ ಮದ್ಯವನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡಿ, ಲಾಭ ಮಾಡಿಕೊಂಡಿದ್ದಾರೆ. ಅಬಕಾರಿ ಇಲಾಖೆಯ ಕಾನೂನುಗಳಿಂದ ತಪ್ಪಿಸಿಕೊಳ್ಳಲು ಮದ್ಯದ ಅಂಗಡಿ ಕಳ್ಳತನ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದಕ್ಕಾಗಿ ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಿದೆ.

    ಮದ್ಯದ ಅಂಗಡಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಏಕಾಏಕಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದು ಮೇಲ್ನೋಟಕ್ಕೆ ಸಂಶಯ ಮೂಡಿಸಿದೆ. ಅದಕ್ಕಾಗಿ ತನಿಖೆ ನಡೆಸಿ, ಅಗತ್ಯ ಕಠಿಣ ಕ್ರಮ ಕೈಗೊಳ್ಳಲಾಗುವುದು.
    | ಡಿ.ಟಿ.ಪ್ರಭು ಡಿಎಸ್ಪಿ ಗೋಕಾಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts