More

    ನರೇಗಾ ಯೋಜನೆಯಡಿ ಕೆಲಸ ನೀಡಿ

    ಅಳವಂಡಿ: ನರೇಗಾ ಯೋಜನೆಯಡಿ ಕೆಲಸ ಹಾಗೂ ಎನ್‌ಎಂಆರ್ ತೆಗೆಯುವಲ್ಲಿ ಆಗುವ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ನೂರಾರು ಕಾರ್ಮಿಕರು ಸೋಮವಾರ ಅಳವಂಡಿ ಗ್ರಾಪಂ ಕಚೇರಿಯ ಬಾಗಿಲು ಮುಚ್ಚಿ ಪ್ರತಿಭಟನೆ ನಡೆಸಿದರು.

    ವಸತಿ ಯೋಜನೆ, ವೃದ್ಧಾಪ್ಯ ವೇತನ, ನರೇಗಾ ಕೂಲಿ ಸೇರಿ ಇತರ ಸಹಾಯ ಧನಗಳನ್ನು ಆಧಾರ್ ನಂಬರ್ ಆಧಾರದ ಮೇಲೆ ಪಾವತಿಸುವ ಯೋಜನೆ (ಎನ್‌ಪಿಸಿಐ) ಜಾರಿಗೊಳಿಸಿದೆ. ಇದರ ಪ್ರಕಾರ ನರೇಗಾ ಕೂಲಿ ಕಾರ್ಮಿಕರು ಕೆಲಸ ನೀಡುವ ಫಾರ್ಮ್ ನ.6 ಗ್ರಾಪಂಗೆ ಸಲ್ಲಿಸಿದ್ದಾರೆ. ಆದರೆ ಗ್ರಾಪಂನವರು ಎನ್‌ಎಂಆರ್ ತೆಗೆಯುವ ಸಂದರ್ಭದಲ್ಲಿ ಆಧಾರ್ ನಂಬರ್ ಎನ್‌ಪಿಸಿಐನಲ್ಲಿ ಮ್ಯಾಪಿಂಗ್ ಆಗದ ಕೆಲ ಕಾರ್ಮಿಕರಿಗೆ ಕೆಲಸ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

    ಸ್ಥಳಕ್ಕೆ ಆಗಮಿಸಿದ ತಾಪಂ ನರೇಗಾ ಯೋಜನೆಯ ಎಡಿಎ ಸೌಮ್ಯಾ ಮಾತನಾಡಿ, ಸರ್ಕಾರದ ಬಹುತೇಕ ಯೋಜನೆಗಳಲ್ಲಿ ಹಣ ಪಾವತಿಸುವ ವಿಧಾನವನ್ನು ಆಧಾರ್ ಬೇಸ್ ವ್ಯವಹಾರಕ್ಕೆ ಬದಲಿಸಿರುವುದರಿಂದ ಕಾರ್ಮಿಕರು ತಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ಆಧಾರ್ ನಂಬರ್‌ಗೆ ಲಿಂಕ್ ಮಾಡಿಸಿರಬೇಕು. ಆಗ ಮಾತ್ರ ಹಣ ಪಾವತಿಯಾಗಲಿದೆ. ಕೆಲವರ ಆಧಾರ್‌ನಲ್ಲಿ ತಿದ್ದುಪಡಿಗಳಿರುವುದರಿಂದ ಎನ್‌ಎಂಆರ್ ತೆಗೆಯುವಲ್ಲಿ ತೊಂದರೆಯಾಗಿದೆ. ಎಲ್ಲರೂ ಎನ್‌ಪಿಸಿಐನಲ್ಲಿ ಆಧಾರ್ ಮ್ಯಾಪಿಂಗ್ ಮಾಡಿಸಬೇಕು ಎಂದರು.

    ತಾಪಂ ಎಂಐಎಸ್ ಕೋ ಆರ್ಡಿನೇಟರ್ ಶರಣಬಸವ ಪಾಟೀಲ್ ಮಾತನಾಡಿ, ಗ್ರಾಪಂನಲ್ಲಿ ಸುಮಾರು 3500 ಕೂಲಿ ಕಾರ್ಮಿಕರಿದ್ದಾರೆ. ಇದರಲ್ಲಿ 2 ಸಾವಿರ ಕಾರ್ಮಿಕರ ಆಧಾರ್ ನಂಬರ್ ಎನ್‌ಪಿಸಿಐ ಮ್ಯಾಪಿಂಗ್ ಆಗಿದೆ. ಉಳಿದವು ತಾಂತ್ರಿಕ ಸಮಸ್ಯೆಯಿಂದ ಆಗಿಲ್ಲ. ಕಾರ್ಮಿಕರು ಬ್ಯಾಂಕ್ ಖಾತೆ ನಂಬರ್‌ಗೆ ಆಧಾರ್ ಲಿಂಕ್ ಮಾಡಿಸಿ ಹಾಗೂ ಆಧಾರ್ ತಿದ್ದುಪಡಿ ಇದ್ದವರು ಆಧಾರ್ ಕೇಂದ್ರದಲ್ಲಿ ಸರಿಪಡಿಸಿ ಲಿಂಕ್ ಮಾಡಿಸಿ ನಂತರ ಸಮಸ್ಯೆ ಬಗೆಹರಿಯಲಿದೆ ಎಂದರು.

    ಗ್ರಾಪಂ ಸದಸ್ಯ ಗುರುಬಸವರಾಜ ಹಳ್ಳಿಕೇರಿ, ಪಿಡಿಒ ಬಸವರಾಜ ಕೀರ್ದಿ, ಪ್ರಮುಖರಾದ ವಸಂತ ನಾಗರಳ್ಳಿ, ನಾಗರಾಜ ನವನಳ್ಳಿ, ಗುರುಬಸವರಾಜ, ಹನುಮಂತ ಮೂಲಿಮನಿ, ರೇಣುಕಪ್ಪ ಹಳ್ಳಿಕೇರಿ, ವಿಶ್ವನಾಥ ಧೋತರಗಾವಿ, ಮಂಜುನಾಥ ಬೆದವಟ್ಟಿ, ಮಲ್ಲಪ್ಪ ಬೆಣಕಲ್, ಹನುಮಂತ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts