More

    ಪ್ರವೇಶ ಪತ್ರಕ್ಕಾಗಿ ವಿದ್ಯಾರ್ಥಿನಿ ಪರದಾಟ

    ಆಳಂದ: ಅಂಚೆ ಇಲಾಖೆ ಸಿಬ್ಬಂದಿ ಮಾಡಿದ ತಪ್ಪಿನಿಂದಾಗಿ ಕೆ-ಸೆಟ್ ಪ್ರವೇಶ ಪತ್ರಕ್ಕಾಗಿ ವಿದ್ಯಾರ್ಥಿನಿಯೊಬ್ಬಳು ಪರದಾಡುವಂಥ ಪರಿಸ್ಥಿತಿ ಎದುರಾಗಿದೆ.

    ೨೦೨೩ರ ಸೆಪ್ಟೆಂಬರ್‌ನಲ್ಲಿ ಕರೆದಿದ್ದ ಅರ್ಜಿಯಲ್ಲಿ ತಾಲೂಕಿನ ವಿದ್ಯಾರ್ಥಿನಿ ಶಶಿಕಲಾ ಅವರು ಆಂಗ್ಲ ಭಾಷಾ ವಿಷಯದಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಪರೀಕ್ಷಾ ಶುಲ್ಕ ತುಂಬಲು ಪಟ್ಟಣದ ಅಂಚೆ ಕಚೇರಿಗೆ ತೆರಳಿದ್ದಾಳೆ. ಅಲ್ಲಿಯ ಸಿಬ್ಬಂದಿ ನಿರ್ಲಕ್ಷ್ಯದಿಂದ ವಿದ್ಯಾರ್ಥಿನಿ ಪರೀಕ್ಷಾ ಶುಲ್ಕ ಬೇರೊಬ್ಬ ವಿದ್ಯಾರ್ಥಿನಿ ಅರ್ಜಿ ಸಂಖ್ಯೆಗೆ ಹೊಂದಿಕೆಯಾಗಿದೆ. ಆದರೀಗ ಪರೀಕ್ಷಾ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಹೋದರೆ ಅಂಚೆ ಇಲಾಖೆ ನೀಡಿರುವ ರಸೀದಿಗೂ, ವಿದ್ಯಾರ್ಥಿನಿ ಅರ್ಜಿ ಸಂಖ್ಯೆಗೂ ತಾಳೆಯಾಗುತ್ತಿಲ್ಲ. ಇದನ್ನು ಗಮನಿಸಿದ ವಿದ್ಯಾರ್ಥಿನಿ ಪಾಲಕರು ಸ್ಥಳೀಯ ಅಂಚೆ ಇಲಾಖೆ ಮುಖ್ಯಸ್ಥರನ್ನು ಭೇಟಿಯಾಗಿ ಸಿಬ್ಬಂದಿ ನೀಡಿರುವ ರಸೀದಿ, ಅರ್ಜಿ ತೋರಿಸಿ ಲಿಖಿತ ದೂರು ಸಲ್ಲಿಸಿದ್ದಾರೆ.

    ವಿದ್ಯಾರ್ಥಿನಿ ಅರ್ಜಿ ಸಂಖ್ಯೆ ಕೆಎಸ್ ೧೧೩೭೨೬೧ ಇದೆ. ಆದರೆ ಅಂಚೆ ಸಿಬ್ಬಂದಿ ಕೆಎಸ್ ೧೧೩೭೨೩೧ ಅರ್ಜಿ ಸಂಖ್ಯೆಯವರ ಹಣವನ್ನು ಶುಲ್ಕವನ್ನಾಗಿ ಪರಿಗಣಿಸಿದ್ದಾರೆ. ಹೀಗಾಗಿ ಪ್ರವೇಶ ಪತ್ರ ಡೌನ್‌ಲೋಡ್ ಆಗುತ್ತಿಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಅಂಚೆ ಇಲಾಖೆಯವರ ಒಪ್ಪಂದದಂತೆ ಈಗ ಉದ್ಭವಿಸಿರುವ ಸಮಸ್ಯೆ ಬಗೆಹರಿಸುವತ್ತ ಗಮನಹರಿಸಿ ವಿದ್ಯಾರ್ಥಿನಿಗೆ ನ್ಯಾಯ ದೊರಕಿಸಿಕೊಡಬೇಕಿದೆ.

    ಕಲಬುರಗಿ ವಿಭಾಗದ ಅಂಚೆ ಇಲಾಖೆಯವರು ಕೆಇಎ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಿ ಇದಕ್ಕೊಂದು ಪರಿಹಾರ ಕಂಡು ಹಿಡಿದು ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ. ಈಗಾಗಲೇ ಪರೀಕ್ಷಾ ಅಕ್ರಮದಿಂದ ಕಲಬುರಗಿಯಲ್ಲಿದ್ದ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಜ.೧೩ರಂದು ಬೆಂಗಳೂರಿನಲ್ಲಿ ಪರೀಕ್ಷೆ ನಡೆಸಲು ಈಗಾಗಲೇ ತಯಾರಿ ಮಾಡಿಕೊಳ್ಳಲಾಗಿದೆ.

    ರಾಜ್ಯದಲ್ಲಿ ನಡೆಯುವ ವಿವಿಧ ಹಂತದ ಕೆ-ಸೆಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಿ ಚಲನ್ ಕಟ್ಟಲು ಅಂಚೆ ಇಲಾಖೆಗೆ ಅಭ್ಯರ್ಥಿಗಳು ಹೆಚ್ಚಾಗಿ ಕೊನೆಯ ದಿನ ಬರುತ್ತಾರೆ. ಚಲನ್ ಕಟ್ಟಿದ ಮೇಲೆ ತಮ್ಮ ಅರ್ಜಿ ಸಂಖ್ಯೆ ಪರಿಶೀಲಿಸಬೇಕು. ತಪ್ಪು ಕಂಡು ಬಂದರೆ ತಕ್ಷಣ ಸರಿಪಡಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿನಿಯು ಕಳೆದ ನ.೧೧ರಂದು ಶುಲ್ಕ ಕಟ್ಟಿ ಜ.೪ರಂದು ಬಂದು ವಿಚಾರಿಸಿ ಮನವಿ ಸಲ್ಲಿಸಿದ್ದಾಳೆ. ವಿದ್ಯಾರ್ಥಿನಿ ಭವಿಷ್ಯ ಹಾಳಾದಗಂತೆ ಅಂಚೆ ಮೇಲಧಿಕಾರಿಗಳ ಜತೆ ಮಾತನಾಡಿ ಪ್ರವೇಶಪತ್ರ ಡೌನ್‌ಲೋಡ್ ಆಗುವಂತೆ ಕೋರಿದ್ದೇನೆ. ಕೆ-ಸೆಟ್ ಅಧಿಕಾರಿಗಳನ್ನು ಸಹ ಸಂಪರ್ಕಿಸಿ ಸಮಸ್ಯೆ ಸರಿಪಡಿಸುವಂತೆ ಹೇಳಿದ್ದೇನೆ.
    | ಗುರುರಾಜ ಕುಲಕರ್ಣಿ ಸಬ್ ಪೋಸ್ಟ್ ಮಾಸ್ಟರ್, ಅಂಚೆ ಇಲಾಖೆ ಆಳಂದ

    ನಾನು ಕ್ರಮಬದ್ಧವಾಗಿ ಅರ್ಜಿ ಸಲ್ಲಿಸಿದ್ದೇನೆ. ಆದರೆ ಅಂಚೆ ಇಲಾಖೆಯಲ್ಲಿ ಡೇಟಾ ಎಂಟ್ರಿ ವೇಳೆ ಅರ್ಜಿಯ ಕ್ರಮ ಸಂಖ್ಯೆಯನ್ನು ಏರುಪೇರು ಮಾಡಿದ್ದರಿಂದ ನನಗೆ ಕೆ-ಸೆಟ್ ಪರೀಕ್ಷೆ ಬರೆಯಲು ಪ್ರವೇಶ ಪತ್ರ ಸಿಗದಂತಾಗಿದೆ. ನನಗೆ ಪರೀಕ್ಷೆಗೆ ಅವಕಾಶ ಕಲ್ಪಿಸದಿದ್ದರೆ ಗ್ರಾಹಕರ ನ್ಯಾಯಾಲಯದಲ್ಲಿ ಅಂಚೆ ಇಲಾಖೆ ವಿರುದ್ಧ ದಾವೆ ಹೂಡುವೆ.
    | ಶಶಿಕಲಾ ನೊಂದ ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts