More

    ಆಳಂದದಲ್ಲಿ ಜನತಾ ದರ್ಶನ ೨೫ರಂದು

    ಆಳಂದ: ಸರ್ಕಾರದ ನಿರ್ದೇಶನದಂತೆ ಪಟ್ಟಣದಲ್ಲಿ ಅ.೨೫ರಂದು ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ತಿಳಿಸಿದರು.

    ಪಟ್ಟಣದ ಆಡಳಿತ ವಿಕಾಸಸೌಧದಲ್ಲಿ ಜನತಾ ದರ್ಶನದ ಪೂರ್ವ ಸಿದ್ಧತೆ ಕುರಿತು ಗುರುವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಈಗಾಗಲೇ ತಾಲೂಕು ಬರಪೀಡಿತ ಘೋಷಣೆಯಾಗಿದೆ. ತೊಗರಿ ೨೮,೫೨೫, ಹೆಸರು ೧೭೯, ಉದ್ದು ೪೨೪, ಸೋಯಾಬೀನ್ ೧೦೪೩೨, ಕಬ್ಬು ೩೭೭೫, ಸೂರ್ಯಕಾಂತಿ ೩೯೮ ಸೇರಿ ೪೩,೭೩೩ ಹೆಕ್ಟೇರ್ ಬೆಳೆ ಹಾಳಾಗಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದರು.

    ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಎಲ್‌ಒಗಳ ಸಭೆ ನಡೆಸಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಲಾಡಚಿಂಚೋಳಿ, ಕೊಡಲಹಂಗರಗಾ ಸರ್ಕಾರಿ ಪ್ರೌಢ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಒಳ್ಳೆತನ ಬೆಳೆಸಿಕೊಂಡು ಉತ್ತಮ ಪ್ರಜ್ಞೆಗಳಾಗಿ ಎಂದು ಹಾರೈಸಿದರು.

    ಬಳಿಕ ಪಟ್ಟಣದ ರೈತ ಸಂಪರ್ಕಕ್ಕೆ ತೆರಳಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ರೈತರಿಗೆ ಯಾವ ರೀತಿ ಬೀಜ, ರಸಗೊಬ್ಬರ ವಿತರಣೆ ಕುರಿತು ಗಣಕಯಂತ್ರ ಮೂಲಕ ಮಾಹಿತಿ ಪಡೆದರು. ಸರ್ಕಾರಿ ಪದವಿಪೂರ್ವ ಕಾಲೇಜು ಹಿಂಭಾಗದಲ್ಲಿ ನಡೆಯಲಿರುವ ಜನತಾ ದರ್ಶನ ಸ್ಥಳವನ್ನು ಪರಿಶೀಲಿಸಿದರು.

    ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕೆಲ ಸಮಸ್ಯೆಗಳನ್ನು ಪರಿಶೀಲಿಸಿ ರೋಗಿಗಳಿಗೆ ತೊಂದರೆ ಆಗದಂತೆ ವ್ಯವಸ್ಥೆ ಕಲ್ಪಿಸಿ ಎಂದು ವೈದ್ಯಾಧಿಕಾರಿ ಡಾ.ಮಹಾಂತಪ್ಪ ಹಾಳಮಳ್ಳಿ ಅವರಿಗೆ ಸೂಚಿಸಿದರು.

    ಸಂಜೆ ಅಮರ್ಜಾ ಅಣೆಕಟ್ಟೆಗೆ ಭೇಟಿ ನೀಡಿ ನೀರಿನ ಪ್ರಮಾಣ ವೀಕ್ಷಿಸಿದರು. ಪುರಸಭೆ ಅಧಿಕಾರಿ ಶಂಭುಲಿAಗ ಕಣ್ಣಿ ಅಲ್ಪಸಲ್ಪ ಮಾಹಿತಿ ನೀಡಿದಾಗ ಅಮರ್ಜಾದಲ್ಲಿ ನೀರಿದೆ. ಪಟ್ಟಣಕ್ಕೆ ವಾರಕ್ಕೊಮ್ಮೆ ಏಕೆ ನೀರು ಪೂರೈಸುತ್ತೀರಿ ಎಂದು ಪ್ರಶ್ನಿಸಿದಾಗ, ಮುಖ್ಯಾಧಿಕಾರಿ ನೀರು ಸಂಗ್ರಹ ಸಾಮರ್ಥ್ಯ ಕೊರತೆ ಇದೆ ಎಂದು ಹೇಳಿದರು. ಹಾಗಿದ್ದರೆ ಎರಡ್ಮೂರು ದಿನಕ್ಕೊಮ್ಮೆ ನೀರು ಬಿಡಿ ಎಂದು ಡಿಸಿ ತಾಕೀತು ಮಾಡಿದರು.

    ಜಿಪಂ ಸಿಇಒ ಭನ್ವರ್‌ಸಿಂಗ್ ಮೀನಾ, ಸಹಾಯಕ ಆಯುಕ್ತೆ ಮಮತಾ ಕುಮಾರಿ, ತಹಸೀಲ್ದಾರ್ ಯಲ್ಲಪ್ಪ ಸುಬೇದಾರ, ತಾಪಂ ಇಒ ಮಾನಪ್ಪ ಕಟ್ಟಿಮನಿ ಇದ್ದರು.

    ಆಳಂದಕ್ಕೆ ಡಿಸಿ ಪ್ರವಾಸ ಕೈಗೊಂಡಿದ್ದರೂ ಕ್ಷೇತ್ರ ಶೀಕ್ಷಣಾಧಿಕಾರಿ, ಅಮರ್ಜಾ ಅಣೆಕಟ್ಟು, ಡಿವೈಎಸ್‌ಪಿ, ಸಿಪಿಐ, ಕಾರ್ಮಿಕ ಇಲಾಖೆ ಅಧಿಕಾರಿಗಳ ಗೈರು ಆಗಿರುವುದಕ್ಕೆ ಸಿಡಿಮಿಡಿಗೊಂಡರು.

    ಮೇನು ಚಾರ್ಟ್ ಪ್ರಕಾರ ವ್ಯವಸ್ಥೆ ಕಲ್ಪಿಸಿ: ಕೊರಳ್ಳಿ ಕ್ರಾಸ್ ಹತ್ತಿರದ ಬಿಸಿಎಂ ವಸತಿ ನಿಲಯಕ್ಕೆ ಭೇಟಿ ನೀಡಿದ ಡಿಸಿ ತರನ್ನುಮ್ ವಿದ್ಯಾರ್ಥಿಗಳೊಂದಿಗೆ ಮಾತನಾಡಿದಾಗ ನಮಗೆ ಕಿಟ್ ನೀಡಿಲ್ಲ. ಊಟ ಮತ್ತು ಉಪಾಹಾರ ಸರಿಯಾಗಿ ಕೊಡುವುದಿಲ್ಲ ಎಂದು ಕೆಲವರು ಗೋಳು ತೋಡಿಕೊಂಡರು. ಸ್ಥಳದಲ್ಲಿದ್ದ ವಸತಿ ನಿಲಯ ಮೇಲ್ವಿಚಾರಕಿ ಸುನೀತಾ ಉಡಗಿ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ಮೇನು ಚಾರ್ಟ್ ಪ್ರಕಾರ ಮಕ್ಕಳಿಗೆ ಊಟ, ಅಗತ್ಯ ವ್ಯವಸ್ಥೆ ಕಲ್ಪಿಸಿ ಎಂದು ತಾಕೀತು ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts