More

    ಅಕ್ರಮ ಕಟ್ಟಡಗಳ ತೆರವಿಗೆ ಅಂಗಡಿಕಾರರ ವಿರೋಧ

    ಆಲಮಟ್ಟಿ: ಸಮೀಪದ ಯಲಗೂರ ಗ್ರಾಮದಲ್ಲಿ ಅತಿಕ್ರಮಣಗೊಂಡಿದ್ದ ಸರ್ಕಾರಿ ಜಾಗದ ತೆರವು ಕಾರ್ಯಾಚರಣೆಗೆ ಮಂಗಳವಾರ ಸ್ಥಳೀಯರ ವಿರೋಧದಿಂದಾಗಿ ಮೊಟಕುಗೊಂಡಿತು.
    ಶಾಸಕ ಎ.ಎಸ್. ಪಾಟೀಲ ನಡಹಳ್ಳಿಯವರ ವಿಶೇಷ ಕಾಳಜಿಯಿಂದ ಕೃಷ್ಣಾ ಭಾಗ್ಯ ಜಲ ನಿಗಮದಿಂದ ಎಸ್ ಇಪಿ, ಟಿಎಸ್ ಪಿಯಡಿ ಸಿಸಿ ರಸ್ತೆ, ಚರಂಡಿಗಳ ನಿರ್ಮಾಣ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು. ಕಾಮಗಾರಿಗಳು ನಡೆಯಬೇಕಿದ್ದ ಸ್ಥಳದಲ್ಲಿ ಅನಧಿಕೃತವಾಗಿ ಕಟ್ಟಿರುವ ಕಟ್ಟಡಗಳು, ಪ್ರಸಿದ್ಧ ಆಂಜನೇಯ ದೇವಸ್ಥಾನದ ಬಳಿ ಇರುವ ಅನಧಿಕೃತ ಮಾರಾಟ ಮಳಿಗೆಗಳು ಕಾಮಗಾರಿ ನಿರ್ವಹಣೆಗೆ ಅಡ್ಡಿಯಾಗಿದ್ದವು. ಅವುಗಳನ್ನು ತೆರವುಗೊಳಿಸಬೇಕೆಂಬ ಯಲಗೂರ ಗ್ರಾಮ ಪಂಚಾಯಿತಿಯ ಮನವಿಯ ಮೇರೆಗೆ ನಿಡಗುಂದಿ ತಾಲೂಕು ಆಡಳಿತ ಹಾಗೂ ಯಲಗೂರ ಗ್ರಾಪಂ ನೇತೃತ್ವದಲ್ಲಿ ಮಂಗಳವಾರ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಅದಕ್ಕಾಗಿ 10 ದಿನ ಮೊದಲೇ ನೋಟಿಸ್‌ನ್ನೂ ನೀಡಲಾಗಿತ್ತು. ಡಂಗುರ ಕೂಡಾ ಸಾರಿಸಲಾಗಿತ್ತು. ಹಲವರು ನೋಟಿಸ್ ಹಾಗೂ ಕಾರ್ಯಾಚರಣೆ ಕೈಗೊಳ್ಳುವ ಭೀತಿಯಿಂದ ಕಾರ‌್ಯಾಚರಣೆಗೂ ಮೊದಲು ರಸ್ತೆಯ ಮೇಲಿದ್ದ ಕಟ್ಟೆ, ತಾತ್ಕಾಲಿಕ ಶೆಡ್, ಕಟ್ಟಡಗಳನ್ನು ತೆರವುಗೊಳಿಸಿದ್ದರು. ಆದರೆ, ಇಲ್ಲಿಯ ಪ್ರಸಿದ್ಧ ಆಂಜನೇಯ ದೇವಸ್ಥಾನದ ಬಳಿಯ ಅನಧಿಕೃತ ಕಟ್ಟಡ ಸೇರಿ ಹಲವು ಬಲಾಡ್ಯರು ತೆರವುಗೊಳಿಸಿರಲಿಲ್ಲ. ಮಂಗಳವಾರ ತಹಸೀಲ್ದಾರ್ ಶಿವಲಿಂಗಪ್ರಭು ವಾಲಿ, ಪಿಎಸ್ ಐ ಸಿ.ಬಿ. ಚಿಕ್ಕೋಡಿ ಸೇರಿ ಇನ್ನೀತರ ಅಧಿಕಾರಿಗಳು ಹಾಜರಾಗಿ ತೆರವುಗೊಳಿಸಲು ಸೂಚಿಸಿದಾಗ ಅಂಗಡಿಕಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಕಾರ್ಯಾಚರಣೆ ಅರ್ಧಕ್ಕೆ ಸ್ಥಗಿತಗೊಂಡಿತು.
    ತೆರವು ಕಾರ್ಯಾಚರಣೆಗೂ ಮುನ್ನವೇ ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿದ್ದ ಹಲವರು, ತೆರವು ಕಾರ್ಯಾಚರಣೆಗೆ ಸ್ಥಗಿತಗೊಂಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗವೂ ನಡೆದು ಒಬ್ಬರಿಗೊಂದು ಇನ್ನೊಬ್ಬರಿಗೊಂದು ಮಾನದಂಡ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಖಾರವಾಗಿ ಆಕ್ಷೇಪ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts