More

    ಆಲಮಟ್ಟಿ ಜಲಾಶಯಕ್ಕೆ ಭರಪೂರ ನೀರು

    ಮಲ್ಲಿಕಾರ್ಜುನಯ್ಯ ತೋರಗಲ್ಲಮಠ
    ಆಲಮಟ್ಟಿ:
    ಕೃಷ್ಣೆಯ ಉಗಮ ಸ್ಥಾನದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಲಾಲ್‌ಬಹಾದ್ದುರ ಶಾಸ್ತ್ರೀ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಜಲಾಶಯದಿಂದ ನದಿಪಾತ್ರಕ್ಕೆ ನೀರು ಹರಿಸುತ್ತಿರುವುದು ಮುಂದುವರಿದಿದೆ.

    ಬರದ ನಾಡಿನಲ್ಲಿ ಸಮರ್ಪಕವಾಗಿ ಮಳೆಯಾಗದಿದ್ದರೂ ಪ್ರತಿ ವರ್ಷ ಉತ್ತರ ಕರ್ನಾಟಕದ ಜೀವನಾಡಿ ಆಲಮಟ್ಟಿ ಜಲಾಶಯ ಮಾತ್ರ ಮೈದುಂಬಿಕೊಳ್ಳುತ್ತದೆ. ಆದರೆ, ಈ ಬಾರಿ ಉತ್ತರ ಕರ್ನಾಟದ ಬೆಳಗಾವಿ ಜಿಲ್ಲೆಯಲ್ಲಿ ಅಪಾರ ಮಳೆ ಸುರಿದಿದ್ದು. ಜತೆಗೆ ಮಹಾರಾಷ್ಟ್ರದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಆಲಮಟ್ಟಿ ಜಲಾಶಯ ಭರ್ತಿಯತ್ತ ಸಾಗಿದೆ.

    ಗರಿಷ್ಠ 519.60 ಮೀಟರ್ ಎತ್ತರದಲ್ಲಿ 123.081 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಶುಕ್ರವಾರ ಬೆಳಗ್ಗೆ 517.19 ಮೀಟರ್ ಎತ್ತರದಲ್ಲಿ 86.845 ಟಿಎಂಸಿ ನೀರು ಸಂಗ್ರಹವಾಗಿತ್ತು. ಜಲಾಶಯಕ್ಕೆ ಒಳಹರಿವಿನ ಪ್ರಮಾಣ 4,35,692 ಕ್ಯೂಸೆಕ್ ಇದ್ದರೆ ಹೊರ ಹರಿವಿನ ಪ್ರಮಾಣ 4,08,123 ಲಕ್ಷ ಕ್ಯೂಸೆಕ್ ಇತ್ತು.

    ಶುಕ್ರವಾರದಿಂದ ಕೇವಲ 2 ದಿನಗಳವರೆಗೆ ನೀರು ಹೊರಬಿಡದಿದ್ದರೆ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ. ಆಲಮಟ್ಟಿ ಜಲಾಶಯಕ್ಕೆ ಕಳೆದ ಕೆಲ ದಿನಗಳಿಂದ ಜಲಾಶಯದ ಹೊರ ಹರಿವಿನ ಪ್ರಮಾಣ ಏರಿಕೆ ಮಾಡಿ ಜಲಾಶಯದಲ್ಲಿ ನೀರು ಸಂಗ್ರಹ ಕಡಿಮೆಗೊಳಿಸಲಾಗಿತ್ತು. ಜಲಾಶಯದಿಂದ ನೀರನ್ನು ಶುಕ್ರವಾರ ಬೆಳಗ್ಗೆ 4.20 ಲಕ್ಷಕ್ಕೆ ಹೊರ ಹರಿವು ಏರಿಕೆ ಮಾಡಿದ್ದರಿಂದ ನದಿ ತೀರದಲ್ಲಿರುವ ಕೃಷ್ಣೆಯ ಒಡಲ ಮಕ್ಕಳಲ್ಲಿ ಬೆಳೆಗಳು ಜಲಾವೃತವಾಗುತ್ತಿರುವುದರಿಂದ ಚಿಂತೆಗೀಡುಮಾಡಿದೆ.

    ಆಲಮಟ್ಟಿ ಜಲಾಶಯಕ್ಕೆ ಈ ಬಾರಿ ಅವಧಿಗೂ ಮುನ್ನವೇ ಒಳ ಹರಿವು ಕಂಡು ಬಂದಿತ್ತು. ಮೇ ತಿಂಗಳಿನಲ್ಲಿ ಒಳಹರಿವು ಕಂಡ ಜಲಾಶಯ ಅವಧಿಗೂ ಮುನ್ನವೇ ಭರ್ತಿಯಾಗುವ ಲಕ್ಷಣಗಳು ಗೋಚರಿಸಿದ್ದವು. ನಂತರದ ದಿನಗಳಲ್ಲಿ ಮಹಾ ಮಳೆ ಕಡಿಮೆಯಾಗಿ ಹರಿವಿನ ಪ್ರಮಾಣ ಕುಂಠಿತಗೊಂಡಿತ್ತು. ಆದರೆ, ಮಹಾರಾಷ್ಟ್ರದಲ್ಲಿ ಮತ್ತೆ ಮಳೆಯ ಮುಂದುವರಿದಿದ್ದರಿಂದಾಗಿ ಕೆಲದಿನಗಳಿಂದ ಜಲಾಶಯಕ್ಕೆ ಅಪಾರ ನೀರು ಹರಿದು ಬರುತ್ತಿದ್ದು, ಮುಂಜಾಗ್ರತೆ ಕ್ರಮವಾಗಿ ಜಲಾಶಯದಿಂದ ಲಕ್ಷಾಂತರ ಕ್ಯೂಸೆಕ್ ನೀರನ್ನು ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ.

    ಆಲಮಟ್ಟಿ ಜಲಾಶಯದಿಂದ ವ್ಯಾಪಕವಾಗಿ ನೀರು ಬಿಡುತ್ತಿದ್ದರಿಂದಾಗಿ ನಾರಾಯಣಪುರದ ಬಸವಸಾಗರ ಜಲಾಶಯದಲ್ಲಿ ನೀರಿನ ಹೊರಹರಿವು ಕಡಿಮೆ ಇರುವುದರಿಂದಾಗಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ನದಿ ತೀರದ ಗ್ರಾಮಗಳ ರೈತರ ಜಮೀನಿನ ಬೆಳೆಗಳು ಜಲಾವೃತವಾಗುತ್ತಿದ್ದು, ಪ್ರತಿ ಬಾರಿಯೂ ರೈತರು ಅಪಾರ ಹಾನಿ ಅನುಭವಿಸುವಂತಾಗಿದೆ.

    ಜಲಾವೃತಗೊಂಡ ಜಮೀನುಗಳು
    ವಿಜಯಪುರ ಜಿಲ್ಲೆಯ ನಿಡಗುಂದಿ ಸೇರಿ ತಾಲೂಕಿನ ಅರಳದಿನ್ನಿ, ಯಲಗೂರ, ಕಾಶಿನಕುಂಟಿ, ಯ. ಬೂದಿಹಾಳ, ವಡವಡಗಿ, ಬಳಬಟ್ಟಿ ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕುಗಳ ಗ್ರಾಮಗಳ ರೈತರ ಜಮೀನುಗಳಲ್ಲಿನ ಬೆಳೆಗಳು ಜಲಾವೃತಗೊಂಡಿವೆ. ಅಲ್ಲದೆ, ಬಾಗಲಕೋಟೆ ಜಿಲ್ಲೆಯ ಸೀತಿಮನಿ, ಹೊಸೂರ, ಮನಹಳ್ಳಿ, ನಾಯನೇಗಲಿ, ವಡಕಲುದಿನ್ನಿ, ಮಂಕಣಿ, ಬಿಸಲದಿನ್ನಿ, ಮ್ಯಾಗೇರಿ, ನಾಗಸಂಪಗಿ, ನಾಗರಾಳ ಹಾಗೂ ಕೂಡಲಸಂಗಮ ಸೇರಿ ಹಲವಾರು ಗ್ರಾಮಗಳ ಜಮೀನುಗಳಲ್ಲಿನ ಬೆಳೆಗಳು ಜಲಾವೃತಗೊಂಡಿವೆ.

    ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಅಪಾರ ನೀರು ಹರಿದು ಬರುತ್ತಿದೆ. ಇದರಿಂದ ಜಲಾಶಯದ ಹಿನ್ನೀರು ಪ್ರದೇಶ ಹಾಗೂ ಮುಂಭಾಗದಲ್ಲಿ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.
    ಎಚ್ .ಸುರೇಶ, ಮುಖ್ಯ ಅಭಿಯಂತರರು, ಕೆಬಿಜೆಎನ್‌ಲ್ ಆಲಮಟ್ಟಿ ವಲಯ

    ಪ್ರತಿ ವರ್ಷವೂ ಇದೇ ರೀತಿ ಪ್ರವಾಹ ಬರುತ್ತಿರುವುದರಿಂದ ರೈತರಿಗೆ ತೀವ್ರ ಹಾನಿಯಾಗುತ್ತಿದೆ. ತಡೆಗಟ್ಟಲು ತಡೆಗೋಡೆ ನಿರ್ಮಿಸಿ ಅಥವಾ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಲು ಭೂಸ್ವಾಧೀನಪಡಿಸಿಕೊಂಡು ರೈತರಿಗೆ ಪರಿಹಾರ ನೀಡಬೇಕು.
    ಬಸವರಾಜ ಹೆರಕಲ್ಲ, ಅವಳದಿನ್ನಿ ರೈತ.

    ನಿಡಗುಂದಿ ತಾಲೂಕಿನ ಕೃಷ್ಣೆಯ ಪ್ರವಾಹದಿಂದ ಅಂದಾಜು 1164 ಎಕರೆ ಜಮೀನು ಜಲಾವೃತಗೊಂಡಿದ್ದು, ನೀರು ಇಳಿಮುಖವಾದ ನಂತರ ನಿಖರ ಸಂಖ್ಯೆ ಸಿಗಲಿದೆ.
    ಸತೀಶ ಕೂಡಲಗಿ, ನಿಡಗುಂದಿ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts