More

    ತಾಲೂಕಾಸ್ಪತ್ರೆಗಳಲ್ಲಿ ಆಕ್ಸಿಜನೇಟೆಡ್ ಬೆಡ್ ನಿರ್ಮಾಣ

    ಆಲಮಟ್ಟಿ: ಜಿಲ್ಲೆಯ ಎಲ್ಲ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಆಕ್ಸಿಜನೇಟೆಡ್ ಬೆಡ್ ನಿರ್ಮಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಿಡಗುಂದಿ, ಮುದ್ದೇಬಿಹಾಳ ಹಾಗೂ ಬಸವನಬಾಗೇವಾಡಿ ತಾಲೂಕಿನ ಅಧಿಕಾರಿಗಳೊಂದಿಗೆ ಕೋವಿಡ್ ಪರಿಸ್ಥಿತಿ ಹಾಗೂ ಪ್ರವಾಹ ಮುಂಜಾಗ್ರತೆ ಕುರಿತು ಸಭೆ ನಡೆಸಿ ನಂತರ ಅವರು ಮಾತನಾಡಿದರು.
    ಜಿಲ್ಲೆಯ 15 ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಕರೊನಾ ರೋಗ ಲಕ್ಷಣ ಇಲ್ಲದಿರುವ ಮತ್ತು ಕಡಿಮೆ ರೋಗ ಲಕ್ಷಣ ಹೊಂದಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯಕೀಯ, ಪೋಲೀಸ್ ಸಿಬ್ಬಂದಿ ಸೇರಿ ಎಲ್ಲ ಕರೊನಾ ಸೇನಾನಿಗಳ ಆರೋಗ್ಯ ದೃಷ್ಟಿಯಿಂದ ಅಗತ್ಯ ಕ್ರಮಕೈಗೊಳ್ಳುವ ಕುರಿತು ಕೂಲಂಕಷವಾಗಿ ಚರ್ಚಿಸಲಾಗಿದೆ ಎಂದರು.

    ಸರ್ಕಾರದ ನಿರ್ದೇಶನದಂತೆ ರೋಗ ಲಕ್ಷಣಗಳಿಲ್ಲದ ಸೋಂಕಿತರಿಂದ ಕರೊನಾ ಹರಡುವ ಸಾಧ್ಯತೆ ಕಡಿಮೆ ಇರುತ್ತದೆ. ಗಂಟಲು ದ್ರವ ಪರೀಕ್ಷೆಗೆ ಒಳಪಟ್ಟವರು ವರದಿ ಬರುವವರೆಗೂ ಹೋಂ ಕ್ವಾರಂಟೈನ್‌ನಲ್ಲಿರುವುದು ನಾಗರಿಕ ಜವಾಬ್ದಾರಿಯಾಗಿದೆ ಎಂದು ಸರ್ಕಾರ ಸುತ್ತೋಲೆ ಹೊರಡಿಸಲಾಗಿದೆ ಎಂದರು.

    ಈ ಬಾರಿ ಕೃಷ್ಣಾ ನದಿಯ ಸದ್ಯದ ಒಳಹರಿವು ಗಮನಿಸಿದರೆ ಪ್ರವಾಹ ಉಂಟಾಗುವ ಸಾಧ್ಯತೆ ತುಂಬಾ ಕಡಿಮೆ ಇದೆ ಎಂದು ಆಲಮಟ್ಟಿ ಮತ್ತು ನಾರಾಯಣ ಜಲಾಶಯದ ಅಭಿಯಂತರರು ಕೃಷ್ಣಾ ನದಿ ಪ್ರವಾಹ ಕುರಿತು ಡಿಸಿಎಂ ಗೋವಿಂದ ಕಾರಜೋಳ ಮತ್ತು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ನಡೆಸಿದ ಸಭೆಯಲ್ಲಿ ತಿಳಿಸಿದ್ದಾರೆ ಎಂದು ತಿಳಿಸಿದರು.

    ನದಿ ತೀರದಲ್ಲಿ ಬರುವ ನಿಡಗುಂದಿ ಮತ್ತು ಮುದ್ದೇಬಿಹಾಳ ತಾಲೂಕಿನ 18 ಗ್ರಾಮಗಳ ಜನರಿಗೆ ಮುಂಜಾಗ್ರತೆ ಇರುವಂತೆ ಸೂಚಿಸಲಾಗಿದೆ. ಜತೆಗೆ ಅಗತ್ಯ ಕ್ರಮಕೈಗೊಳ್ಳುವಂತೆ ತಹಸೀಲ್ದಾರ್ ಮತ್ತು ತಾಪಂ ಇಒಗಳಿಗೆ ತಿಳಿಸಿ ಪ್ರವಾಹದಿಂದ ಉಂಟಾಗುವ ಸಮಸ್ಯೆಗಳ ಕುರಿತು ಕೂಡಲೇ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ತಿಳಿಸಲಾಗಿದೆ ಎಂದರು.

    ಕಳೆದ ಬಾರಿ ಪ್ರವಾಹಕ್ಕೆ ತುತ್ತಾದ ಗ್ರಾಮಗಳ ಸ್ಥಳಾಂತರ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ. ಜತೆಗೆ ಹಾನಿಗೀಡಾದ ಮನೆಗಳ ನಿರ್ಮಾಣಕ್ಕಾಗಿ ಸರ್ಕಾರ ಹಂತ ಹಂತವಾಗಿ ಅನುದಾನ ನೀಡಲಾಗುತ್ತಿದೆ ಎಂದು ತಿಳಿಸಿದರು.
    ಜಿಪಂ ಸಿಇಒ ಗೋವಿಂದರೆಡ್ಡಿ, ಎಸ್ಪಿ ಅನುಪಮ ಅಗರವಾಲ, ಡಿವೈಎಸ್ಪಿ ಈ. ಶಾಂತವೀರ, ತಹಸೀಲ್ದಾರ್ ಶಿವಲಿಂಗಪ್ರಭು ವಾಲಿ, ಜಿ.ಎಸ್. ಮಳಗಿ, ಟಿಎಚ್‌ಒ ಎಸ್.ಎಸ್. ಓತಗೇರಿ, ಡಾ. ಸತೀಶ ತಿವಾರಿ, ಸಿಪಿಐ ಸೋಮಶೇಖರ ಜುಟ್ಟಲ್, ಪಿಎಸ್‌ಐ ಚಂದ್ರಶೇಖರ ಚಿಕ್ಕೋಡಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts