More

    ಆಲಮಟ್ಟಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ

    ಆಲಮಟ್ಟಿ: ಆಲಮಟ್ಟಿ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಠಿಯಿಂದ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.
    ಇಲ್ಲಿನ ಎಎಲ್‌ಬಿಸಿ ನರ್ಸರಿ ಆವರಣದಲ್ಲಿ ಕೋಟಿ ವೃಕ್ಷ ಅಭಿಯಾನದಡಿ ಸಾರ್ವಜನಿಕರಿಗೆ ಸಸಿ ವಿತರಣೆಗೆ ಚಾಲನೆ ನೀಡಿ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
    ಜಿಲ್ಲೆಯಲ್ಲಿ ಹಸಿರು ಪ್ರದೇಶ ಹೆಚ್ಚಳಕ್ಕಾಗಿ ಆಲಮಟ್ಟಿ ಕೆಬಿಜೆಎನ್‌ಎಲ್‌ನಿಂದ 10 ಲಕ್ಷ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯಿಂದ 7 ಲಕ್ಷ ಸೇರಿ ಒಟ್ಟು 17 ಲಕ್ಷ ಸಸಿಗಳನ್ನು ಜನರಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ ಎಂದರು.
    ಕೆಬಿಜೆಎನ್‌ಎಲ್, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿ ವಿವಿಧ ಇಲಾಖೆಗಳಿಂದ ಸರ್ಕಾರಿ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಜಿಲ್ಲೆಯಲ್ಲಿ ಹಸಿರು ಮೂಡಿಸಲು ಪ್ರಯತ್ನಿಸಲಾಗುತ್ತಿದೆ. ಕಳೆದ 3 ವರ್ಷಗಳಿಂದ ಸಾಕಷ್ಟು ಪ್ರಮಾಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಪೋಷಿಸಲಾಗಿದೆ ಎಂದರು.
    ಮುಂದಿನ ದಿನಗಳಲ್ಲಿ ಕೆಬಿಜೆಎನ್‌ಎಲ್ ನಿವೃತ್ತ ಅಧಿಕಾರಿಗಳು, ಅವಳಿ ಜಿಲ್ಲೆಯ ಪ್ರತಿನಿಧಿಗಳು ಸೇರಿ ತಜ್ಞರನ್ನು ಒಳಗೊಂಡಂತೆ ಸೆಮಿನಾರ್ ಹಮ್ಮಿಕೊಳ್ಳುವ ಚಿಂತನೆ ಇದೆ ಎಂದರು.

    ಆಲಮಟ್ಟಿಯಲ್ಲಿ ಪ್ರವಾಸೋದ್ಯಮ ಬೆಳವಣಿಗೆ ದೃಷ್ಠಿಯಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಬೇಕಿದೆ. ಇಲ್ಲಿನ ವಿವಿಧ ಉದ್ಯಾನಗಳಿಗೆ ಆಗಮಿಸುವ ಪ್ರವಾಸಿಗರಿಗೆ, ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಸತಿ ನಿಲಯ ಸೇರಿ ವಿವಿಧ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಸರ್ಕಾರದ ಗಮನಸೆಳೆಯಲಾಗಿದೆ.
    ಇಲ್ಲಿನ ಉದ್ಯಾನಗಳಲ್ಲಿ ವಿವಿಧ ಜಾತಿಯ ಅಸಂಖ್ಯಾತ ಸಸ್ಯಗಳಿವೆ. ಜತೆಗೆ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ವಿವಿಧ ಪ್ರಬೇಧದ ವಿದೇಶಿ ಪಕ್ಷಿಗಳು ವಲಸೆ ಬರುತ್ತಿರುವುದರಿಂದ ಮಕ್ಕಳ ಅಧ್ಯಯನಕ್ಕೆ ಅನುಕೂಲವಾಗುತ್ತದೆ. ಜಲಾಶಯದ ಹಿನ್ನೀರು ಪ್ರದೇಶದ ವಿವಿಧ ದ್ವೀಪಗಳಲ್ಲಿ ಜಂಗಲ್ ರೆಸಾರ್ಟ್, ರೂಪ್ ಕಾರ್ ಸೇರಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗುವ ಎಲ್ಲ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು.

    ಸಿಡಬ್ಲೂಸಿ ವರದಿಯಂತೆ ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳನ್ನು ಎತ್ತುವಷ್ಟು ಪ್ರಮಾಣದಲ್ಲಿಲ್ಲ. ಆದರೆ ಜಲಾಶಯದ ಹಿನ್ನೀರು ಪ್ರದೇಶದ ಸುತ್ತಮುತ್ತ ಪ್ರದೇಶಗಳಲ್ಲಿ ಸಸಿ ನೆಡುವ ಕುರಿತು ಚಿಂತಿಸಲಾಗುವುದು ಎಂದರು.

    ಮಹಾರಾಷ್ಟ್ರದಿಂದ ಬಂದ 23 ಸಾವಿರ ಜನರಲ್ಲಿ 21 ಸಾವಿರ ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ನೆಗೆಟಿವ್ ವರದಿ ಬಂದಿದೆ. ಪಾಸಿಟಿವ್ ಬಂದ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸೀಲ್‌ಡೌನ್ ಮಾಡಲಾಗುತ್ತಿದೆ. ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಿ ಪರೀಕ್ಷಿಸಲಾಗುತ್ತಿದೆ. ಜನರು ಯಾವುದೇ ರೀತಿಯಲ್ಲಿ ಭಯ ಪಡುವ ಅಗತ್ಯವಿಲ್ಲ. ಕ್ವಾರಂಟೈನ್‌ನಲ್ಲಿರುವ ಜನರಲ್ಲಿ ಕರೊನಾ ಲಕ್ಷಣ ಕಂಡು ಬಂದವರಿಗೆ ಮೊದಲ ಆದ್ಯತೆ ನೀಡಿ ಗಂಟಲು ದ್ರವ ಪರೀಕ್ಷೆ ಮಾಡಿ ನಂತರ ಉಳಿದವರ ಪರೀಕ್ಷೆ ಮಾಡಲಾಗುತ್ತಿದೆ ಎಂದರು.
    ಸಸಿ ವಿತರಣೆ ನಂತರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ರಾಕ್ ಗಾರ್ಡನ್‌ನಲ್ಲಿ ಸಸಿ ನೆಟ್ಟು ನೀರೂಣಿಸಿದರು. ಎಸ್ಪಿ ಅನುಪಮ್ ಅಗರವಾಲ್, ಜಿಪಂ ಸಿಇಒ ಗೋವಿಂದ ರೆಡ್ಡಿ, ಕೃಷಿ ಜಂಟಿ ನಿರ್ದೇಶಕ ಶಿವಕುಮಾರ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಂತೋಷ ಇನಾಮದಾರ, ಕೆಬಿಜೆಎನ್‌ಎಲ್ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ.ಪೈ, ಆರ್‌ಎ್ಒ ಮಹೇಶ ಪಾಟೀಲ ಇತರರಿದ್ದರು.

    ಆಲಮಟ್ಟಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ
    ಆಲಮಟ್ಟಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts