More

    ಅಕ್ರಮ ಮದ್ಯಮಾರಾಟದ ಜಾಡಿನ ಹಿಂದೆ ಬಿದ್ದ ಚನ್ನಪಟ್ಟಣ ತಾಲೂಕು ಆಡಳಿತ

    ಚನ್ನಪಟ್ಟಣ: ಲಾಕ್‌ಡೌನ್ ಆದೇಶದಿಂದಾಗಿ ಬೊಂಬೆನಾಡಿನಲ್ಲಿ ಕಳ್ಳತನ ಪ್ರಕರಣಗಳು ಕಡಿಮೆಯಾಗಿವೆ. ಆದರೆ ಆಕ್ರಮ ಮದ್ಯ ಮಾರಾಟ ಹೆಚ್ಚಾಗಿದ್ದು, ಗ್ರಾಮೀಣ ಪ್ರದೇಶ ಸೇರಿ ಹಲವೆಡೆ ದುಬಾರಿ ದರಕ್ಕೆ ಮದ್ಯ ಮಾರಾಟ ನಡೆಯುತ್ತಿದೆ. ಇದೀಗ ತಾಲೂಕು ಆಡಳಿತ ಅಕ್ರಮ ಮದ್ಯ ಸರಬರಾಜಿನ ಜಾಡು ಹಿಡಿಯಲು ಮುಂದಾಗಿದ್ದು, ಕಳದೆರಡು ದಿನಗಳಿಂದ ತಹಸೀಲ್ದಾರ್ ನೇತೃತ್ವದಲ್ಲಿ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿದ್ದಾರೆ.

    ಲಾಕ್‌ಡೌನ್ ಆದೇಶ ಅಕ್ರಮ ಮದ್ಯಮಾರಾಟಗಾರಿಗೆ ವರದಾನ ಎಂಬಂತಾಗಿದ್ದು, ಮದ್ಯ ಪ್ರಿಯರನ್ನು ಲೂಟಿ ಮಾಡುತ್ತಿದ್ದು, ಒಂದಕ್ಕೆ ಮೂರರಷ್ಟು ದರ ಪಡೆದು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮದ್ಯ ಮಾರಾಟ ನಡೆಸಲಾಗುತ್ತಿದೆ. ಪೊಲೀಸರ ಕಣ್ತಪ್ಪಿಸಿ ಈ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಆಕ್ರಮ ಮದ್ಯ ಮಾರಾಟಗಾರರ ಜಾಡು ಹಿಡಿಯುವುದೇ ಪೊಲೀಸರು ಹಾಗೂ ಅಬಕಾರಿ ಇಲಾಖೆಗೆ ತಲೆನೋವಾಗಿದೆ.

    ಲಾಕ್‌ಡೌನ್ ಘೋಷಣೆಯಾದ ಬಳಿಕ ಮದ್ಯದಂಗಡಿಗಳಿಗೆ ಬೀಗ ಜಡಿದು, ಮುದ್ರೆ ಹಾಕುವ ಕೆಲಸವೇನೋ ಆಗಿದೆ. ಆದರೆ, ಭಾರೀ ಪ್ರಮಾಣದಲ್ಲಿ ಮದ್ಯದ ಸರಕು ದುಪ್ಪಟ್ಟು ದರದಲ್ಲಿ ಮದ್ಯಪ್ರಿಯರ ಕೈಸೇರುತ್ತಿದ್ದು, ಈ ಮದ್ಯ ಎಲ್ಲಿಂದ ಸರಬರಾಜಾಗುತ್ತಿದೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಕೆಳ ಮತ್ತು ಮಧ್ಯಮ ವರ್ಗದವರು ಸೇವಿಸುವ ಮದ್ಯದ ಸರಕು ಸರಾಗವಾಗಿ ಮಾರಾಟವಾಗುತ್ತಿರುವುದು ಈ ಮದ್ಯ ಎಲ್ಲಿಂದ ಬರುತ್ತಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

    ತಮ್ಮ ಅಂಗಡಿಗಳಿಗೇ ಕನ್ನ ಹಾಕಿದರೇ ಮಾಲೀಕರು: ಮದ್ಯದಂಗಡಿಗಳು ಬಾಗಿಲು ಮುಚ್ಚಿದ್ದು, ಬೀಗವನ್ನು ಸೀಲ್ ಮಾಡಲಾಗಿದೆ. ಆದರೆ, ಅಸಲಿಯತ್ತು ಬೇರೆಯೇ ಇದ್ದು, ಮೂಲಗಳ ಪ್ರಕಾರ ಯಾವ ಅಂಗಡಿಯಲ್ಲೂ ಬೀಗ ಜಡಿದ ದಿನವಿದ್ದ ಸರಕು ಇಲ್ಲ. ಮಾರುಕಟ್ಟೆಯಲ್ಲಿ ಮದ್ಯ ಬೇಡಿಕೆಯನ್ನು ಗಮನಿಸಿದ ಕೆಲ ಮದ್ಯದಂಗಡಿ ಮಾಲೀಕರು ಹಾಗೂ ಸಿಬ್ಬಂದಿ ತಾವೇ ತಮ್ಮ ಅಂಗಡಿಗಳಿಗೆ ಕನ್ನ ತೋಡಿ ತಮ್ಮ ಬಳಿಯಿದ್ದ ಸರಕನ್ನು ಕಾಳಸಂತೆಗೆ ಸರಬರಾಜು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೆಲ ಅಂಗಡಿಗಳ ಮಾಲೀಕರು ಅವಕಾಶವಿದ್ದಾಗ ಹಣ ಮಾಡಿಕೊಳ್ಳೋಣ.., ಮುಂದೆ ನೋಡೋಣ ಎಂಬ ಉಡಾಫೆ ತೋರಿರುವ ಜತೆಗೆ ಸರ್ಕಾರ ಹಾಗೂ ಅಬಕಾರಿ ನಿಯಮಗಳನ್ನು ಗಾಳಿ ತೂರುವ ಹುಂಬತನ ಪ್ರದರ್ಶಿಸುತ್ತಿದ್ದಾರೆ ಎನ್ನಲಾಗಿದೆ.

    ಅಂಗಡಿಗಳ ಪರಿಶೀಲನೆ: ಬೀಗಮುದ್ರೆ ಹಾಕಿದ್ದರೂ ಸಹ ಮದ್ಯದಂಗಡಿ ಮಾಲೀಕರೇ ಮದ್ಯ ಸರಬರಾಜು ಮಾಡುತ್ತಿದ್ದಾರೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ, ಕಳೆದೆರಡು ದಿನಗಳಿಂದ ಕೆಲ ಮದ್ಯದಂಗಡಿಗಳ ಬೀಗ ತೆಗೆಸಿ ಪರಿಶೀಲನಾ ಕಾರ್ಯಕ್ಕೆ ತಹಸೀಲ್ದಾರ್ ಬಿ.ಕೆ. ಸುದರ್ಶನ್ ನೇತೃತ್ವದ ಪೊಲೀಸ್ ಹಾಗೂ ಅಬಕಾರಿ ಇಲಾಖೆಗಳ ತಂಡ ಮುಂದಾಗಿದೆ. ತಾಲೂಕಿನ ಸಿಂಗಾರಾಜಿಪುರದ ಲಕ್ಷ್ಮೀ ಬಾರ್ ಆ್ಯಂಡ್ ರೆಸ್ಟೋರೆಂಟ್, ಕುಡಿನೀರು ಕಟ್ಟೆ ಬಳಿಯ ರವಿಚಂದ್ರ ವೈನ್ಸ್, ಸಾತನೂರು ರಸ್ತೆಯ ಗರುಡಾದ್ರಿ ವೈನ್ಸ್ ಹಾಗೂ ಚಿಕ್ಕಮಳೂರು ಬಳಿಯ ಸ್ಟೋರ್ಟ್ಸ್ ಕ್ಲಬ್‌ನಲ್ಲಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಮೇಲೆ ದಾಳಿ ಮಾಡಿರುವ ಅಧಿಕಾರಿಗಳ ತಂಡ ಲಾಕ್‌ಡೌನ್ ಆದೇಶವಾದ ಹಿಂದಿನ ದಿನದ ಸರಕು ಹಾಗೂ ಪ್ರಸುತ್ತ ಇರುವ ಸರಕಿನ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ರವಿಚಂದ್ರ ವೈನ್ಸ್ ಹಾಗೂ ಸಿಂಗರಾಜಿಪುರದ ಲಕ್ಷ್ಮೀ ಬಾರ್‌ನಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಈ ಅಂಗಡಿಗಳ ಪರವಾನಗಿ ರದ್ದುಪಡಿಸಬಹುದು ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ. ಇನ್ನು ಕ್ಲಬ್‌ನ ಬಾರ್‌ನಲ್ಲೂ ಸಹ ಗೊಂದಲ ಕಂಡುಬಂದಿದ್ದು ಅದರ ಮೇಲೂ ಪ್ರಕರಣ ದಾಖಲಿಸಲಾಗಿದೆ. ಎರಡು ಮದ್ಯದಂಗಡಿಯಲ್ಲಿ ಮಾಲೀಕರೇ ಮದ್ಯ ಕದ್ದು ಮಾರಾಟ ಮಾಡಿದ್ದಾರೆ ಎಂಬುದು ಖಚಿತವಾಗಿದ್ದು, ಇನ್ನುಳಿದ ಮದ್ಯದಂಗಡಿಗಳನ್ನು ಪರಿಶೀಲಿಸಿದರೆ ಇನ್ನಷ್ಟು ಅಕ್ರಮಗಳು ಬಯಲಾಗುತ್ತವೆ. ಬೀಗಮುದ್ರೆ ಬೀಳುವುದಕ್ಕೆ ಮುಂಚಿನ ಹಾಗೂ ಇಂದಿನ ದಾಸ್ತಾನಿನ ಬಗ್ಗೆ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಸ್ಟಾಕ್ ಚೆಕ್ ಮಾಡಿದರೆ ಕಾಳಸಂತೆ ದಂಧೆಯ ಮುಖವಾಡ ಕಳಚಿ ಬೀಳಲಿದೆ ಎನ್ನುವುದು ಸಾರ್ವಜನಿಕರ ಅನಿಸಿಕೆಯಾಗಿದೆ.

    ಮದ್ಯದ ಅಂಗಡಿ ಮಾಲೀಕರು ಮದ್ಯವನ್ನು ಮಾರಾಟ ನಡೆಸುತ್ತಿದ್ದಾರೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಪೊಲೀಸ್ ಮತ್ತು ಅಬಕಾರಿ ಅಧಿಕಾರಿಗಳ ಜತೆ ಪರಿಶೀಲನೆ ನಡೆಸಿದ್ದೇನೆ. ಈ ವೇಳೆ ಎರಡು ಅಂಗಡಿಗಳಲ್ಲಿ ಸ್ಟಾಕ್‌ನಲ್ಲಿ ವ್ಯತ್ಯಾಸ ಕಂಡು ಬಂದಿದೆ. ಅಬಕಾರಿ ಅಧಿಕಾರಿಗಳು ಕ್ರಮ ಜರುಗಿಸಿ, ವರದಿ ನೀಡಿದ್ದಾರೆ. ಲಾಕ್‌ಡೌನ್ ಆದೇಶದ ವಿರುದ್ಧ ನಡೆದುಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ.
    ಬಿ.ಕೆ. ಸುದರ್ಶನ್ ತಹಸೀಲ್ದಾರ್, ಚನ್ನಪಟ್ಟಣ

    ಇಲಾಖೆ ವತಿಯಿಂದ ಎರಡು ತಂಡಗಳನ್ನು ರಚಿಸಿ ತಾಲೂಕಿನಲ್ಲಿ ಗಸ್ತು ತೀರುಗುತ್ತಿದ್ದೇವೆ. ಮದ್ಯಮಾರಾಟ ಕಂಡುಬಂದರೆ ಕಠಿಣ ಕ್ರಮ ಕಟ್ಟಿಟ್ಟಬುತ್ತಿ. ಈಗಾಗಲೇ ಬೀಗ ಮುದ್ರೆ ಹಾಕಿರುವ ಅಂಗಡಿಗಳ ಮೇಲೆ ನಿಗಾ ಇರಿಸಿದ್ದೇವೆ. ನಾಲ್ಕು ಅಂಗಡಿಗಳಲ್ಲಿ ಪರಿಶೀಲನೆ ನಡೆಸಿ, ಎರಡು ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಲು ಶಿಾರಸು ಮಾಡಲಾಗಿದೆ.
    ಡಿ. ಸುನೀಲ್, ಅಬಕಾರಿ ನಿರೀಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts