More

    ಅಜ್ಜರಣಿ ಗ್ರಾಮಸ್ಥರಿಗಿಲ್ಲ ಶಾಶ್ವತ ಸೇತುವೆ

    ವಿಜಯವಾಣಿ ಸುದ್ದಿಜಾಲ ಶಿರಸಿ

    ವರದಾ ನದಿ ಪ್ರವಾಹದಿಂದ ಸಂಪರ್ಕ ಸಮಸ್ಯೆ ಅನುಭವಿಸುವ ತಾಲೂಕಿನ ಅಜ್ಜರಣಿ ಗ್ರಾಮಸ್ಥರಿಗೆ ಶಾಶ್ವತ ಸೇತುವೆ ಮರೀಚಿಕೆಯಾಗಿದೆ. ನೂತನ ಸೇತುವೆ ಕಾಮಗಾರಿ ಗುತ್ತಿಗೆ ನೀಡಿ 2 ವರ್ಷ ಕಳೆದರೂ ಇನ್ನೂ ಅನುಷ್ಠಾನ ಆಗದಿರುವುದು ಸಮಸ್ಯೆಗೆ ಕಾರಣವಾಗಿದೆ.

    ಬನವಾಸಿಯಿಂದ ಅನತಿ ದೂರದಲ್ಲಿರುವ ಅಜ್ಜರಣಿ ಸುತ್ತಮುತ್ತ ನೂರಾರು ಮನೆಗಳಿವೆ. ಇಲ್ಲಿನ ಜನರು ಎಲ್ಲ ವಹಿವಾಟು, ದಿನಸಿ, ಆಸ್ಪತ್ರೆ, ಬಸ್ ನಿಲ್ದಾಣ ಎಲ್ಲದಕ್ಕೂ ಬನವಾಸಿಯನ್ನೇ ಅವಲಂಬಿಸಿದ್ದಾರೆ. ಈ ಊರಿನಿಂದ ಬನವಾಸಿಗೆ ಬರುವ ಮಧ್ಯೆ ಚಿಕ್ಕದೊಂದು ಸೇತುವೆಯಿದೆ. ತಗ್ಗಿನಲ್ಲಿರುವ ಈ ಸೇತುವೆಯನ್ನು ಪುನರ್ ನಿರ್ಮಾಣ ಮಾಡುವ ಜತೆಗೆ ಎತ್ತರಿಸಬೇಕು ಎಂಬುದು ಇಲ್ಲಿನ ಜನರ ದಶಕಗಳ ಹಿಂದಿನ ಬೇಡಿಕೆಯಾಗಿದೆ.

    ವರದಾ ನದಿಗೆ ಪ್ರವಾಹ ಬಂದರೆ ಈ ಸೇತುವೆ ಮುಳುಗುತ್ತದೆ. ಸುತ್ತಲಿನ ಪ್ರದೇಶಗಳ ಕೃಷಿ ಭೂಮಿ ಜಲಾವೃತವಾಗುತ್ತದೆ. ಬನವಾಸಿ ಮತ್ತು ಅಜ್ಜರಣಿ ನಡುವಿನ ಸಂಪರ್ಕ ಕೊಂಡಿ ಕಳಚುತ್ತದೆ. ಪ್ರವಾಹ ಇಳಿಮುಖವಾಗದಿದ್ದರೆ ತಿಂಗಳುಗಟ್ಟಲೇ ರಸ್ತೆಯ ಮೇಲೆ ನಾಲ್ಕೈದು ಅಡಿ ನೀರು ನಿಂತಿರುತ್ತದೆ. ಹೀಗಾಗಿ ಇಲ್ಲಿ ಶಾಶ್ವತ ಸೇತುವೆ ನಿರ್ವಿುಸಬೇಕು ಎಂದು ಜನರು ಜನಪ್ರತಿನಿಧಿಗಳನ್ನು ಒತ್ತಾಯಿಸುತ್ತಲೇ ಬಂದಿದ್ದರು. ಇದಕ್ಕೆ ಸರ್ಕಾರ ಸ್ಪಂದಿಸಿ ಹೊಸ ಸೇತುವೆ ನಿರ್ವಿುಸಲು 2018ರಲ್ಲೇ ಆದೇಶ ನೀಡಿತ್ತು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್​ಡಿಸಿಎಲ್)ದ ಅಡಿಯಲ್ಲಿ ಈ ಸೇತುವೆ ಕಾಮಗಾರಿ ನಡೆಸುವಂತೆ ಸೂಚಿಸುವ ಜತೆ ಈಗಾಗಲೇ 1.8 ಕೋಟಿ ರೂ. ಮೊತ್ತಕ್ಕೆ ಗುತ್ತಿಗೆ ಕೂಡ ನೀಡಲಾಗಿತ್ತು. ಆದರೆ, ಇಂದಿಗೂ ಕಾಮಗಾರಿ ಕೈಗೊಂಡಿಲ್ಲ. ಗುತ್ತಿಗೆ ಪಡೆದ ಕಂಪನಿಯವರು ಈವರೆಗೂ ಸ್ಥಳಕ್ಕೆ ಬಂದಿಲ್ಲ ಎನ್ನುತ್ತಾರೆ ಸ್ಥಳೀಯರು.

    4 ಸಾವಿರ ಜನರಿಗೆ ಸಮಸ್ಯೆ: ವರದೆಗೆ ನೆರೆ ಬಂದು ಸೇತುವೆ ಮುಳುಗಿದರೆ, ಅಜ್ಜರಣಿ, ಮತ್ಕುಣಿ, ಕಂತ್ರಾಜಿ, ಗುಡ್ನಾಪುರ ಭಾಗದ ಅಂದಾಜು 4 ಸಾವಿರ ಜನರಿಗೆ ತೊಂದರೆಯಾಗುತ್ತದೆ. ಅರ್ಧ ಕಿ.ಮೀ ದೂರದ ಬನವಾಸಿ ತಲುಪಲು ಎಂಟು ಕಿ.ಮೀ. ಸುತ್ತು ಹಾಕಿ, ಗುಡ್ನಾಪುರ ಮಾರ್ಗವಾಗಿ ಬರಬೇಕಾಗುತ್ತದೆ. ಶಾಲೆಗೆ ಹೋಗುವ ಮಕ್ಕಳು, ನಿತ್ಯ ಕೆಲಸಕ್ಕೆ ಹೋಗುವವರಿಗೆ ತುಂಬಾ ತೊಂದರೆಯಾಗುತ್ತದೆ ಎಂದು ಸ್ಥಳೀಯ ರಾಜೇಂದ್ರ ಗೌಡ ಸಮಸ್ಯೆ ಬಿಚ್ಚಿಟ್ಟಿದ್ದಾರೆ.

    ಪ್ರಾರಂಭವಾಗದ ಕಾಮಗಾರಿ: ಈ ಬಾರಿ ಮಳೆ ಕಡಿಮೆಯಿದೆ. ಸೇತುವೆಯ ಮೇಲೆ ಜನರು ಓಡಾಡಬಹುದು. ಇಲ್ಲದಿದ್ದರೆ ಈ ಹೊತ್ತಿಗೆ ಸೇತುವೆಯ ಮೇಲೆ ನದಿಯ ನೀರು ಉಕ್ಕಿ ಹರಿಯುತ್ತಿತ್ತು. ಹೊಸ ಸೇತುವೆ ನಿರ್ವಿುಸಿಕೊಡುವಂತೆ ಹಲವಾರು ಬಾರಿ ಶಾಸಕರನ್ನು ವಿನಂತಿಸಲಾಗಿದೆ. ಶಾಸಕರು ಮಂಜೂರು ಆಗಿದೆ ಎನ್ನುತ್ತಿದ್ದಾರೆ. ಆದರೆ, ಕಾಮಗಾರಿ ಮಾತ್ರ ಪ್ರಾರಂಭವಾಗದಿರುವುದು ಚಿಂತೆಗೀಡುಮಾಡಿದೆ ಎಂದು ಗ್ರಾಮಸ್ಥರಾದ ಸುಬ್ರಹ್ಮಣ್ಯ ಗೌಡ, ರಾಜೇಶ ಗೌಡ, ಬೇಸರ ವ್ಯಕ್ತಪಡಿಸಿದ್ದಾರೆ.

    ತಾಂತ್ರಿಕ ಕಾರಣಗಳಿಂದ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ಇದೀಗ ಕರೊನಾ ಇರುವ ಕಾರಣ ಅನುಷ್ಠಾನವಾಗಿಲ್ಲ. ಮಳೆಗಾಲದ ನಂತರ ಕಾಮಗಾರಿ ಆರಂಭವಾಗಬಹುದು.

    | ಗುತ್ತಿಗೆ ಕಂಪನಿ ಪ್ರಮುಖರು

    ಅಜ್ಜರಣಿ ರಸ್ತೆಯಲ್ಲಿ ನಿತ್ಯ ನೂರಾರು ಜನರು ಓಡಾಡುತ್ತಾರೆ. ಹಲವಾರು ವಾಹನಗಳು ಸಂಚರಿಸುತ್ತವೆ. ಇಡೀ ರಸ್ತೆ ಹೊಂಡದಿಂದ ತುಂಬಿದ್ದು, ಸಂಚರಿಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ವರ್ಷಗಳಿಂದ ಸೇತುವೆ ಕಾಮಗಾರಿ ಆಗದ ಪರಿಣಾಮ ಸಮಸ್ಯೆ ಉಲ್ಬಣಿಸುತ್ತಿದೆ.

    | ಶ್ರೀಲತಾ ಕಾಳೇರಮನೆ, ತಾಲೂಕು ಪಂಚಾಯಿತಿ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts