More

    ವಿಮಾನ ಪ್ರಯಾಣಿಕರ ಸಂಖ್ಯೆ ಇಳಿಮುಖ

    ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂ ಮಧ್ಯೆಯೂ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ 7 ವಿಮಾನಗಳು (ತಲಾ 7 ಆಗಮನ, ನಿರ್ಗಮನ) ಕಾರ್ಯಾಚರಣೆ ನಡೆಸಿದವು. ವಿವಿಧ ಮಹಾನಗರಗಳಿಂದ 78 ಪ್ರಯಾಣಿಕರು ಇಲ್ಲಿಗೆ ಬಂದಿಳಿದರೆ, 75 ಪ್ರಯಾಣಿಕರು ನಿರ್ಗಮಿಸಿದರು.

    ಕರೊನಾ ಸೋಂಕು ಹರಡುವಿಕೆ ತಡೆಗಟ್ಟುವುದಕ್ಕಾಗಿ ಜಿಲ್ಲಾದ್ಯಂತ (ಕಾಯ್ದೆ 1897 ಕಲಂ 2, 3, 4 ಅನ್ವಯ) ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಮಾ. 22ರಿಂದ 30ರ ವರೆಗೆ ಇಲ್ಲಿಂದ ಬೆಂಗಳೂರಿಗೆ ತೆರಳಬೇಕಿದ್ದ ಸ್ಟಾರ್ ಏರ್‌ಲೈನ್ಸ್ ವಿಮಾನಯಾನ ಸಂಸ್ಥೆಯ ಎಲ್ಲ ವಿಮಾನಗಳ ಸೇವೆ ರದ್ದುಗೊಳಿಸಲಾಗಿದೆ. ಟ್ರೂ ಜೆಟ್ ಸಂಸ್ಥೆ ಭಾನುವಾರವೇ ಎಲ್ಲ ವಿಮಾನಗಳ ಸೇವೆ ಸ್ಥಗಿತಗೊಳಿಸಿತ್ತು ಎಂದು ವಿಮಾನ ನಿಲ್ದಾಣ ನಿರ್ದೇಶಕ ರಾಜೇಶಕುಮಾರ್ ಮೌರ್ಯ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸ್ಪೈಸ್‌ಜೆಟ್ ಸಂಸ್ಥೆಯು ಮಾ. 23ರಂದು ಹೈದರಾಬಾದ್‌ಗೆ ಸಂಚರಿಸುವ ವಿಮಾನಗಳ ಸೇವೆ ರದ್ದುಗೊಳಿಸಿದೆ. ಮಾ. 29ರಿಂದ ಏ. 10ರ ವರೆಗೆ ಬೆಂಗಳೂರಿಗೆ ತೆರಳುವ ಎಲ್ಲ ವಿಮಾನಗಳ ಸೇವೆಯನ್ನು ಅಲಾಯನ್ಸ್ ಏರ್ ಸಂಸ್ಥೆ ಸ್ಥಗಿತಗೊಳಿಸಿದೆ. ಆದರೆ, ಪುಣೆ-ಬೆಳಗಾವಿ ಸಂಚಾರ ಎಂದಿನಂತಿರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    31ರ ವರೆಗೂ ಜಿಲ್ಲೆ ಲಾಕ್‌ಡೌನ್

    ಬೆಳಗಾವಿ: ಸಾಂಕ್ರಾಮಿಕ ರೋಗಗಳ (ಕೋವಿಡ್-19) ನಿಬಂಧನೆಗಳು- 2020ರ ಅನ್ವಯ ರಾಜ್ಯ ಸರ್ಕಾರದಿಂದ ಬೆಳಗಾವಿ ಜಿಲ್ಲೆಗೆ ಲಾಕ್‌ಡೌನ್‌ಗೆ ಆದೇಶ ಬಂದಿದ್ದು, ಈ ಹಿನ್ನೆಲೆಯಲ್ಲಿ ಮಾ. 31ರ ವರೆಗೆ ಜಿಲ್ಲಾದ್ಯಂತ ನಿರ್ಬಂಧ ಮುಂದುವರಿಸಿ ಜಿಲ್ಲಾಡಳಿತ ಆದೇಶ ನೀಡಿದೆ.
    ಬೆಳಗಾವಿಯಿಂದ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಕ್ಕೆ ತೆರಳುವ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳ ಸಂಚಾರ 31ರ ವರೆಗೂ ನಿರ್ಬಂಧಿಸಿ ವಿಸ್ತರಣೆ ಮಾಡಲಾಗಿದೆ.

    ಹಾಲಿನ ಡೇರಿ, ಔಷಧ ಮಳಿಗೆ, ಕಿರಾಣಿ ಅಂಗಡಿ, ತರಕಾರಿ, ಮಾಂಸ, ಮೀನು ಅಂಗಡಿಗಳು, ಪೆಟ್ರೋಲ್ ಬಂಕ್ ಹಾಗೂ ಜೀವನಾವಶ್ಯಕ ವಸ್ತು ಪೂರೈಸುವ ಅಂಗಡಿಗಳು ಮಾತ್ರ ತೆರೆದಿರುತ್ತವೆ. ಅಗ್ನಿಶಾಮಕ ಮತ್ತು ಪೊಲೀಸ್ ಸೇವೆ ಲಭ್ಯವಿರಲಿದೆ.
    ಮಹಾರಾಷ್ಟ್ರದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದರಿಂದ ಜಿಲ್ಲೆಯಲ್ಲೂ ಹೈ ಅಲರ್ಟ್ ಮುಂದುವರಿಯಲಿದೆ. ಜಿಲ್ಲೆಯಿಂದ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಸಾಧನದ ಮೂಲಕ ತಪಾಸಣೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts