More

    ಸ್ವಾತಂತ್ರೃಪೂರ್ವದ ಶಾಲೆಗೆ ಶತಮಾನದ ಸಂಭ್ರಮ

    ಐಮಂಗಲ: ಸ್ವಾತಂತ್ರೃ ಪೂರ್ವದಿಂದ ಅಕ್ಷರಜ್ಞಾನ ಹೇಳಿಕೊಡುತ್ತ ಬಂದಿರುವ ಹಿರಿಯೂರು ತಾಲೂಕು ಮರಡಿಹಳ್ಳಿಯ ಸರ್ಕಾರಿ ಶಾಲೆಗೆ ಇದೀಗ ಶತಮಾನದ ಸಂಭ್ರಮ!
    ಈ ಸಂದರ್ಭವನ್ನು ಸ್ಮರಣೀಯವಾಗಿಸಲು ಫೆ.11, 12 ಎರಡು ದಿನಗಳ ಕಾಲ ಶಾಲಾವರಣದಲ್ಲಿ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಗೋಷ್ಠಿಗಳ ಮೂಲಕ ವಿಚಾರಮಂಥನ ನಡೆಯಲಿದ್ದು, ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.

    ಹಿನ್ನೆಲೆ: ಮರಡಿಹಳ್ಳಿಯಲ್ಲಿ ಸ್ವಾತಂತ್ರೃಪೂರ್ವ ಅಂದರೆ 1901ಕ್ಕಿಂತ ಹಿಂದಿನಿಂದ ಪ್ರಾಥಮಿಕ ಶಾಲೆ ನಡೆಯುತ್ತಿತ್ತು. ಸಾಹುಕಾರ್ ಸೂರಪ್ಪ ಎಂಬುವರು 1920ರಲ್ಲಿ ಇದನ್ನು 5-7ನೇ ತರಗತಿಗೆ ವಿಸ್ತರಿಸಿದರು. 1923ರಲ್ಲಿ ಸರ್ಕಾರದಿಂದ ಮಾನ್ಯತೆ ಪಡೆಯಿತು.

    1943ರಲ್ಲಿ ಗ್ರಾಮದ ಶೇರೆಡ್ಡಿ ಎಸ್.ರುದ್ರಪ್ಪ, ಎಸ್.ರಾಮರೆಡ್ಡಿ ಹಾಗೂ ಗ್ರಾಮಸ್ಥರ ಸಹಕಾರದಿಂದ 8-10ನೇತರಗತಿವರೆಗಿನ ಜಿಲ್ಲಾ ಬೋರ್ಡ್ ಪ್ರೌಢಶಾಲೆ ಆರಂಭವಾಯಿತು. 2019-20 ರಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯೂ ಶುರುವಾಯಿತು.

    ಏಳು ಎಕರೆ ಜಾಗದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಕಟ್ಟಡಗಳಿವೆ. ಕ್ರೀಡಾ ಚಟುವಟಿಕೆಗೆ ವಿಶಾಲ ಮೈದಾನವಿದೆ. ಈ ಶಾಲೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಸರ್ಕಾರಿ, ಅರೆ ಸರ್ಕಾರಿ, ಸ್ವಂತ ಉದ್ಯಮ ಮತ್ತು ವಿದೇಶಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

    ಕೇವಲ ಶಿಕ್ಷಣಕ್ಕ ಮಾತ್ರವಲ್ಲ ಕ್ರೀಡಾಪಟುಗಳನ್ನು, ಕವಿಗಳನ್ನು, ನಾಟಕಕಾರರನ್ನು ಸಮಾಜಕ್ಕೆ ನೀಡಿದ ಹೆಗ್ಗಳಿಕೆ ಈ ಶಾಲೆಗಿದೆ. 1957ರಲ್ಲಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಇದೇ ಗ್ರಾಮದಲ್ಲಿ ಆಯ್ಕೆ ನಡೆದಿತ್ತು.

    ಹಳೆ ಮೈಸೂರು ಸಂಸ್ಥಾನದ ಅವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಆರಂಭವಾದ ಪ್ರಥಮ ಪ್ರೌಢಶಾಲೆ ಇದ್ದಾಗಿದ್ದು, ಬುರುಜಿನರೊಪ್ಪ, ಐಮಂಗಲ, ತಾಳವಟ್ಟಿ, ಚಿಕ್ಕಸಿದ್ದವ್ವನಹಳ್ಳಿ, ಕೋವೇರಹಟ್ಟಿ, ಪಾಲವ್ವನಹಳ್ಳಿ, ಬಸಪ್ಪನಮಾಳಿಗೆ, ಬಂಡ್ಲಾರಹಟ್ಟಿ ಅಲ್ಲದೇ ಸುತ್ತಲಿನ ಗ್ರಾಮಗಳು ಹಾಗೂ ಬೇರೆ ಜಿಲ್ಲೆಗಳಿಂದ ಕೂಡ ಮಕ್ಕಳು ಇಲ್ಲಿಗೆ ವಿದ್ಯಾಭ್ಯಾಸಕ್ಕೆ ಬರುತ್ತಿದ್ದರು.

    ಪರ ಊರಿನ ಮಕ್ಕಳಿಗೆ ದಾಸೋಹ
    ಹೊರ ಊರುಗಳಿಂದ ಬಂದ ವಿದ್ಯಾರ್ಥಿಗಳಿಗೆ ಗ್ರಾಮಸ್ಥರು ತಮ್ಮ ಮನೆಗಳಲ್ಲಿ ಅಡುಗೆ ಮಾಡಿ ಬಡಿಸುತ್ತಿದ್ದರು ಎಂದು ಹಳೆ ವಿದ್ಯಾರ್ಥಿಗಳು ಈಗಲೂ ಸ್ಮರಿಸಿಕೊಳ್ಳುತ್ತಾರೆ.

    ಸುವರ್ಣ ಮಹೋತ್ಸವ
    ಎಸ್.ಆರ್.ಲಕ್ಷ್ಮೀಕಾಂತರೆಡ್ಡಿ ನೇತೃತ್ವದಲ್ಲಿ 1998ರಲ್ಲಿ ಸಮಿತಿ ರಚಿಸಿ ಸುವರ್ಣ ಮಹೋತ್ಸವವನ್ನು ಆಚರಿಸಲಾಗಿತ್ತು. ಹಳೇ ವಿದ್ಯಾರ್ಥಿಸಂಘ: 2000-2021ರ ಅವಧಿಯಲ್ಲಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಸಂಘಟಿತರಾಗಿ ಹಳೇ ವಿದ್ಯಾರ್ಥಿಗಳ ಸಂಘ ರಚಿಸಿಕೊಂಡು 2006ರಲ್ಲಿ ಶಾಲೆಯನ್ನು ದತ್ತು ಪಡೆದು ಮೂಲ ಸೌಕರ್ಯಗಳನ್ನು ಕಲ್ಪಿಸಿತು. ಡಿಜಿಟಲ್ ಗ್ರಂಥಾಲಯ, ಸೋಲಾರ್ ಲೈಟ್, ಸೋಲಾರ್ ಇನ್ ವರ್ಟರ್, ದೂರದರ್ಶನದ ಮೂಲಕ ಪಾಠದ ವ್ಯವಸ್ಥೆ ಮಾಡಿ ಮಕ್ಕಳಿಗೆ ಶಿಕ್ಷಣ ಕೊಡಲಾಗುತ್ತಿದೆ. ವಿಜ್ಞಾನ, ಗಣಿತ, ಭಾಷಾ ಪ್ರಯೋಗಾಲಯ,ವಿಜ್ಞಾನ ಉದ್ಯಾನವನ ಸೇರಿ ಇನ್ನೂ ಹಲವು ಯೋಜನೆಗಳನ್ನು ಹಾಕಿಕೊಂಡು ಅದರಂತೆ ಕೆಲಸ ಮಾಡಲು ಮುಂದಾಗಿದ್ದಾರೆ. 10ನೇ ತರಗತಿಯಲ್ಲಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ಮಕ್ಕಳಿಗೆ, ಹಿರಿಯ ವಿದ್ಯಾರ್ಥಿಗಳು ಪ್ರತಿ ವರ್ಷ ಪ್ರಶಸ್ತಿ ಕೊಡುತ್ತಿದ್ದಾರೆ. ಶಾಲಾಭಿವೃದ್ಧಿಗೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕೂಡ ಅನುದಾನ ನೀಡಿದ್ದಾರೆ.

    ವಿವಿಧ ವಿಷಯಗಳ ಗೋಷ್ಠಿಗಳು
    ಶತಮಾನೋತ್ಸವ ಕಾರ್ಯಕ್ರಮವನ್ನು ಫೆ.11ರ ಬೆಳಗ್ಗೆ 10ಕ್ಕೆ ಆಯೋಜಿಸಿದ್ದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಉದ್ಘಾಟಿಸುವರು. ಶಿಕ್ಷಣ ಸಚಿವ ಬಿ.ಸಿ.ನಾಗೇಶ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಇತರರು ಭಾಗವಹಿಸಲಿದ್ದು, ಶಾಸಕಿ ಪೂರ್ಣಿಮಾ ಶ್ರೀನಿವಾಸ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 2.30ರಿಂದ ಗ್ರಾಮೀಣ ಸವಾಲುಗಳು-ಪರಿಹಾರಗಳು, ಮಕ್ಕಳ ಶೈಕ್ಷಣಿಕ ಅಭಿವೃದ್ಧಿ-ಶಿಕ್ಷಕರ ಮತ್ತು ಪಾಲಕರ ಪಾತ್ರ, 12ರ ಬೆಳಗ್ಗೆ 10ರಿಂದ ಪಶುಸಂಗೋಪನೆ-ಪೌಷ್ಟಿಕ ಆಹಾರ, ಜಾನುವಾರುಗಳಲ್ಲಿ ಕಂಡುಬರುವ ಸಾಂಕ್ರಾಮಿಕ ರೋಗಗಳು, ಮಾನವನ ಆರೋಗ್ಯ ಪೋಷಣೆಯಲ್ಲಿ ಹಾಲು, ಮೊಟ್ಟೆ , ಮಾಂಸದ ಪಾತ್ರ, ಸಮಗ್ರ ಕೃಷಿ ಕುರಿತು ವಿಚಾರಗೋಷ್ಠಿಗಳು ನಡೆಯಲಿವೆ. ಸಮಾರೋಪದಲ್ಲಿ ಮಾಜಿ ಸಚಿವರಾದ ಎಚ್.ಏಕಾಂತಯ್ಯ, ಡಿ.ಸುಧಾಕರ್ ಇತರರು ಭಾಗವಹಿಸುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts