More

    ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯಿಂದ ಮುಖ್ಯಮಂತ್ರಿಗೆ ಮನವಿ

    ಮಡಿಕೇರಿ:

    ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಲಾಯಿತು. ಈ ವೇಳೆ ಮಾತನಾಡಿದ ಎಐಡಿಎ ಜಿಲ್ಲಾ ಸಹ ಸಂಚಾಲಕಿ ಸ್ವಾತಿ, ರಾಜ್ಯದಲ್ಲಿ ಕಳೆದ ಐದು ವರ್ಷಗಳಿಂದಲೂ ಸಾಕಷ್ಟು ಶೈಕ್ಷಣಿಕ ಸಮಸ್ಯೆಗಳು ವಿದ್ಯಾರ್ಥಿಗಳನ್ನು ಕಾಡುತ್ತಲೇ ಇವೆ. ಇವುಗಳ ವಿರುದ್ಧ ರಾಜ್ಯದ ವಿದ್ಯಾರ್ಥಿಗಳು ಹಾಗೂ ಜನತೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ಸಹ ಅನೇಕ ಹೋರಾಟಗಳನ್ನು ಸಂಘಟಿಸುತ್ತಾ ಬಂದಿದೆ.

    ಎನ್.ಇ.ಪಿ. ಶಿಕ್ಷಣ ನೀತಿಯ ದಿಢೀರ್ ಹೇರಿಕೆಯಿಂದ ಉಂಟಾದ ಗೊಂದಲ ಮತ್ತು ಹಲವು ಸಮಸ್ಯೆಗಳು ವಿದ್ಯಾರ್ಥಿಗಳನ್ನು ಕಾಡುತ್ತಿವೆ. ಶಿಕ್ಷಣವನ್ನು ಸಂಪೂರ್ಣವಾಗಿ ವ್ಯಾಪಾರೀಕರಣ ಮಾಡಲು ಹೊರಟಿದ್ದ ಸರ್ಕಾರದ ವಿರುದ್ಧ ’ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಿ, ಸಾರ್ವಜನಿಕ ಶಿಕ್ಷಣ ಉಳಿಸಿ’ ಎಂಬ ಘೋಷಣೆಯೊಂದಿಗೆ ೩೫ ಲಕ್ಷಕ್ಕೂ ಹೆಚ್ಚು ಸಹಿಗಳನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ ರಾಜ್ಯಾದ್ಯಂತ ೩೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
    ರಾಜ್ಯದ ಜನತೆ ಜನ ವಿರೋಧಿ ನೀತಿಗಳಿಂದ ರೋಸಿಹೋಗಿದ್ದು, ನೂತನ ಸರ್ಕಾರದ ಆಡಳಿತದಿಂದ ಸುಧಾರಣೆಯನ್ನು ಬಯಸುತ್ತಿದ್ದಾರೆ. ಹಾಗೆಯೇ ವಿದ್ಯಾರ್ಥಿ ಸಮುದಾಯವು ಸಹ ಅವರು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಪಠ್ಯಪುಸ್ತಕಗಳಲ್ಲಿ ವೈಜ್ಞಾನಿಕ ಮತ್ತು ಧರ್ಮ ನಿರಪೇಕ್ಷ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ಪಠ್ಯಕ್ರಮ ರೂಪಿಸಬೇಕು ಎಂದರು.

    ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿ ಅಂಜಲಿ ಹಾಗೂ ವಿದ್ಯಾರ್ಥಿಗಳು ಇದ್ದರು.

    ಎಐಡಿಎಸ್‌ಒ ಬೇಡಿಕೆಗಳು
    ೧.ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ಒದಗಿಸಬೇಕು
    ೨.ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಬೇಕು
    ೩.ಪಠ್ಯಕ್ರಮದ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮನಿರಪೇಕ್ಷ ವಾತಾವರಣ ರಕ್ಷಿಸಬೇಕು
    ೪.ವಿದ್ಯಾರ್ಥಿ ವೇತನ ಮತ್ತು ಹಾಸ್ಟೆಲ್ ಸೌಲಭ್ಯಗಳನ್ನು ಖಾತ್ರಿಪಡಿಸಬೇಕು
    ೫.ಎನ್‌ಇಪಿ ೨೦೨೦ ಅಪ್ರಜಾತಾಂತ್ರಿಕ ಹೇರಿಕೆ ಕೈಬಿಡಬೇಕು
    ೬.ಸ್ವಯಂ ಹಣಕಾಸು ಸಂಸ್ಥೆಗಳನ್ನು ನಿಲ್ಲಿಸಿ, ತಾರತಮ್ಯವಿಲ್ಲದೆ ಎಲ್ಲಾ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಬೇಕು
    ೭.ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕು
    ೮.ಅತಿಥಿ ಶಿಕ್ಷಕರ ಹಕ್ಕುಗಳನ್ನು ರಕ್ಷಿಸಬೇಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts