More

    ರಾಜ್ಯದ ಮೇಲೆ ಎಐಸಿಸಿ ನಿಗಾ; ದೌರ್ಬಲ್ಯ ಕಳೆಯಲು ಹೆಣಗಾಟ

    -ಶ್ರೀಕಾಂತ್ ಶೇಷಾದ್ರಿ, ಬೆಂಗಳೂರು

    ಪಂಚರಾಜ್ಯ ಚುನಾವಣೆಯಲ್ಲಿ ಕಳಪೆ ಸಾಧನೆ ಮಾಡಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್, ತನ್ನ ಸ್ಥಿತಿ ಬಗ್ಗೆ ಕಳವಳಗೊಂಡಿದೆ. ಮುಂದೇನು ಮಾಡಬೇಕೆಂದು ತನ್ನ ಹಳೇ ಶೈಲಿಯಲ್ಲಿ ಚಿಂತನ- ಮಂಥನ ನಡೆಸಿದೆ. ಆದರೆ, ಈ ಬಾರಿ ಹಿಂದಿನ ಶೈಲಿಯಲ್ಲಿ ತಿಪ್ಪೇಸಾರಿಸುವ ಬದಲು ಕಾರ್ಯಶೈಲಿ ಬದಲಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ಅವಕಾಶ ಹೊಂದಿರುವ ಕರ್ನಾಟಕದತ್ತ ಪಕ್ಷದ ರಾಷ್ಟ್ರೀಯ ನಾಯಕರ ಗಮನ ಹರಿದಿದೆ.

    ತಪ್ಪುಗಳನ್ನು ಈಗಲೂ ತಿದ್ದಿಕೊಂಡು ಗೆಲುವಿನ ಹಳಿ ಮೇಲೆ ಬಾರದೇ ಇದ್ದರೆ ಪ್ರಪಾತಕ್ಕೆ ಬೀಳಲಿದ್ದೇವೆ. ಹಾಗಾಗಿ ಯಾವುದೇ ಕಾರಣಕ್ಕೂ ಮುಂದೆ ನಡೆಯುವ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಮೈಮರೆಯಬಾರದು. ಅದರಲ್ಲೂ 2022ರ ಮಾರ್ಚ್​ನಲ್ಲಿ ನಡೆಯುವ ಉತ್ತರ ಪ್ರದೇಶ ಹಾಗೂ 2023ರಲ್ಲಿ ನಡೆಯುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅವಕಾಶ ಕಳೆದುಕೊಳ್ಳಬಾರದೆಂದು ನಿರಂತರ ಚರ್ಚೆಗಳು ಎಐಸಿಸಿ ಹಂತದಲ್ಲಿ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ದಕ್ಷಿಣದ 6 ರಾಜ್ಯಗಳ ಪೈಕಿ ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿ ಕಾರಣಕ್ಕೆ ಅಧಿಕಾರದಲ್ಲಿ ಸಣ್ಣ ಪಾಲು ಸಿಗುತ್ತಿದೆ. 234 ಸದಸ್ಯ ಬಲದ ತಮಿಳುನಾಡಿನಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ 18 ಸ್ಥಾನ. ಹೀಗಾಗಿ ಸರ್ಕಾರದಲ್ಲೂ ಪ್ರಾಮುಖ್ಯತೆ ಕಡಿಮೆಯೇ. ಆಂಧ್ರ ಪ್ರದೇಶದಲ್ಲಿ ಶೂನ್ಯ ಸಂಪಾದನೆಯಾಗಿದ್ದು, ತೆಲಂಗಾಣದಲ್ಲಿ ಕೇವಲ 6 ಶಾಸಕರಿದ್ದಾರೆ. ಇತ್ತೀಚಿನ ಚುನಾವಣೆಯಲ್ಲಿ ಕೇರಳದಲ್ಲಿ 21 ಶಾಸಕರು ಗೆದ್ದುಬಂದರೂ ಆ ರಾಜ್ಯದಲ್ಲಿ ಪರಿಣಾಮಕಾರಿ ಮಹತ್ವ ಸಿಕ್ಕಿಲ್ಲ. ಹೀಗಾಗಿ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇರುವುದು ಮತ್ತು ತಕ್ಕಮಟ್ಟಿಗೆ ಪ್ರಭಾವ ಇರುವುದು ಕರ್ನಾಟಕದಲ್ಲಿ ಮಾತ್ರ.

    ಇಲ್ಲೊಂದಿಷ್ಟು ಸಮಸ್ಯೆಗಳೂ ಇದ್ದು, ಅವುಗಳನ್ನು ಈಗಿನಿಂದಲೇ ಪರಿಹರಿಸುವ ಜತೆಗೆ ಪಕ್ಷದ ನಾಯಕರ ಪ್ರತಿ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ ಪಕ್ಷದ ಇಮೇಜ್ ಹೆಚ್ಚಿಸಲು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

    ಬಿಜೆಪಿಯಲ್ಲಿನ ಒಳಜಗಳ, ಸರ್ಕಾರದ ವಿರುದ್ಧದ ಟೀಕೆ ಟಿಪ್ಪಣಿಗಳನ್ನು ಲಾಭ ಮಾಡಿಕೊಳ್ಳಲು ನಿರಂತರ ಪ್ರಯತ್ನ ಮಾಡುವುದು, ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸುವುದನ್ನು ಚುನಾವಣೆವರೆಗೂ ನಿಲ್ಲಿಸದೆ ಇರಲು ಎಐಸಿಸಿ ಸ್ಪಷ್ಟ ಸೂಚನೆ ನೀಡಿದೆ.

    ಒಂದು ಕಡೆ ಜನ ಒಪ್ಪುವ ಕಾರ್ಯ ಮಾಡುವುದು, ಕಷ್ಟಗಳಿಗೆ ಸ್ಪಂದಿಸುವುದು, ಹೋರಾಟದ ಮೂಲಕ ಸದಾ ಸುದ್ದಿಯಲ್ಲಿರುವುದು, ಸಾಮಾಜಿಕ ಜಾಲತಾಣದಲ್ಲಿ ಹಿಡಿತ ಸಾಧಿಸುವುದು, ಭವಿಷ್ಯದ ನಾಯಕರನ್ನು ಎಕ್ಸ್​ಪೋಸ್ ಮಾಡುವುದು ಪಕ್ಷದ ಸದ್ಯದ ಕಾರ್ಯಸೂಚಿಯಾಗಿದೆ.

    ಪಕ್ಷದ ಪರಂಪರಾಗತ ದೌರ್ಬಲ್ಯವಾದ ಚುನಾವಣೆ ಬಂದಾಗಲಷ್ಟೇ ಕ್ರಿಯಾಶೀಲವಾಗುವ ಗುಣವನ್ನು ದೂರ ಮಾಡಲು ರಾಜ್ಯ ಘಟಕವು ಕೇಂದ್ರ ನಾಯಕರ ಅಣತಿಯಂತೆ ಕಾಪೋರೇಟ್ ಮಾರ್ಗದರ್ಶನವನ್ನೂ ಪಡೆದುಕೊಳ್ಳುತ್ತಿರುವುದು ಮಹತ್ವದ ಸಂಗತಿಯಾಗಿದೆ. ವಿವಿಧ ಚುನಾವಣೆಯಲ್ಲಿ ಪಕ್ಷ ಸೋತ ಕೂಡಲೆ ಮನೆ ಸೇರುವುದು ಕೈ ನಾಯಕರ ಚಾಳಿ. ಆ ಮನೋಧರ್ಮ ಬದಲಿಸಿ ಸದಾ ಚಟುವಟಿಕೆಯಲ್ಲಿ ತೊಡಗಿಸುವ ಕೆಲಸ ಎಐಸಿಸಿ ಕಡೆಯಿಂದಲೇ ನಡೆಯುತ್ತಿದೆ.

    ಕರ್ನಾಟಕ ಏಕೆ ಮುಖ್ಯ?

    ಉಳಿದ ರಾಜ್ಯಗಳಿಗೆ ಹೋಲಿಸಿದರೆ ಪಕ್ಷವು ದಕ್ಷಿಣದಲ್ಲಿ ನೆಲೆಯೂರಲು ಕರ್ನಾಟಕ ಸಲೀಸು. ಇಲ್ಲಿ ನಾಯಕರುಗಳಿದ್ದಾರೆ. ಎರಡು, ಮೂರನೇ ಹಂತದ ನಾಯಕರು ಸೃಷ್ಟಿಯಾಗುತ್ತಿದ್ದಾರೆ. ಜತೆಗೆ ದೇಶದ ವಿವಿಧ ರಾಜ್ಯಗಳಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಮಹತ್ವದ ಚುಕ್ಕಾಣಿ ಹಿಡಿಯುವ ಅನಿವಾರ್ಯತೆಯೂ ಇದೆ. ಬಿಜೆಪಿಯ ‘ಕಾಂಗ್ರೆಸ್​ವುುಕ್ತ’ ಪ್ರಯತ್ನ ಚಲಾವಣೆಯಲ್ಲಿದ್ದರೂ ಪಂಜಾಬ್, ಛತ್ತೀಸ್​ಘಡ, ರಾಜಸ್ಥಾನ ಹಾಗೂ ಮತ್ತೆರೆಡು ರಾಜ್ಯದಲ್ಲಿ ಅಧಿಕಾರ ಸಿಕ್ಕಿದೆ. ಮಹಾರಾಷ್ಟ್ರ, ತಮಿಳುನಾಡು ಮೈತ್ರಿಯ ಅಧಿಕಾರದಲ್ಲಿರುವ ದೊಡ್ಡ ರಾಜ್ಯಗಳು. ತನ್ನ ಶಕ್ತಿ ಹೆಚ್ಚಿಸಿಕೊಳ್ಳಬೇಕೆಂದರೆ ತಾನು ಪ್ರಭಾವ ಇರುವ ರಾಜ್ಯಗಳನ್ನು ಕಳೆದುಕೊಳ್ಳುವಂತಿಲ್ಲ. ಹೀಗಾಗಿಯೇ ಕರ್ನಾಟಕದ ಮೇಲೆ ಕೈ ನಾಯಕರು ವಿಶೇಷ ಆಸಕ್ತಿ ವಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts