More

    ಮೊಮ್ಮಗನಿಂದ ಅಜ್ಜನ ತೋಟ ರಕ್ಷಣೆ

    ಬೆಳ್ತಂಗಡಿ: ಕೆದ್ದು ಪ್ರೌಢಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿ ಸಂಶುದ್ದೀನ್ ಎಂಬಾತ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡು ತನ್ನ ಅಜ್ಜನ ತೋಟವನ್ನು ರಕ್ಷಿಸಿ ಬೆಳೆಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾನೆ
    ಸಂಶುದ್ದೀನ್‌ನ ಅಜ್ಜ ದಿ.ಪಲಸ್ಥಡ್ಕ ಸೂಫಿ ಬ್ಯಾರಿ ಒಂದು ಕಾಲದಲ್ಲಿ ಅಳದಂಗಡಿಯಲ್ಲಿ ಮಾವು ಬೆಳೆಗೆ ಪ್ರಸಿದ್ಧರಾಗಿದ್ದರು. ಬಡಗಕಾರಂದೂರು ಶಾಲೆ ಬಳಿಯ ಅವರ ಮಾವಿನ ತೋಪು ಐದು ದಶಕಗಳಕ್ಕಿಂತಲೂ ಹೆಚ್ಚು ಕಾಲ ಹೆಸರು ಮಾಡಿತ್ತು. ಅವರ ಸಾವಿನ ಬಳಿಕ ಮುಂದುವರಿಸುವ ಆಸಕ್ತಿ ಯಾರಿಗೂ ಇರಲಿಲ್ಲ. ಈಗ ಸಂಶುದ್ದೀನ್ ಅಜ್ಜನ ತೋಟ ಬೆಳೆಸುವ ಕನಸು ಹೊಂದಿದ್ದಾನೆ.

    ಸಮರ್ಪಕ ನೀರು, ಗೊಬ್ಬರ, ಔಷಧಗಳ ವ್ಯವಸ್ಥೆಯಿಲ್ಲದಿದ್ದರೂ ನೇಂದ್ರ, ಹೂಬಾಳೆ, ಚೀನಿಕಾಯಿ, ಕುಂಬಳ, ಪಡುವಲಕಾಯಿ, ಮುಳ್ಳುಸೌತೆ, ಹೀರೆಕಾಯಿ, ಅಲಸಂಡೆ, ಅವರೆ ಇತ್ಯಾದಿ ತರಕಾರಿಗಳನ್ನು ಬೆಳೆಸಿ ಮಾರಾಟ ಮಾಡಿ ಕುಟುಂಬಕ್ಕೆ ಆಸರೆಯಾಗಿದ್ದಾನೆ.
    ಜೀನಿಯಾ, ದಾಸವಾಳ, ಗುಲಾಬಿ, ಕೇಪುಳ, ಗುಲಾಬಿ ಮೊದಲಾದ ಹೂ, ಜಂಬುನೇರಳೆ, ಗಜಲಿಂಬೆ, ಚಕ್ಕೋತ, ರಂಬೂಟಾನ್. ಲಕ್ಷ್ಮಣಫಲ, ರಾಮಫಲ, ಪೇರಳೆ, ಚಿಕ್ಕು ಮೊದಲಾದ ಹಣ್ಣಿನ ಗಿಡಗಳು, ಔಷಧ ಗುಣವುಳ್ಳ ಸಸ್ಯಗಳನ್ನು ಬೆಳೆದಿದ್ದಾನೆ.

    ಬಡ ಕುಟುಂಬದ ಬಾಲಕ
    ಸಂಶುದ್ದೀನ್ ಮನೆಯಲ್ಲಿ ಅಜ್ಜಿ, ತಾಯಿ ಹಾಗೂ ಅಕ್ಕ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದಾರೆ. ಬಾಲಕನೂ ದಿನವಿಡೀ ಅಡಕೆ ಸುಲಿದು ಕುಟುಂಬಕ್ಕೆ ನೆರವಾಗುತ್ತಿದ್ದಾನೆ. ಈ ಕಷ್ಟದ ದಿನಗಳಲ್ಲೂ ಅಜ್ಜನ ತೋಟವನ್ನು ಉಳಿಸಬೇಕು ಎಂಬ ಗುರಿ ಆತನದ್ದು. ಅಜ್ಜ ನೆಟ್ಟಿರುವ ಒಂದು ಎಕರೆ ಮಾವಿನ ತೋಟದಲ್ಲಿ ಜಾಂಗೀರು, ಬಾದಾಮಿ, ನೀಲಂ, ತೋತಾಪುರಿ, ಮುಂಡಪ್ಪ, ಕಾಲಪ್ಪಾಡಿ, ಬದ್ಯಾರು ತಳಿಯ ಬೃಹತ್ ಮಾವಿನ ವೃಕ್ಷಗಳು ಕಾಣಸಿಗುತ್ತವೆ.

    ನಾನು ಅಜ್ಜನನ್ನು ನೋಡಿಲ್ಲ. ಆದರೆ ಅವರ ಕೃಷಿ ಸಾಧನೆಗಳನ್ನು ಅಜ್ಜಿ ಹಾಗೂ ನೆರೆಹೊರೆಯವರಿಂದ ಕೇಳಿ ತಿಳಿದುಕೊಂಡಿದ್ದೇನೆ. ಸುಮಾರು ಒಂದು ಲಕ್ಷದಷ್ಟು ಕಿರಿಣಿ ಗಿಡಗಳ ನರ್ಸರಿ ಮಾಡಬೇಕೆಂಬ ಆಸೆ ಇದೆ. ನಾನು ವಿದ್ಯಾಭ್ಯಾಸದ ಜತೆಗೆ ಇರುವ ತೋಟವನ್ನು ಉಳಿಸಲು ಶ್ರಮಿಸುತ್ತಿದ್ದೇನೆ.
    ಸಂಶುದ್ದೀನ್, ಕೃಷಿಯಲ್ಲಿ ಆಸಕ್ತ ಬಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts