More

    ಗೊಬ್ಬರಕ್ಕೆ ಕೃಷಿಕರ ಪರದಾಟ, ಭತ್ತ ಕೃಷಿ ಚಟುವಟಿಕೆ ಬಿರುಸು, ಯಾಂತ್ರೀಕೃತ ಬೇಸಾಯಕ್ಕೆ ಒಲವು

    ಪಡುಬಿದ್ರಿ: ಕಾಪು ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ ಬೆಳೆಯುವ ಪ್ರದೇಶ ಹೆಚ್ಚಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಸಾವಯವ ಗೊಬ್ಬರ ಲಭ್ಯವಿಲ್ಲದೆ ಕೃಷಿಕರಿಗೆ ತೊಂದರೆಯಾಗಿದೆ.

    ಏಪ್ರಿಲ್‌ನಲ್ಲಿ ಗೊಬ್ಬರ ಸರಬರಾಜು ಆಗಬೇಕಾಗಿತ್ತಾದ್ದರೂ, ಪೂರೈಕೆಯಾಗಿಲ್ಲ. ಕಾಪು ಹೋಬಳಿಯಲ್ಲಿ ಕಳೆದ ವರ್ಷ 103 ಟನ್ ಸಾವಯವ ಗೊಬ್ಬರ ಮಾರಾಟವಾಗಿತ್ತು. ಈ ವರ್ಷವೂ ಕೃಷಿಕರಿಂದ ಬೇಡಿಕೆ ಬಂದಿದ್ದು ಗೊಬ್ಬರ ಸಿಗದೆ ಪರದಾಡುವಂತಾಗಿದೆ.

    ಕಾಪು ತಾಲೂಕಿನ ವಿವಿಧೆಡೆ ಯಾಂತ್ರೀಕೃತ ಉಳುಮೆ ಮೂಲಕ ಕೃಷಿ ಚಟುವಟಿಕೆ ಬಿರುಸು ಪಡೆದಿದೆ. ರೈತರು ಗದ್ದೆ ಹದಗೊಳಿಸಿ ಬಿತ್ತನೆಯಲ್ಲಿ ತೊಡಗಿಕೊಂಡಿದ್ದಾರೆ. ತಾಲೂಕಿನಲ್ಲಿ ಕಳೆದ ಮುಂಗಾರಿನಲ್ಲಿ 3,116 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಈ ವರ್ಷ ಅದು 3150 ಹೆಕ್ಟೇರ್‌ಗೆ ವಿಸ್ತರಣೆಯಾಗುವ ನಿರೀಕ್ಷೆಯಿದೆ.

    ಕಾಪು ತಾಲೂಕು (ಹೋಬಳಿ) ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ 30 ಗ್ರಾಮಗಳಲ್ಲಿ ಕಳೆದ ವರ್ಷ ಅಂದಾಜು 1,24,640 ಕ್ವಿಂಟಾಲ್ ಇಳುವರಿ ಬಂದಿತ್ತು. ಈ ಬಾರಿ ಕೃಷಿ ಭೂಮಿ ಹೆಚ್ಚಳವಾಗಿದ್ದರಿಂದ ಇಳುವರಿಯೂ ಏರಿಕೆಯಾಗಲಿದೆ. ಕರ್ನಾಟಕ ಬೀಜ ನಿಗಮದ ಮೂಲಕ ಕಾಪು ರೈತ ಸಂಪರ್ಕ ಕೇಂದ್ರಕ್ಕೆ 350 ಕ್ವಿಂಟಾಲ್ ಎಂಒ4, 20 ಕ್ವಿಂಟಾಲ್ ಜ್ಯೋತಿ ಬೀಜ ಬಂದಿದೆ. ಸರಬರಾಜಾದ ಎಂಒ4 ಬಿತ್ತನೆ ಬೀಜ ಹಾಗೂ 17 ಕ್ವಿಂಟಾಲ್ ಜ್ಯೋತಿ ಬೀಜ ರೈತರಿಗೆ ವಿತರಿಸಲಾಗಿದೆ. ಎಂಒ4ಗೆ ಹೆಚ್ಚಿನ ರೈತರಿಂದ ಬೇಡಿಕೆ ಬಂದಿದೆ.

    ಹೆಚ್ಚಿದ ಯಾಂತ್ರೀಕೃತ ಕೃಷಿ ಪದ್ಧತಿ: ಕಾಪು ತಾಲೂಕಾದ್ಯಂತ ಭತ್ತ ಕೃಷಿಕರ ಉತ್ಸಾಹ ಹೆಚ್ಚುತ್ತಿದೆ. ಉಡುಪಿ ಜಿಲ್ಲೆಯ ಇತರ ಹೋಬಳಿಗಳಿಗೆ ಹೋಲಿಸಿದರೆ ಕಾಪು ತಾಲೂಕಿನಲ್ಲಿ ಸಾಂಪ್ರದಾಯಿಕ ಭತ್ತ ಕೃಷಿಯೇ ಹೆಚ್ಚಾಗಿ ನಡೆಯುತ್ತಿತ್ತು. ಈ ಬಾರಿ ಪರಿಸ್ಥಿತಿ ಭಿನ್ನವಾಗಿದ್ದು, ಭತ್ತ ಕೃಷಿಯಲ್ಲಿನ ಸಮಸ್ಯೆ, ಕಾರ್ಮಿಕರ ಕೊರತೆ, ದುಬಾರಿ ಕೂಲಿ ಮತ್ತಿತರ ಕಾರಣಗಳಿಂದ ಸಾಂಪ್ರದಾಯಿಕ ವಿಧಾನದಿಂದ ಯಾಂತ್ರೀಕೃತ ಪದ್ಧತಿ ಬಳಕೆ ಹೆಚ್ಚು ಕಂಡುಬರುತ್ತಿದೆ.

    15 ಕ್ವಿಂಟಾಲ್ ಎಂಒ4 ಬಿತ್ತನೆ ಬೀಜಕ್ಕೆ ಬೇಡಿಕೆಯಿದೆ. ಸಾವಯವ ಗೊಬ್ಬರ ಪೂರೈಕೆಗೂ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಈ ವರ್ಷ ಕಾಪು ಹೋಬಳಿಯಲ್ಲಿ ಹೆಚ್ಚಿನ ರೈತರು ಭತ್ತ ಬೆಳೆಯಲು ಒಲವು ತೋರಿದ್ದಾರೆ. ಕೋವಿಡ್ -19 ಕಾರಣದಿಂದ ಹೆಚ್ಚಿನ ಕಡೆ ಜನ ಮನೆಯಲ್ಲೇ ಉಳಿದಿದ್ದು, ಇದರಿಂದ 30 ಹೆಕ್ಟೇರ್‌ಗಿಂತಲೂ ಹೆಚ್ಚು ಜಾಗದಲ್ಲಿ ಹೆಚ್ಚುವರಿ ಭತ್ತ ಬೆಳೆಯುವ ನಿರೀಕ್ಷೆಯಿದೆ. ಕೆಲವು ಕಡೆ ಯುವಕರು ಹಡೀಲು ಗದ್ದೆಗಳಲ್ಲಿ ಭತ್ತದ ಕೃಷಿ ನಡೆಸಲು ಚಿಂತನೆ ನಡೆಸುತ್ತಿದ್ದು, ಇದರಿಂದ ಬೀಜಕ್ಕೆ ಬೇಡಿಕೆಯೂ ಜಾಸ್ತಿಯಾಗಿದೆ.
    ಪುಷ್ಪಲತಾ, ಕಾಪು ತಾಲೂಕು ಕೃಷಿ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts