More

    ಕೃಷಿ-ತೋಟಗಾರಿಕೆ ಮೇಳಕ್ಕೂ ಬರದ ಬಿಸಿ: ರದ್ದಾಯ್ತು ಮೇಳ

    ಶಿವಮೊಗ್ಗ: ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಯಿಂದ ಏರ್ಪಡಿಸಲು ಉದ್ದೇಶಿಸಲಾಗಿದ್ದ ಕೃಷಿ ಹಾಗೂ ತೋಟಗಾರಿಕೆ ಮೇಳಕ್ಕೆ ಬರದ ಬಿಸಿ ಮುಟ್ಟಿದೆ. ಇದೇ ಕಾರಣದಿಂದ ಈ ವರ್ಷ ಕೃಷಿ ಮೇಳ ಆಯೋಜಿಸದಿರಲು ನಿರ್ಧರಿಸಲಾಗಿದೆ.

    ಹಲವು ವರ್ಷಗಳಿಂದ ವಿವಿಯ ಕೃಷಿ ಮೇಳ ಸುತ್ತಮುತ್ತಲ ಜಿಲ್ಲೆಗಳ ಕೃಷಿ ಹಾಗೂ ತೋಟಗಾರಿಕೆ ಆಸಕ್ತರಿಗೆ ಜ್ಞಾನ ಪಸರಿಸುವಲ್ಲಿ ತನ್ನದೇ ಪಾತ್ರ ವಹಿಸುತ್ತಿದೆ. ಕಳೆದ ವರ್ಷ ಮೇಳ ಆಯೋಜಿಸಿರಲಿಲ್ಲ. ಹೀಗಾಗಿ ಈ ವರ್ಷ ಮಾರ್ಚ್‌ನಲ್ಲಿ ನಾಲ್ಕು ದಿನಗಳ ಮೇಳ ನಡೆಸಲಾಗಿತ್ತು. 2023ನೇ ಸಾಲಿನ ಬಾಬ್ತು ಅ.27ರಿಂದ 29ರವರೆಗೆ ಕೃಷಿ ಹಾಗೂ ತೋಟಗಾರಿಕೆ ಮೇಳ ನಡೆಸಲು ನವುಲೆ ಕ್ಯಾಂಪಸ್‌ನಲ್ಲಿ ವ್ಯವಸ್ಥೆ ಆರಂಭಿಸಲಾಗಿತ್ತು.
    ಆದರೆ ಬರದ ಕರಿಛಾಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ಮೇಳ ಆಯೋಜಿಸುವ ಬದಲು ನಿರಂತರವಾಗಿ ನೀರಿನ ಸದ್ಬಳಕೆ ಕುರಿತು ವಿವಿಧೆಡೆ ಕಾರ್ಯಾಗಾರ ಆಯೋಜಿಸಲು ತೀರ್ಮಾನಿಸಲಾಗಿದೆ. ಬರದ ನಿರ್ವಹಣೆಯನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡುವುದು ಹೇಗೆ ಎಂಬ ಬಗ್ಗೆ ರೈತರಲ್ಲಿ ಅರಿವು ಮೂಡಿಸಲಾಗುತ್ತದೆ.
    ಮುಂಗಾರು ಕೈಕೊಟ್ಟಿರುವುದರಿಂದ ರೈತರು ಅಪಾರ ನಷ್ಟದ ಭೀತಿಯಲ್ಲಿದ್ದಾರೆ. ಇನ್ನೊಂದೆಡೆ ಕೃಷಿ ಮೇಳದ ಆಯೋಜನೆಗೆ ತಗುಲುವ ವೆಚ್ಚವೂ ಅಧಿಕ. ಸಕಾಲಕ್ಕೆ ಸರ್ಕಾರದಿಂದ ಹಣ ಬಿಡುಗಡೆಯಾಗುವ ಭರವಸೆಯೂ ಇಲ್ಲ. ಹೀಗಾಗಿ ಅನಗತ್ಯ ತೊಂದರೆ ತೆಗೆದುಕೊಳ್ಳಲು ವಿವಿಯ ಉನ್ನತ ಮಟ್ಟದಲ್ಲಿರುವವರು ಸಿದ್ಧರಿಲ್ಲ. ಒಂದು ವೇಳೆ ಮೇಳ ಆಯೋಜನೆಗೊಂಡರೆ ಈ ವರ್ಷ ರೈತರಿಂದ ಸಕಾರಾತ್ಮಕ ಸ್ಪಂದನೆ ದೊರೆಯುವುದೂ ಕಷ್ಟ.
    ಈ ಎಲ್ಲವನ್ನೂ ಅಳೆದುತೂಗಿ ವಿವಿ ಅಂತಿಮ ನಿರ್ಧಾರಕ್ಕೆ ಬಂದಿದೆ. ಸದ್ಯಕ್ಕೆ ಕೃಷಿ ಮೇಳ ಆಯೋಜನೆಯನ್ನು ಕೈ ಬಿಡಲಾಗಿದೆ. ಈ ಯೋಚನೆ ಏನಿದ್ದರೂ ಇನ್ನೊಂದು ವರ್ಷದ ಬಳಿಕವೇ. ಅದೂ ಅಂದಿನ ಸ್ಥಿತಿಗತಿ ಆಧರಿಸಿ. ಈ ನಡುವೆ ಕೃಷಿ ಹಾಗೂ ತೋಟಗಾರಿಕೆ ಮೇಳದಲ್ಲಿ ವಿವಿ ವ್ಯಾಪ್ತಿಯ ತಾಲೂಕುಗಳ ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರದಲ್ಲಿ ಸಾಧಕ ರೈತ ಹಾಗೂ ರೈತ ಮಹಿಳೆಯರನ್ನು ಸನ್ಮಾನಿಸಲು ತೀರ್ಮಾನಿಸಲಾಗಿತ್ತು. ಅದಕ್ಕಾಗಿ ಅರ್ಜಿಯನ್ನೂ ಆಹ್ವಾನಿಸಲಾಗಿತ್ತು. ಇವರಿಗೆ ಪ್ರಶಸ್ತಿ ಪ್ರದಾನ ಮಾಡುವ ಬಗ್ಗೆ ವಿವಿಯಿಂದ ಇನ್ನೂ ಯಾವುದೇ ನಿರ್ಧಾರ ಹೊರಬಿದ್ದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts