More

    ಕೃಷಿ ಚಟುವಟಿಕೆ ಚುರುಕು

    ಕಕ್ಕೇರಿ: ಪ್ರಸಕ್ತ ವರ್ಷ ಕರೊನಾ ಹಾವಳಿ, ಲಾಕ್‌ಡೌನ್ ತಂದಿಟ್ಟ ಪೀಕಲಾಟ ಕೃಷಿಯನ್ನು ಇನ್ನಿಲ್ಲದಂತೆ ಕಾಡಿವೆ. ಲಾಭವನ್ನೇ ಗಳಿಸದೆ ತರಕಾರಿ, ಹಣ್ಣಿನ ಬೆಳೆಯಲ್ಲಿ ಕೇವಲ ನಷ್ಟವನ್ನೇ ಕಂಡ ರೈತರು ಮುಂಗಾರು ಹಂಗಾಮಿನ ಬಿತ್ತನೆಗೆ ಎದುರು ನೋಡುತ್ತಿದ್ದರೆ ಕೃಷಿ ಕ್ಷೇತ್ರವನ್ನೇ ಪರೋಕ್ಷವಾಗಿ ಅವಲಂಬಿಸಿರುವ ಕಮ್ಮಾರರು, ಬಡಿಗತನ ವೃತ್ತಿಯವರು ಕೊಂಚ ಸಾವರಿಸಿಕೊಳ್ಳುತ್ತಿದ್ದಾರೆ. ಕೃಷಿಕರು ಒಕ್ಕಲುತನ ಸಂಬಂಧಿತ ಉಪಕರಣಗಳ ತಯಾರಿಗಾಗಿ ಬರಲಾರಂಭಿಸಿರುವುದು ಕುಶಲಕರ್ಮಿಗಳಲ್ಲಿ ಮಂದಹಾಸ ಮೂಡಿಸಿದೆ.

    ನಿರೀಕ್ಷೆ ಮೂಡಿಸಿದ ಮಳೆ: ಈ ಬಾರಿ ಮುಂಗಾರು ಮಳೆ ರೈತರಿಗೆ ಉತ್ಸಾಹ ತಂದರೆ, ಕೃಷಿ ಸಲಕರಣೆಗಳನ್ನು ತಯಾರಿಸುವ ಕಮ್ಮಾರರು, ಬಡಿಗತನ ವೃತ್ತಿಯವರು ಹರ್ಷಗೊಂಡಿದ್ದಾರೆ. ಇದರಿಂದಾಗಿ ಕೃಷಿಪೂರಕ ಚಟುವಟಿಕೆಗಳಿಗೆ ಮರುಜೀವ ಬಂದಂತಾಗಿದ್ದು, ಕೃಷಿಗೆ ಬೇಕಾದ ಉಪಕರಣಗಳನ್ನು ಸಿದ್ಧಪಡಿಸುವುದು, ದುರಸ್ತಿ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಕಮ್ಮಾರ ಸಾಲಿ ಹಾಗೂ ಬಡಿಗೇರ ಮನೆ ತುಂಬ ರೈತರ ಮಾತುಗಳೇ ಕೇಳಿಬರುತ್ತಿವೆ. ಮಳೆ, ಬೆಳೆ ಕುರಿತು ವಿಚಾರ ವಿನಿಮಯ ನಡೆಯುತ್ತಿದೆ. ಬೀಜ-ಗೊಬ್ಬರ, ಎಡೆ ಹೊಡೆಯುವ ಚಿಂತೆ, ಆಳು-ಕಾಳಿನ ಮಾತುಗಳು ಕಕ್ಕೇರಿ ಸುತ್ತಮುತ್ತಲಿನ ಚಾವಡಿ ಕಟ್ಟೆಯಲ್ಲಿ ಸಾಮಾನ್ಯವಾಗಿವೆ.

    ಪರಿಕರ ತಯಾರಿ, ದುರಸ್ತಿ ಜೋರು: ಮುಂಗಾರು ಮಳೆ ಕೈಹಿಡಿಯುತ್ತಿದೆ ಎಂಬ ಆಸೆಯಿಂದ ಕೃಷಿ ಚಟುವಟಿಕೆ ಪುನರಾರಂಭಗೊಂಡಿದ್ದು, ಹೊಲ ಉಳುಮೆ ಮಾಡಲು ಬೇಕಾಗುವ ರೆಂಟೆ, ಕುಂಟೆ, ಕೊಡ್ಡ, ಬಿತ್ತನೆಯ ಕೂರಿಗೆ, ಹುಟಗುಂಟಿ ತಯಾರಿ ಕೆಲಸದಲ್ಲಿ ಬಡಿಗರು ತೊಡಗಿದ್ದಾರೆ. ಅದಕ್ಕೆ ಬೇಕಾಗುವ ಕಬ್ಬಿಣದ ಪರಿಕರಗಳನ್ನು ಹರಿತಗೊಳಿಸುವ ಕಾರ್ಯದಲ್ಲಿ ಕಮ್ಮಾರರು ನಿರತರಾಗಿದ್ದಾರೆ. ರೈತರು ದುರಸ್ತಿಗೆ ಬಂದ ತಮ್ಮ ಕೃಷಿ ಪರಿಕರ ಹೊತ್ತು ಕಮ್ಮಾರ ಸಾಲಿ ಹಾಗೂ ಬಡಿಗೇರ ಮನೆಗಳ ಕಡೆಗೆ ಹೆಜ್ಜೆ ಇಡುತ್ತಿದ್ದಾರೆ.

    ಭತ್ತ ಬಿತ್ತನೆಗೆ ಸಕಲ ಸಿದ್ಧತೆ: ಮಲೆನಾಡು ಭಾಗದ ಕಕ್ಕೇರಿ, ಬೀಡಿ, ಮುಗಳಿಹಾಳ, ಗುಂಡೇನಟ್ಟಿ, ಗೋಲಿಹಳ್ಳಿ, ಬೂರಣಕಿ, ಕರಿಕಟ್ಟಿ, ಚುಂಚವಾಡ, ಲಿಂಗನಮಠ, ಗೋದಳ್ಳಿ, ರಾಮಾಪುರ, ಸುರಪುರ, ಕೆರವಾಡ, ಘಷ್ಟೋಳ್ಳಿ ಮುಂತಾದೆಡೆ ಭತ್ತ ಮತ್ತು ಕಬ್ಬು ಪ್ರಮುಖ ಬೆಳೆಗಳು. ಭತ್ತ ಬಿತ್ತನೆಗೆ ಬೇಕಾಗುವ ಸಲಕರಣೆಗಳನ್ನು ತಯಾರಿಸಿಕೊಂಡ ರೈತರು, ಈಗ ರೈತ ಸಂಪರ್ಕ ಕೇಂದ್ರದಿಂದ ವಿವಿಧ ಬಿತ್ತನೆ ಬೀಜಗಳನ್ನು ಖರೀದಿಸಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹದಗೊಂಡ ಹೊಲದಲ್ಲಿ ಕೂರಿಗೆ ಸದ್ದು ಕೇಳುತ್ತಿದ್ದರೆ, ಕೆಲವೆಡೆ ಇನ್ನೂ ಜಮೀನು ಹದಗೊಳಿಸುವ ಪ್ರಕ್ರಿಯೆಯಲ್ಲಿ ರೈತರು ತೊಡಗಿದ್ದಾರೆ.

    ಕಕ್ಕೇರಿ ಗ್ರಾಮದಲ್ಲಿ ಬಹಳ ವರ್ಷದಿಂದ ಬಡಗಿ ಕೆಲಸ ಮಾಡುವ ರಾಯಪ್ಪ ಕಮ್ಮಾರ ತಮ್ಮ ಇಳಿ ವಯಸ್ಸಿನಲ್ಲಿಯೂ ಹುಮ್ಮಸ್ಸಿನಿಂದ ರೈತರ ಉಪಕರಣ ತಯಾರಿ ಮಾಡಿಕೊಡುತ್ತಿದ್ದಾರೆ. ಅದಕ್ಕೆ ಬದಲಾಗಿ ಹಲವರು ದುಡ್ಡು ಕೊಟ್ಟರೆ ಇನ್ನುಳಿದವರು ಕಾಳು-ಕಡಿ ಕೊಡುತ್ತಾರೆ. ತಮ್ಮ ಉಪಜೀವನಕ್ಕೆ ಅದೇ ಆಧಾರ ಎನ್ನುತ್ತಾರೆ ರಾಯಪ್ಪ. ಬದಲಾದ ಕಾಲಘಟ್ಟದಲ್ಲಿ ಕಮ್ಮಾರರು ತಮ್ಮ ಕೌಶಲದಿಂದ ಬೇರೆ ಬೇರೆ ಉದ್ಯೋಗ ಕಂಡುಕೊಳ್ಳುತ್ತಿದ್ದಾರಾದರೂ ರೈತರಿಗೆ ಬಡಿಗ, ಕಮ್ಮಾರರ ಅವಶ್ಯಕತೆ ಇದ್ದೇ ಇದೆ. ಹಾಗಾಗಿ ಕೃಷಿ ಪೂರಕ ಚಟುವಟಿಕೆಗಳಲ್ಲಿ ಗ್ರಾಮೀಣ ಭಾಗದ ಒಬ್ಬರಿಗೊಬ್ಬರು ಸಹಕಾರದಿಂದ ಜೀವನ ನಡೆಸುತ್ತ ಸಾಗಿದ್ದಾರೆ.

    ಕಕ್ಕೇರಿ ಗ್ರಾಮದ ರೈತರಾದ ಸದಾನಂದ ಪಾರಿಶ್ವಾಡ, ಬಸವರಾಜ ಕೊಪ್ಪದ, ಅರ್ಜುನ ಮುನವಳ್ಳಿ, ರಮೇಶ ತಾರಿಹಾಳ, ಸಂಜು ಮುನವಳ್ಳಿ, ಸುಭಾಸ ಕುರುಬರ, ಈರಣ್ಣ ಜುಲೈ, ರಾಜು ಹುಬ್ಬಳ್ಳಿ ಮುಂತಾದವರು ಉತ್ತಮ ಮಳೆ ಸುರಿದ್ದಿದರಿಂದ ಭತ್ತ ಬಿತ್ತನೆ ಕಾರ್ಯಕ್ಕೆ, ಕಬ್ಬು ಬೆಳೆಗೆ ಗೊಬ್ಬರ ಹಾಕಲು ಉತ್ತಮ ಸಮಯ ದೊರೆಯಲಿದೆ ಎನ್ನುತ್ತಾರೆ.

    ಬೀಡಿ ಹೋಬಳಿ ಮಟ್ಟದ ಕೃಷಿ ಇಲಾಖೆಯಿಂದ ಭತ್ತ ಬಿತ್ತನೆ ಕ್ಷೇತ್ರ 5000 ಹೆಕ್ಟೇರ್, 6000 ಹೆಕ್ಟೇರ್ ಕಬ್ಬು , 1020 ಹೆಕ್ಟೇರ್ ಗೋವಿನ ಜೋಳ, 50 ಹೆಕ್ಟೇರ್ ಶೇಂಗಾ, 10 ಹೆಕ್ಟೇರ್ ಹತ್ತಿ ಬೆಳೆಯಲು ಬಿತ್ತನೆ ಬೀಜ ಪೂರೈಸಲಾಗಿದೆ. ರೈತರಿಗೆ ರಿಯಾಯಿತಿ ದರದಲ್ಲಿ 30 ರೋಟೋವೇಟರ್, 10 ಟ್ರಾೃಕ್ಟರ್ ನೇಗಿಲು, 10 ಕಲ್ಟಿವೇಟರ್, 5 ಪವರ್ ಟಿಲ್ಲರ್ ಹಾಗೂ ವಿವಿಧ ಕೀಟನಾಶಕ, ತಾಡಪತ್ರಿಗಳನ್ನು ಕೃಷಿ ಇಲಾಖೆಯಿಂದ ನೀಡುತ್ತಿದ್ದೇವೆ.
    | ರವಿ ಕೋಲಕಾರ ಸಹಾಯಕ ಕೃಷಿ ಅಧಿಕಾರಿ, ಬೀಡಿ

    | ಕಿಶೋರ ಮಿಠಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts