More

    ರಸ್ತೆಯಲ್ಲೇ ಕಣ, ಅವಘಡಕ್ಕೆ ಆಹ್ವಾನ!

    ವಿಜಯವಾಣಿ ವಿಶೇಷ ರಾಣೆಬೆನ್ನೂರ

    ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ- 4ರ ಪಕ್ಕದಲ್ಲಿನ ಹಾಗೂ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಯಾವುದೇ ಸರ್ವೀಸ್ ರಸ್ತೆಗಳಿಗೆ ಹೋದರೂ ಅವು ಈಗ ಕೇವಲ ವಾಹನ ಓಡಾಡುವ ರಸ್ತೆಗಳಾಗಿ ಉಳಿದಿಲ್ಲ. ಒಕ್ಕಲಿಗನ ಕಣಗಳಾಗಿದ್ದು, ವಾಹನ ಸವಾರರ ಜೀವಕ್ಕೆ ಸಂಚಕಾರ ತರುತ್ತಿವೆ.

    ಬಹುತೇಕ ರಸ್ತೆಗಳಲ್ಲಿ ಮೆಕ್ಕೆಜೋಳ, ಶೇಂಗಾ ಹಾಗೂ ಇತರ ಬೆಳೆಗಳ ಒಕ್ಕಲು ಜೋರಾಗಿ ನಡೆಯುತ್ತಿದೆ. ರಸ್ತೆಗಳಲ್ಲಿ ಒಕ್ಕಲು ಮಾಡಬಾರದು ಎಂಬ ನಿಯಮವಿದೆ. ಆದರೂ ರೈತರು ಸರ್ವೀಸ್ ರಸ್ತೆಗಳಲ್ಲಿಯೇ ಬೆಳೆ ಒಕ್ಕಲು ಮಾಡುತ್ತಿದ್ದಾರೆ. ಅವರು ತೂರುವ ವಿವಿಧ ಧಾನ್ಯಗಳ ಹೊಟ್ಟು ಗಾಳಿಯ ಜತೆಗೆ ಹಾರಿ ಹೋಗಿ ಓಡಾಡುವ ಲಾರಿ, ಬಸ್, ಕಾರು, ಬೈಕ್ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಇಲ್ಲಿ ಕೆಲಸ ಮಾಡುವ ರೈತ ಮತ್ತು ಕೂಲಿಯಾಳುಗಳಿಗೂ ಅಪಘಾತ ಸಾಧ್ಯತೆಯ ಅಪಾಯ ಎದುರಿಸಬೇಕಾಗಿದೆ. ಆದರೂ ರೈತರು ರಸ್ತೆಯನ್ನೇ ಕಣವಾಗಿಸಿಕೊಳ್ಳುವುದನ್ನೂ ಮಾತ್ರ ಬಿಟ್ಟಿಲ್ಲ. ದಿನದಿಂದ ದಿನಕ್ಕೆ ರಸ್ತೆ ಉದ್ದಕ್ಕೂ ಒಕ್ಕಲು ಮಾಡುತ್ತಿರುವ ರೈತರ ಸಂಖ್ಯೆ ಹೆಚ್ಚುತ್ತಿದೆ.

    ರಸ್ತೆಯಲ್ಲಿ ಮೆಕ್ಕೆಜೋಳ, ಶೇಂಗಾ ಒಣಹಾಕುವ ರೈತರು ಕಳ್ಳರ ಕಾಟದಿಂದಾಗಿ ಕಾಳು ಕಾಯುವ ಸಲುವಾಗಿ ರಸ್ತೆ ಪಕ್ಕದಲ್ಲಿಯೇ ತಾಡಪತ್ರಿ ಹೊದ್ದುಕೊಂಡು ಮಲಗಿಕೊಳ್ಳುತ್ತಿದ್ದಾರೆ. ವಾಹನ ಸವಾರರಿಗೆ ಅವರ ಇರುವಿಕೆ ತಿಳಿಯದೆ ವಾಹನ ಚಲಾಯಿಸುವುದರಿಂದ ಸಾವು-ನೋವು ಸಂಭವಿಸುವಂತಾಗಿದೆ. 2018ರಲ್ಲಿ ನಗರದ ಹಲಗೇರಿ ರಸ್ತೆಯಲ್ಲಿ ಮೆಕ್ಕೆಜೋಳ ಒಣಹಾಕಿ ಪಕ್ಕದಲ್ಲಿಯೇ ತಾಡಪತ್ರಿ ಹೊದ್ದು ಮಲಗಿದ್ದ ಇಬ್ಬರು ರೈತರ ಮೇಲೆ ಲಾರಿ ಹರಿದು ಮೃತಪಟ್ಟ ಘಟನೆ ಕೂಡ ನಡೆದಿತ್ತು. ಇಂತಹ ದುರ್ಘಟನೆ ನಡೆದರೂ ರೈತರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ.

    ಸೂಕ್ತ ಕ್ರಮ ಅಗತ್ಯ: ರೈತರು ಸರ್ವೀಸ್ ರಸ್ತೆಗಳಲ್ಲಿ ಕಣಗಳನ್ನು ನಿರ್ವಿುಸಿಕೊಂಡು, ರಾತ್ರಿ ಸಮಯದಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಕೆಲವು ಭಾಗದಲ್ಲಿ ಸರ್ವೀಸ್ ರಸ್ತೆಗಳಿಗೆ ಸುರಕ್ಷತಾ ಕಾಂಪೌಂಡ್ ನಿರ್ವಿುಸಲಾಗಿದೆ. ಇನ್ನೂ ಕೆಲವು ಭಾಗದಲ್ಲಿ ಹಾಗೆಯೇ ಬಿಡಲಾಗಿದೆ. ರಾತ್ರಿ ಸಮಯದಲ್ಲಿ ಓಡಾಡುವ ವಾಹನಗಳ ಚಾಲಕರು ನಿಯಂತ್ರಣ ತಪ್ಪಿ ಸರ್ವೀಸ್ ರಸ್ತೆಯಲ್ಲಿ ಬಂದರೆ ಪ್ರಾಣ ಹಾನಿಯಂತಹ ಘಟನೆಗಳು ಸಂಭವಿಸುವುದು ಖಚಿತ. ಆದ್ದರಿಂದ ಪೊಲೀಸ್ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ರೈತರು ರಸ್ತೆಯಲ್ಲಿ ವಾಸ್ತವ್ಯ ಹೂಡುವುದನ್ನು ತಪ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

    ರೈತರು ಸುರಕ್ಷತೆ ದೃಷ್ಟಿಯಿಂದ ವಾಹನಗಳು ಓಡಾಡುವ ರಸ್ತೆ ಮೇಲೆ ಬೆಳೆ ಒಕ್ಕಲು ಮಾಡಬಾರದು. ಈ ಬಗ್ಗೆ ಎಚ್ಚೆತ್ತು ಕಣಗಳನ್ನು ತೆರವುಗೊಳಿಸಬೇಕು. ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುವ ಸ್ಥಳದಲ್ಲಿ ಹಾಕಿರುವ ಕಣಗಳನ್ನು ಸಿಬ್ಬಂದಿಗೆ ಸೂಚಿಸಿ ತೆರವುಗೊಳಿಸಲಾಗುವುದು.

    | ಟಿ.ವಿ. ಸುರೇಶ ಡಿವೈಎಸ್ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts