More

    ಪಾರ್ಶ್ವವಾಯು ಬಾಧೆ ನಡುವೆಯೂ ಉತ್ಸಾಹ, ಎಪ್ಪತ್ತೈದರ ಹರೆಯದಲ್ಲೂ ಕೃಷಿ ಕಾಯಕ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
    ಪಾರ್ಶ್ವವಾಯು ಬದುಕನ್ನೇ ಹಿಂಡಿ ಹಿಪ್ಪೆ ಮಾಡುವ ಕಾಯಿಲೆ. ಅಂತಹುದರಲ್ಲಿ ದೇಹದ ಅರ್ಧಭಾಗ ಸ್ವಾಧೀನ ತಪ್ಪಿ ಹೆಜ್ಜೆ ಕಿತ್ತಿಡಲೂ ಆಗದೆ, ಪರಾಶ್ರಯಕ್ಕೆ ಸಿಕ್ಕ ವ್ಯಕ್ತಿಯ್ಬ್ಬಿರು ಕೃಷಿ ಕಾಯಕ ಮೂಲಕ ಮತ್ತೆ ಬದುಕು ಕಟ್ಟಿಕೊಂಡು ಮಾದರಿಯಾಗಿದ್ದಾರೆ. ಕುಂದಾಪುರ ತಾಲೂಕು ಹೆಮ್ಮಾಡಿ ಉದ್ಯಮಿ ಅಂತೋನಿ ಲೂವಿಸ್ (75) ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸ್ವಾಧೀನ ತಪ್ಪಿದ ದೇಹದ ಅರ್ಧಭಾಗದ ಹಿಡಿತ ಸಾಧಿಸಲು ಸಫಲರಾಗಿದ್ದಾರೆ. ಬೋಳುಗುಡ್ಡ ಸವರಿ ಮಾಡಿದ ಪಪ್ಪಾಯಿ, ರಾಮಫಲ, ಕುಂಜ್ರಿ ತೆಂಗಿನ ಸಸಿಗಳು ಹೇಗೆ ಚಿಗಿತು ಏಳುತ್ತಿವೆಯೋ ಹಾಗೆ ಅಂತೋನಿ ಲೂವಿಸ್ ಆರೋಗ್ಯ ಕೂಡ ಸುಧಾರಿಸುತ್ತಿದೆ.

    ಅಂತೋನಿ ಲೂವಿಸ್ ಕೃಷಿ ಕುಟುಂಬದಿಂದ ಬಂದಿದ್ದು, ಕೃಷಿ ಜೊತೆ ಹೆಮ್ಮಾಡಿಯಲ್ಲಿ ಉದ್ಯಮ ಆರಂಭಿಸಿ ಯಶಸ್ವಿಯಾಗಿದ್ದರು. ಅದರೊಂದಿಗೆ ಭತ್ತ, ತರಕಾರಿ, ಅಡಕೆ ಕೃಷಿ ನಡೆಸಿಕೊಂಡು ಬಂದಿದ್ದರು. ಎಂಟು ತಿಂಗಳ ಹಿಂದೆ ಪಾರ್ಶ್ವವಾಯುವಿಗೆ ಹಾಸಿಗೆ ಹಿಡಿದಿದ್ದು, ತಿಂಗಳುಗಟ್ಟಳೆ ಆಸ್ಪತ್ರೆ ಮಂಚದಲ್ಲಿ ಮಲಗಿದ್ದರು. ಮನೆಗೆ ಬಂದ ನಂತರ ಹಾಸಿಗೆಯಲ್ಲಿಯೇ ದಿನಕಳೆಯುವುದು ಕಷ್ಟವಾದ ಕಾರಣ ಕಟ್‌ಬೇಲ್ತೂರಲ್ಲಿ ಗುಡ್ಡಕಡಿದು ಕೃಷಿ ಮಾಡುವ ನಿರ್ಧಾರಕ್ಕೆ ಬಂದರು.
    ಲೂವಿಸ್ ಮೊದಲು ತನ್ನ ಕಾಲಮೇಲೆ ನಿಲ್ಲುವ ಪ್ರಯತ್ನ ನಡೆಸಿ, ಊರುಗೋಲು ಸಹಕಾರದಲ್ಲಿ ಜಮೀನಿನಲ್ಲಿ ತಿರುಗಾಡುವ ಮೂಲಕ ಸುಧಾರಿಸಿಕೊಂಡರು. ಪಾಳು ಜಾಗದಲ್ಲಿ 450 ಎಳನೀರಿಗಾಗಿ ಬೆಳೆಸುವ ತೆಂಗು, 250 ಹೈಬ್ರೀಡ್ ಪಪ್ಪಾಯಿ, 150 ರಾಮಫಲ ಸಸಿಗಳನ್ನು ನಾಟಿ ಮಾಡಿಸಿದರು. ಪ್ರತಿದಿನ ಸಸಿಗಳ ಆರೈಕೆ ಮಾಡುವ ಕಾಯಕ ಇವರ ದೇಹಕ್ಕೆ ಸಾಕಷ್ಟು ವ್ಯಾಯಾಮ ಒದಗಿಸಿದ್ದು ಆರೋಗ್ಯ ಸುಧಾರಿಸಲು ಕಾರಣ ಎನ್ನೋದು ಲೂವಿಸ್ ಅಭಿಪ್ರಾಯ. ನಾಲ್ಕು ಎಕರೆ ಜಾಗದಲ್ಲಿ ಪಪ್ಪಾಯಿ, ತೆಂಗು, ರಾಮಫಲ ತಲೆ ಎತ್ತಿದ್ದು ಹಾಳು ಕೊಂಪೆಯಂತೆ ಇದ್ದ ಜಾಗ ಹಸಿರಿಂದ ನಳನಳಿಸುತ್ತಿದೆ.

    ಪತ್ನಿ ಹೆಸರಲ್ಲಿ ತೋಟ: ಅಂತೋನಿ ಲೂವಿಸ್ ಪತ್ನಿ ಮಾರ್ಗರೇಟ್ ಲೂವಿಸ್ ವರ್ಷದ ಹಿಂದೆ ಮೃತಪಟ್ಟಿದ್ದರು. ಕೃಷಿ ಒಲವಿದ್ದ ಮಾರ್ಗರೇಟ್ ಮನೆಯೆದುರು ಸುಂದರ ಕೈತೋಟ ಮಾಡಿದ್ದರು. ಕೃಷಿ ಬಗ್ಗೆ ಆಸಕ್ತಿಯಿದ್ದ ಪತ್ನಿ ನೆನಪಿನಲ್ಲಿ ತಮ್ಮ ತೋಟಕ್ಕೆ ಮಾರ್ಗರೇಟ್ ಫಾರ್ಮ್ ಎಂದು ಹೆಸರಿಟ್ಟಿದ್ದಾರೆ. ಬೆಳಗ್ಗೆ ಕಾರು ಚಾಲಕ ಲೂವಿಸ್ ಅವರನ್ನು ತೋಟಕ್ಕೆ ತಂದು ಬಿಟ್ಟುಹೋದರೆ ಉರಿ ಬಿಸಿಲಲ್ಲಿಯೂ ಸಸಿಗಳ ಯೋಗಕ್ಷೇಮಕ್ಕೆ ನಿಲ್ಲುತ್ತಾರೆ. ಲೂವಿಸ್ ಸಾಹಸಕ್ಕೆ ಮಗಳು ನಿರ್ಮಲಾ ಫರ್ನಾಂಡಿಸ್ ಮತ್ತು ಅಳಿಯ ನವೀನ್ ಫರ್ನಾಂಡಿಸ್ ಸಾಥ್ ನೀಡಿದ್ದಾರೆ.

    ಸದಾ ಒಂದಲ್ಲ ಒಂದು ಕೆಲಸದಿಂದ ಲವಲವಿಕೆಯಿಂದ ಇದ್ದ ನನಗೆ ಪಾರ್ಶ್ವವಾಯು ಒಂದೇ ಕಡೆಯಿರುವಂತೆ ಮಾಡಿತು. ಇದರಿಂದ ಹೇಗಾದರೂ ಹೊರಬರಲು ಖಾಲಿ ಜಾಗದಲ್ಲಿ ಏನಾದರೂ ಕೃಷಿ ಮಾಡಬೇಕು ಎಂದು ನಿರ್ಧರಿಸಿದೆ. ಜಾಗ ಸಮತಟ್ಟು ಮಾಡಿ, ತೆಂಗು, ಅಡಕೆ, ಬಾಳೆ, ನುಗ್ಗೆ, ರಾಮಫಲ, ಪಪ್ಪಾಯಿ ನಾಟಿ ಮಾಡಿದೆ. ಗಿಡಗಳೊಟ್ಟಿಗೆ ಒಡನಾಟ, ಕೃಷಿ ಕೆಲಸ ಮಾಡುವ ಮೂಲಕ ಸ್ವಾಧೀನ ತಪ್ಪಿದ ದೇಹದ ಭಾಗದ ಮರಳಿ ಸ್ವಾಧೀನ ಪಡೆಯುವಂತೆ ಆಯಿತು. ಶೇ.80ರಷ್ಟು ದೈಹಿಕ ಆರೋಗ್ಯ ಹೆಚ್ಚಿದ್ದು, ಕೃಷಿಯಲ್ಲೇ ಹೆಚ್ಚು ಸಮಯ ಕಳೆಯುವುದರಿಂದ ಸಂಪೂರ್ಣ ಚೇತರಿಸಿಕೊಳ್ಳುವ ಭರವಸೆ ಇದೆ.
    -ಅಂತೋನಿ ಲೂವಿಸ್, ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts