More

    ಸೇವಂತಿಗೆ ಬೆಳೆಗೆ ರೈತರ ನಿರಾಸಕ್ತಿ, ಜಾತ್ರೆ ನಿಷೇಧದ ಹಿನ್ನೆಲೆ ಬೇಡಿಕೆ ಕುಸಿತ ಭೀತಿ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
    ಕರೊನಾದಿಂದ ಸೇವಂತಿಗೆ ಕೃಷಿ ವಿಸ್ತೀರ್ಣ ಅರ್ಧಕ್ಕೆ ಇಳಿದಿದೆ. ಜಾತ್ರೆ, ಉತ್ಸವ, ಕೋಲಗಳಿಗೆ ಸರ್ಕಾರ ನಿರ್ಬಂಧ ಹೇರಿದ್ದ ಕಾರಣ ಸೇವಂತಿಗೆ ಕೃಷಿ ಮಾಡಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದಾರೆ ಸೇವಂತಿಗೆ ಕೃಷಿಕರು.

    ಕುಂದಾಪುರ ತಾಲೂಕು ಹೆಮ್ಮಾಡಿ ಕಟ್ಟು, ಭಟ್ರಬೆಟ್ಟು, ಗುಡ್ಡಿಮನೆ ಪರಿಸರ, ದೇವಸ್ಥಾನ ವಠಾರ, ಹೊಸಕಳಿ, ಸುಳ್ಸೆ, ಹರೆಗೋಡು, ಹೊರ್ಣಿ ಕಡೆ ಎಕರೆಗಟ್ಟಲೆ ಭೂಮಿಯಲ್ಲಿ ಸೇವಂತಿಗೆ ಕೃಷಿ ಮಾಡಲಾಗುತ್ತಿತ್ತು. ಈ ಬಾರಿ ಬೆರಳೆಣಿಕೆ ರೈತರು ಅಲ್ಪಸ್ವಲ್ಪ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಪ್ರತಿವರ್ಷ ಹೆಮ್ಮಾಡಿ ಬಯಲೆಲ್ಲ ಸೇವಂತಿಗೆ ಬಣ್ಣದಿಂದ ತುಂಬಿರುತ್ತಿತ್ತು. ಈ ಬಾರಿ ಆ ದೃಶ್ಯ ಕಾಣಲು ಸಿಗದು.

    ಪ್ರತಿವರ್ಷ ಸೇವಂತಿಗೆ ಹೂವು ಬೆಳೆದು, ಕೊಯ್ಲು ಆದ ಬಳಿಕ ಗಿಡ ಹಾಗೆಯೇ ಗದ್ದೆಯಲ್ಲಿ ಉಳಿಸಿ ಸಸಿ ಪಡೆದುಕೊಳ್ಳಲಾಗುತ್ತದೆ. ಮಾರ್ಚ್, ಏಪ್ರಿಲ್‌ನಲ್ಲಿ ಹೂವು ಕಡಿಮೆಯಾದ ಬಳಿಕ ಗಿಡಗಳು ಕರಟಿ ಹೋಗುತ್ತವೆ. ಮಳೆಗಾಲದಲ್ಲಿ ಚಿಗುರಿದ ಬಳಿಕ ಕಟಾವು ಮಾಡಿ ಗಿಡ ಪೋಷಿಸುತ್ತಾರೆ. ಈ ಬಾರಿ ಮಧ್ಯದಲ್ಲಿ ಮಳೆ ಕೈಕೊಟ್ಟ ಕಾರಣ ಚಿಗುರಿದ ಗಿಡಗಳು ಕರಟಿವೆ. ಇದರಿಂದ ಹೆಚ್ಚಿನವರಿಗೆ ಗಿಡಗಳ ಕೊರತೆಯೂ ಎದುರಾಗಿದೆ.

    ಹೆಮ್ಮಾಡಿ ಸೇವಂತಿಗೆ ವೈಶಿಷ್ಟೃ: ಬೇರೆಲ್ಲೂ ಕಂಡುಬರದ ವಿಶೇಷ ಪರಿಮಳವಿರುವ ಸೇವಂತಿಗೆ ಹೆಮ್ಮಾಡಿಯಲ್ಲಿ ಮಾತ್ರ ಬೆಳೆಯಲಾಗುತ್ತದೆ. ಆಗಸ್ಟ್ ಕೊನೆಯಲ್ಲಿ ಸೇವಂತಿಗೆ ಕೃಷಿ ಆರಂಭಗೊಂಡರೆ ಜನವರಿ ಆರಂಭದಲ್ಲಿ ಹೂವು ಬಿಡುತ್ತದೆ. ಹೆಮ್ಮಾಡಿ ಸೇವಂತಿಗೆ ಮಾರಣಕಟ್ಟೆ ಬ್ರಹ್ಮಲಿಂಗ ದೇವರಿಗಾಗಿಯೇ ಬೆಳೆಯುತ್ತಾರೆ. ಮಕರ ಸಂಕ್ರಮಣ ಜಾತ್ರೆಯಲ್ಲಿ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವರಿಗೆ ಅರ್ಪಿಸಿದ ನಂತರ ರಾಜ್ಯದ ವಿವಿಧೆಡೆಗಳಿಗೆ ಹೋಗುತ್ತದೆ.

    ಸೇವಂತಿಗೆ ಬೆಳೆಯುವ ಹೆಚ್ಚಿನವರು ಈ ಬಾರಿ ಅಲ್ಪ ಸ್ವಲ್ಪ ಗಿಡಗಳನ್ನು ನೆಟ್ಟಿದ್ದಾರೆ. ಜ.3ರ ಬಸ್ರೂರು ಹಬ್ಬದಿಂದ ಆರಂಭಗೊಂಡು, ಮಾರ್ಚ್ ಕೊನೆಯ ಆಸೋಡು ಹಬ್ಬದವರೆಗೂ ದಿನಕ್ಕೆರಡು ಜಾತ್ರೆ, ಕೆಂಡೋತ್ಸವಗಳಿಗೆ ಸೇವಂತಿಗೆ ಹೂವಿಗೆ ಬೇಡಿಕೆಯಿರುತ್ತದೆ. ಕಳೆದ ಬಾರಿ ಸೀಸನ್‌ನ ಕೊನೆಯಲ್ಲಿ ಲಾಕ್‌ಡೌನ್ ವಿಧಿಸಿದ್ದರಿಂದ ಕೆಲವರಿಗೆ ನಷ್ಟವಾಗಿದೆ.
    – ಪ್ರಶಾಂತ ಭಂಡಾರಿ, ಸೇವಂತಿಗೆ ಕೃಷಿಕ ಹೆಮ್ಮಾಡಿ

    ಹೆಚ್ಚಿನ ಬೆಳೆಗಾರರು ಇನ್ನೂ ಸೇವಂತಿಗೆ ಹೂವು ಬೆಳೆಯಲು ಮುಂದಾಗಿಲ್ಲ. ಕರೊನಾದಿಂದ ಈ ಬಾರಿಯೂ ಜಾತ್ರೆ ಇದೆಯೋ ಇಲ್ಲವೋ ಎಂಬ ಗೊಂದಲದಲ್ಲಿದ್ದೇವೆ. ಒಂದು ವೇಳೆ ಹೂವು ಬೆಳೆದರೂ ಕೊಯ್ಲು ಸಮಯದಲ್ಲಿ ಬೇಡಿಕೆಯಿಲ್ಲದಿದ್ದರೆ ಏನು ಮಾಡುವುದು? ಸರ್ಕಾರ ಗೊಂದಲ ನಿವಾರಿಸಿದರೆ ನಮಗೂ ಹೂವು ಬೆಳೆಯಲು ಅನುಕೂಲವಾಗುತ್ತದೆ.
    – ರಮೇಶ್ ದೇವಾಡಿಗ, ಸೇವಂತಿಗೆ ಕೃಷಿಕ ಕಟ್ಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts