More

    ಬರಡು ಭೂಮಿಯಲ್ಲೂ ಹಸಿರು

    – ಅನ್ಸಾರ್ ಇನೋಳಿ ಉಳ್ಳಾಲ
    ಕಟ್ಟಡ ನಿರ್ಮಾಣಕ್ಕೆ ಮೀಸಲಿಟ್ಟ ಬರಡು ಜಮೀನಿನ ಪಕ್ಕದಲ್ಲಿ ಬಾಡಿಗೆ ಕೊಠಡಿಯಲ್ಲಿದ್ದ ಮುಹಮ್ಮದ್ ಮುಸ್ಲಿಯಾರ್ ಎಂಬ ಧರ್ಮಗುರು ಖಾಲಿ ಜಾಗದಲ್ಲಿ ತರಕಾರಿ ಬೆಳೆದು ಭೂಮಿಯನ್ನು ಹಸಿರಾಗಿಸಿದ್ದಾರೆ.

    ಪಾವೂರು ಗ್ರಾಮದ ಮಲಾರ್ ಅರಸ್ತಾನದಲ್ಲಿರುವ ಅಲ್-ಮುಬಾರಕ್ ಜುಮಾ ಮಸೀದಿಯಲ್ಲಿ ಮುಅಝ್ಝಿನ್ ಆಗಿ ಸೇವೆ ಸಲ್ಲಿಸಿದ್ದ ಮುಸ್ಲಿಯಾರ್, ಮೂರು ವರ್ಷಗಳಿಂದ ಪುತ್ತೂರಿನ ಕಲ್ಲೇಗ ಮಸೀದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಮಲಾರ್ ಟಿಪ್ಪುನಗರ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು ಹಿಂದಿನಿಂದಲೂ ಕೃಷಿ ಪ್ರೇಮಿ ಎನಿಸಿಕೊಂಡಿದ್ದಾರೆ.

    ಯಾವ ಮಸೀದಿಯಲ್ಲಿ ಕೆಲಸಕ್ಕೆ ಸೇರುತ್ತಾರೋ ಅಲ್ಲಿ ಖಾಲಿ ಜಾಗವಿದ್ದರೆ ಕೃಷಿ, ಹೂವಿನ ಗಿಡ, ಅಲಂಕಾರಿಕಾ ಗಿಡ ಬೆಳೆಸಬೇಕು ಎನ್ನುವ ತವಕ ಅವರದ್ದು. ಹಿಂದೆ ಬೆಳ್ಮ, ಬಳಿಕ ಮಲಾರ್ ಮಸೀದಿಯಲ್ಲೂ ಖಾಲಿ ಜಾಗದಲ್ಲಿ ತರಕಾರಿ ಬೆಳೆದು ಮಸೀದಿಗೆ ಸಣ್ಣ ಮಟ್ಟಿನ ಆದಾಯ ಬರುವಂತೆ ಮಾಡಿದ್ದರು. ಪ್ರಸಕ್ತ ತಮ್ಮ ಬಾಡಿಗೆ ಮನೆಯ ಪಕ್ಕದ ಜಮೀನಿನಲ್ಲಿ ತರಕಾರಿ ಬೆಳೆದಿದ್ದಾರೆ. ತೊಂಡೆಕಾಯಿ, ಮುಳ್ಳುಸೌತೆ, ಹಾಗಲಕಾಯಿ, ಮೂರು ಬಗೆಯ ಸೋರೆಕಾಯಿ, ಹೀರೆಕಾಯಿ, ಬಸಳೆ, ಅಲಸಂಡೆ ಉತ್ತಮ ಫಸಲು ಬಂದಿದೆ. ಸಮಯದ ಸದ್ಬಳಕೆಯೂ ಆಗುತ್ತಿದೆ.

    ಕೃಷಿ ತರಬೇತಿ: ಮುಹಮ್ಮದ್ ಮುಸ್ಲಿಯಾರ್, ಕೃಷಿ ಕುಟುಂಬದಿಂದ ಬಂದವರು. ಮೂಲತಃ ಹರೇಕಳ ದೇರಿಕಟ್ಟೆ ನಿವಾಸಿ. ಅಜ್ಜ ಕೃಷಿಕರಾಗಿದ್ದು ಅವರಿಂದ ಪ್ರೇರಣೆ ಪಡೆದಿದ್ದರು. 30 ವರ್ಷಗಳ ಹಿಂದೆ 15 ದಿನಗಳ ಕೃಷಿ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಅದನ್ನು ಸದುಪಯೋಗಿಸಿಕೊಂಡಿದ್ದಾರೆ. ತರಕಾರಿ ಗಿಡಗಳು ಚೆನ್ನಾಗಿ ಫಸಲು ಕೊಡಬೇಕಾದರೆ ಯಾವ ಗೊಬ್ಬರ, ಔಷಧ ಬಳಸಬೇಕು, ಮಣ್ಣಿನ ಗುಣ ಹೇಗಿರಬೇಕು, ಪರಿಸರ, ಬೆಳಕು ಹೇಗಿರಬೇಕು ಎನ್ನುವ ಜ್ಞಾನ ಇವರಲ್ಲಿದೆ. ಅದರಂತೆ ಖಾಲಿ ಜಾಗದಲ್ಲಿ ತರಕಾರಿ ಫಸಲು ತೆಗೆಯುವುದು ಸುಲಭ ಎನಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts