More

    ಕೃಷಿಮೇಳದಲ್ಲಿ ಮೇಳೈಸಲಿದೆ ಜಾನಪದ ನೃತ್ಯ: ಎಲ್ಲ ಬಗೆಯ ಕಲಾ ಪ್ರಕಾರಗಳ ಸ್ಪರ್ಧಿಗಳಿಗೆ ಅವಕಾಶ ಅತ್ಯುತ್ತಮ ಪ್ರದರ್ಶನಕ್ಕೆ ಬಹುಮಾನ

    ಮೈಸೂರು: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ 24ಗಿ7 ನ್ಯೂಸ್ ಚಾನಲ್ ವತಿಯಿಂದ ಮೈಸೂರಿನಲ್ಲಿ ಆಯೋಜಿಸಿರುವ ಕೃಷಿ ಮೇಳದ ಅಂಗವಾಗಿ ಫೆ.22ರಂದು ಜಾನಪದ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ.

    ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಫೆ.21, 22 ಹಾಗೂ 23ರಂದು ವೈವಿಧ್ಯಮಯ ಕಾರ್ಯಕ್ರಮಗಳನ್ನು ಒಳಗೊಂಡ ಕೃಷಿ ಮೇಳ ಆಯೋಜಿಸಲಾಗಿದೆ. ಜಾನಪದ ನೃತ್ಯ ಸ್ಪರ್ಧೆ ಮೇಳದ ಪ್ರಮುಖ ಆಕರ್ಷಣೆಗಳಲ್ಲೊಂದು.

    ಜಾನಪದ ನೃತ್ಯಗಳು ಕೃಷಿ ಬದುಕಿನ ಅವಿಭಾಜ್ಯ ಅಂಗ. ಕೃಷಿ ಸಂಸ್ಕೃತಿಯ ಜತೆಯಲ್ಲೇ ಜಾನಪದವೂ ಬೆಳೆದು ಬಂದಿದೆ. ನಮ್ಮ ಜಾನಪದರು ಕೃಷಿಯ ಖುಷಿಯನ್ನು ನೃತ್ಯಗಳ ಮೂಲಕ ಅಭಿವ್ಯಕ್ತಿಗೊಳಿಸುತ್ತಿದ್ದರು. ಪೂಜಾ ಕುಣಿತ, ಗೊರವರ ಕುಣಿತ, ಕರಗದ ಕುಣಿತ, ಉಮ್ಮತ್ತಾಟ್ ಮುಂತಾದ ಜಾನಪದ ನೃತ್ಯ ಪ್ರಕಾರಗಳು ದೈವಿಕ ಆರಾಧನೆ, ಆಚರಣೆಗಳ ಹಿನ್ನೆಲೆಯೊಂದಿಗೆ ಬೆಸೆದುಕೊಂಡಿವೆ. ಜಾನಪದ ನೃತ್ಯಗಳಿಲ್ಲದೆ ಕೃಷಿ ಸಂಸ್ಕೃತಿ ಪರಿಪೂರ್ಣಗೊಳ್ಳುವುದಿಲ್ಲ. ಆದ್ದರಿಂದಲೇ ಕೃಷಿ ಮೇಳದ ಎರಡನೇ ದಿನವಾದ ಫೆ.22ರಂದು ಜಾನಪದ ನೃತ್ಯ ಸ್ಪರ್ಧೆ ಆಯೋಜಿಸಲಾಗಿದ್ದು, ಅಂದು ಮಧ್ಯಾಹ್ನ 4 ಗಂಟೆಗೆ ಸ್ಪರ್ಧೆ ಆರಂಭವಾಗಲಿದೆ.

    ಕಂಸಾಳೆ, ಬೀಸು ಕಂಸಾಳೆ, ಡೊಳ್ಳು ಕುಣಿತ, ಪೂಜಾ ಕುಣಿತ, ಪಟದ ಕುಣಿತ, ಕರಗದ ಕುಣಿತ, ಸುಗ್ಗಿ ಕುಣಿತ, ಕೋಲಾಟ, ಜಡೆ ಕೋಲಾಟ, ರಂಗದ ಕುಣಿತ, ಮಾರಿ ಕುಣಿತ, ವೀರಗಾಸೆ, ವೀರಮಕ್ಕಳ ಕುಣಿತ, ಜಗ್ಗಲಗೆ, ಉಮ್ಮತ್ತಾಟ್, ಬೋಳಾಕ್ಕಾಟ್, ಲಂಬಾಣಿ ನೃತ್ಯ, ನಂದಿಕಂಬ ಕುಣಿತ ಹೀಗೆ ಎಲ್ಲ ರೀತಿಯ ಜಾನಪದ ಪ್ರಕಾರಗಳಿಗೂ ಸ್ಪರ್ಧಿಸಲು ಅವಕಾಶವಿದೆ.

    ನಿಯಮಗಳು: ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ಪ್ರವೇಶ ಶುಲ್ಕ ಇರುವುದಿಲ್ಲ. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದ ತಂಡಗಳಿಗೆ ನಗದು ಬಹುಮಾನ ನೀಡಲಾಗುವುದು. ಒಂದು ತಂಡದಲ್ಲಿ 10ರಿಂದ 15 ಕಲಾವಿದರು ಪ್ರದರ್ಶನ ನೀಡಬೇಕು. ವಾದ್ಯ ಪರಿಕರ, ಸಹ ಕಲಾವಿದರಿಗೆ ಯಾವುದೇ ಮಿತಿ ಇಲ್ಲ. ಶಾಲಾ- ಕಾಲೇಜು ವಿದ್ಯಾರ್ಥಿಗಳು, ವೃತ್ತಿಪರ ಕಲಾವಿದರು, ಸಂಘ- ಸಂಸ್ಥೆ ಯವರು ಸೇರಿ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ.

    ಸಿನಿಮಾ ಹಾಡು, ರೆಕಾರ್ಡ್ ಆಗಿರುವ ಗೀತೆ, ಕ್ಯಾಸೆಟ್​ಗಳಿಗೆ ಅವಕಾಶ ಇರುವುದಿಲ್ಲ. ಅಪ್ಪಟ ಜಾನಪದ ನೃತ್ಯಗಳನ್ನು ವೇದಿಕೆಯಲ್ಲಿ ನೇರವಾಗಿ ಪ್ರದರ್ಶನ ಮಾಡಬೇಕು. ಕಂಸಾಳೆ, ಕೋಲಾಟದಂತಹ ತಂಡಗಳ ಗಾಯಕರಿಗೆ ಮೈಕ್ ವ್ಯವಸ್ಥೆ ಇರುತ್ತದೆ. ಪ್ರತಿ ತಂಡಕ್ಕೆ 8 ರಿಂದ 10 ನಿಮಿಷಗಳ ಕಾಲಾವಕಾಶ ನೀಡಲಾಗುವುದು. ಜಾನಪದ ವಿದ್ವಾಂಸರು, ನೃತ್ಯ ಪರಿಣತರು, ಜಾನಪದ ಹಿರಿಯ ಕಲಾವಿದರು ತೀರ್ಪಗಾರರಾಗಿ ಪಾಲ್ಗೊಳ್ಳಲಿದ್ದಾರೆ. ಭಾಗವಹಿಸಲು ಇಚ್ಛಿಸುವ ತಂಡಗಳು ಮಾಹಿತಿಗಾಗಿ ಮೊ.8884432041ಗೆ ಕರೆ ಮಾಡಿ ನೋಂದಣಿ ಮಾಡಿಸಿಕೊಳ್ಳಬಹುದು. ಅಲ್ಲದೇ, ಸ್ಪರ್ಧೆ ಆರಂಭಕ್ಕೂ ಅರ್ಧ ಗಂಟೆ ಮುಂಚಿತವಾಗಿ ಆಗಮಿಸಿ ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts