More

    ಜಾಂಬೂರಿಯಲ್ಲಿ ವೈಭವದ ಕೃಷಿ ಮೇಳ

    ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆವರಣದಲ್ಲಿ ಡಿ.21ರಿಂದ 27ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಸೈಟ್ಸ್ ಗೈಡ್ ಸಾಂಸ್ಕೃತಿಕ, ಜಾಂಬೂರಿಯಲ್ಲಿ ವೈಭವದ ಕೃಷಿ ಮೇಳ ಆಯೋಜಿಸಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ, ಸ್ಕೌಟ್ಸ್ ಗೈಡ್ಸ್‌ನ ಜಿಲ್ಲಾ ಆಯುಕ್ತ ಡಾ.ಎಂ.ಮೋಹನ ಆಳ್ವ ತಿಳಿಸಿದರು.

    ಕೃಷಿಮೇಳಕ್ಕಾಗಿ ಮುಂಡ್ರುದೆಗುತ್ತು ಕೆ.ಅಮರನಾಥ ಶೆಟ್ಟಿ ಆವರಣದಲ್ಲಿ 12 ಎಕರೆ ಜಾಗ ಮೀಸಲಿರಿಸಿದ್ದು, ಇದರಲ್ಲಿ 4 ಎಕರೆ ಜಾಗದಲ್ಲಿ 100 ವಿಧದ ತರಕಾರಿಗಳ ಅತ್ಯಾಕರ್ಷಕ ನೈಜತೋಟ ಮೈತಳೆದಿದೆ. ಇದರೊಂದಿಗೆ ಚಿತ್ತಾಕರ್ಷಕವಾದ ಫಲ ಮತ್ತು ಪುಷ್ಪ ಪ್ರದರ್ಶನಗಳು ಆವರಣದ ಸೊಬಗನ್ನು ಹೆಚ್ಚಿಸಲಿದ್ದು, ನೋಡುಗರ ಮೈನವಿರೇಳಿಸುವಂತೆ ರೂಪುಗೊಳ್ಳುತ್ತಿದೆ. ದೇಶ- ವಿದೇಶಗಳ ಬಾಳೆ, ತೆಂಗು, ಧಾನ್ಯ, 530 ವಿಧದ ಭತ್ತ, ವಿವಿಧ ರೀತಿಯ ಗೆಡ್ಡೆಗೆಣಸುಗಳು, ಆಯುರ್ವೇದಿಕ್ ಹಣ್ಣುಗಳು, 8 ವಿವಿಧ ಲೆಟ್ಯೂಸ್ ಮತ್ತು ಬ್ರುಕೋಲಿ ಪ್ರದರ್ಶನಗಳು ಕೃಷಿಮೇಳದ ವೈಭವಕ್ಕೆ ಸಾಕ್ಷಿಯಾಗಲಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ವಿಜ್ಞಾನ ವಸ್ತುಪ್ರದರ್ಶನಗಳ ವಿಜ್ಞಾನಮೇಳ, ವಿವಿಧ ಭಾಷೆಗಳ ಪುಸ್ತಕ ಮೇಳ, ಕಲಾವಿದರ ಕೈಚಳಕದ ಕಲಾಮೇಳ, ವಿವಿಧ ತಿಂಡಿತಿನಸುಗಳ ಆಹಾರೋತ್ಸವ ಮೇಳಗಳು ಈ ಉತ್ಸವದಲ್ಲಿ ನೋಡುಗರನ್ನು ನಿಬ್ಬೆರಗಾಗಿಸುವಂತೆ ಆಯೋಜನೆಗೊಳ್ಳುತ್ತಿವೆ. 6 ವೇದಿಕೆಗಳಲ್ಲಿ ವೈವಿಧ್ಯಮಯ ಭಾರತೀಯ ಸಂಸ್ಕೃತಿಯನ್ನು ಅನಾವರಣಗೊಳಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿದ್ದು, ಕೃಷಿಸಿರಿಯಲ್ಲಿ ಎ.ಜಿ.ಕೊಡ್ಡಿ ವೇದಿಕೆ ತೆರೆದುಕೊಳ್ಳಲಿದೆ. ಸಭಾ ಕಾರ್ಯಕ್ರಮ ಮತ್ತು ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ನಡೆಯಲಿದ್ದು, ಇವೆಲ್ಲವೂ ಮುಕ್ತವಾಗಿ ಮತ್ತು ಉಚಿತವಾಗಿ ಸಂದರ್ಶನಕ್ಕೆ ತೆರೆದುಕೊಳ್ಳಲಿದೆ.

    ಮಳಿಗೆಗೆ ಅವಕಾಶ: ಕೃಷಿಗೆ ಸಂಬಂಧಿಸಿದ ಮಾರಾಟ ಮಳಿಗೆಗಳನ್ನಿಡಲು ಅವಕಾಶವಿದ್ದು, ಕೃಷಿ ಸಂಬಂಧಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ನೀಡಲಾಗಿದೆ. 100 ಚದರ ಅಡಿ ಕೃಷಿ ಮಳಿಗೆಗೆ 7 ದಿನಕ್ಕೆ 6 ಸಾವಿರ ರೂ. ಶುಲ್ಕ ನಿಗದಿ ಮಾಡಲಾಗಿದೆ. ಒಬ್ಬರು ಒಂದಕ್ಕಿಂತ ಹೆಚ್ಚು ಮಳಿಗೆ ಪಡೆಯಲು ಅವಕಾಶವಿದೆ. ವಸ್ತು ಮಾರಾಟವಿಲ್ಲದ ಕೇವಲ ಪ್ರದರ್ಶನ ಮಳಿಗೆಗಳಿಗೆ ಯಾವುದೇ ಶುಲ್ಕವಿಲ್ಲ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಮತ್ತು ಕೃಷಿ ವಿಶ್ವವಿದ್ಯಾಲಯಗಳಿಗೆ ಮಳಿಗೆಗಳು ಉಚಿತವಾಗಿ ದೊರೆಯಲಿದೆ. ಆಸಕ್ತರು ಕೈಬರಹದ ಅರ್ಜಿಯೊಂದಿಗೆ ನಗದು ಅಥವಾ ಡಿ.ಡಿಯನ್ನು INTERNATIONAL CULTURAL SCOUTS AND GUIDES JAMBOREE ಹೆಸರಿನಲ್ಲಿ ಖರೀದಿಸಿ ಡಿ.18ರೊಳಗಾಗಿ ಆಳ್ವಾಸ್ ದಾಖಲಾತಿ ವಿಭಾಗಕ್ಕೆ ಖುದ್ದಾಗಿ ಭೇಟಿ ನೀಡಿ ನೋಂದಾಯಿಸುವ ಅವಕಾಶ ಕಲ್ಪಿಸಲಾಗಿದೆ ಎಂದರು.

    ಪ್ರಗತಿಪರ ಕೃಷಿಕರಾದ ರಾಜವರ್ಮ ಬೈಲಂಗಡಿ, ಸುಭಾಶ್ಚಂದ್ರ ಚೌಟ, ಧನಕೀರ್ತಿ ಬಲಿಪ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts