More

    ಅಘೋರೇಶ್ವರ ದೇಗುಲ ಬ್ರಹ್ಮಕಲಶ ಸಂಭ್ರಮ

    ಕೋಟ: ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಮಹತೋಭಾರ ಹಿರೇಮಹಾಲಿಂಗೇಶ್ವರ ದೇಗುಲ ಸನಿಹದಲ್ಲಿರುವ ಚಿತ್ರಪಾಡಿ ಕಾರ್ತಟ್ಟು ಅಘೋರೇಶ್ವರ ದೇವಸ್ಥಾನ ಜೀರ್ಣೋದ್ಧಾರಗೊಂಡಿದ್ದು, ಪುನಃ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವಕ್ಕೆ ಸಿದ್ಧವಾಗಿದೆ.

    ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸನಿಹದ ಕಾರ್ತಟ್ಟು ಚಿತ್ರಪಾಡಿ ಪರಿಸರದಲ್ಲಿ ನೆಲೆಯೂರಿದ ಪುರಾತನ ಹಿರಿಮೆಯುಳ್ಳ ಈ ದೇವಸ್ಥಾನ ಜೀರ್ಣಾವಸ್ಥೆಗೆ ತಲುಪಿತ್ತು. ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಈ ಸನ್ನಿಧಿ ಭಕ್ತರ ಇಷ್ಟಾರ್ಥ ಈಡೇರಿಸುವ ಪುಣ್ಯಕ್ಷೇತ್ರವಾಗಿತ್ತು. ಪ್ರಸ್ತುತ ಭಕ್ತರ ಸಹಕಾರದಿಂದ ಕ್ಷೇತ್ರ ಸುಂದರವಾಗಿ ಮರು ನಿರ್ಮಾಣಗೊಂಡಿದೆ.

    ಅಘೋರೇಶ್ವರ ದೇವಳ ಹಿನ್ನೆಲೆ: 12ನೇ ಶತಮಾನದಲ್ಲಿ ಜೈನ ಮನೆತನದ ಅರಸ ವಡ್ಡರಸ ವಡ್ಡರ್ಸೆ ಮಹಾಲಿಂಗೇಶ್ವರ ದೇವಳ ಮತ್ತು ಅಘೋರೇಶ್ವರ ದೇವಸ್ಥಾನ ನಿರ್ಮಿಸಿದ್ದರು. ಕೊಂಕಣ ಕರಾವಳಿಯಲ್ಲಿ ಪಶ್ಚಿಮಾಭಿಮುಖವಾಗಿ ಸ್ಥಾಪಿತವಾದ ಕೆಲವೇ ಶಿವನ ದೇವಾಲಯದಲ್ಲಿ ಇದೂ ಒಂದು. ದೇವಳದ ಹಿಂದೆ ಬಾಯರಿ ಕುಟುಂಬಸ್ಥರು ನಿರ್ಮಿಸಿರುವ ಪುರಾತನ ಕೆರೆಯಿದ್ದು, ಬಾಯರಿಕೆರೆ ಎಂದೇ ಪ್ರಸಿದ್ಧಿಯಾಗಿದೆ. ಶಿಥಿಲಾವಸ್ಥೆಯಲ್ಲಿದ್ದ ಈ ಕೆರೆಯನ್ನು ಭಕ್ತರು ಶ್ರಮದಾನದಲ್ಲಿ ಮರು ನಿರ್ಮಿಸಿದ್ದಾರೆ.

    ಶಿಕ್ಷಕರೂ ಆಗಿರುವ ದೇವಳ ಅರ್ಚಕ ಬಾಲಕೃಷ್ಣ ನಕ್ಷತ್ರಿ ದೇವಸ್ಥಾನ ಅಭಿವೃದ್ಧಿಯ ಕನಸು ಕಂಡರು. ಚಂದ್ರಶೇಖರ ಕಾರಂತರು ಆಡಳಿತ ಮಂಡಳಿ ಚುಕ್ಕಾಣಿ ಹಿಡಿದು ಅಭಿವೃದ್ಧಿ ಕೈಂಕರ್ಯದಲ್ಲಿ ತೊಡಗಿಸಿಕೊಂಡರು. ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಕಿದಿಯೂರು ಉದಯ್ ಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಬ್ರಹ್ಮಕಕಲಶೋತ್ಸವ ಸಮಿತಿ ರಚಿಸಲಾಗಿದೆ. ದೇವಳದಲ್ಲಿ ಪ್ರತಿವರ್ಷದ ಶಿವರಾತ್ರಿಯಂದು ರುದ್ರಹೋಮ, ಸೋಣೆ ಆರತಿ, ರಂಗಪೂಜೆ ಹಾಗೂ ದೀಪೋತ್ಸವ ಕಾರ್ಯಕ್ರಮಗಳು ನಡೆಯುತ್ತಿವೆ.

    14ರಿಂದ 16ರ ತನಕ ಕಾರ್ಯಕ್ರಮ: ಅಘೋರೇಶ್ವರ ದೇವಸ್ಥಾನ ಕಾರ್ತಟ್ಟು ಚಿತ್ರಪಾಡಿ ಇದರ ಅಷ್ಟಬಂಧ ಪುನಃ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಫೆ.14ರಿಂದ 16ರವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಿದಿಯೂರು ಉದಯ ಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

    11ರಂದು ಉಗ್ರಾಣ ಮುಹೂರ್ತ, 14ರಂದು ಸಾಯಂಕಾಲ 4ರಿಂದ ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮದಿಂದ ಹಸಿರು ಹೊರಕಾಣಿಕ ಮೆರವಣಿಗೆ, 6.30ಕ್ಕೆ ಸಾಂಸ್ಕೃತಿಕ ವೇದಿಕೆ ಉದ್ಘಾಟನೆ, 7ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 15ರಂದು ಬೆಳಗ್ಗೆ ಶ್ರೀ ದೇವರ ಪುನಃ ಪ್ರತಿಷ್ಠಾಪನೆ, ರಾತ್ರಿ 7ರಿಂದ ಸುಗಮ ಸಂಗೀತ, 16ರಂದು ಬೆಳಗ್ಗೆ ಬ್ರಹ್ಮಕಲಶೋತ್ಸವ, ಮಧ್ಯಾಹ್ನ 12.30ಕ್ಕೆ ಭಜನೆ, ಬಳಿಕ ಮಹಾಅನ್ನಸಂತರ್ಪಣೆ, ರಾತ್ರಿ 7ರಿಂದ ಧಾರ್ಮಿಕ ಸಭೆ, 8.30ಕ್ಕೆ ಉಡುಪಿಯ ಭಾರ್ಗವಿ ನೃತ್ಯ ತಂಡದಿಂದ ಭಾವ-ಯೋಗ -ಗಾನ-ನೃತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ ಎಂದು ತಿಳಿಸಿದರು.

    ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಕಾರಂತ, ಕಾರ್ಯದರ್ಶಿ ಶ್ಯಾಮಸುಂದರ ನಾಯಿರಿ, ಪ್ರಧಾನ ಅರ್ಚಕ ಬಾಲಕಷ್ಣ ನಕ್ಷತ್ರಿ, ಆಡಳಿತ ಮಂಡಳಿ ಸದಸ್ಯ ಮಂಜುನಾಥ ನಾಯಿರಿ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಪ್ರಕಾಶ್ ಮಧ್ಯಸ್ಥ, ಕಾರ್ಯದರ್ಶಿ ಉಮೇಶ್ ನಾಯಿರಿ, ಪ್ರಚಾರ ಸಮಿತಿಯ ರಾಮಕಷ್ಣ ಬ್ರಹ್ಮಾವರ, ಅಘೋರೇಶ್ವರ ಕಲಾರಂಗ ಮಾಜಿ ಅಧ್ಯಕ್ಷ ಪ್ರಭಾಕರ ನಾಯಿರಿ, ಕಲಾರಂಗದ ಅಧ್ಯಕ್ಷ ಲಕ್ಷ್ಮಣ್ ನಾಯಿರಿ, ಕಲಾರಂಗದ ಸದಸ್ಯ ಪ್ರಕಾಶ್ ಪೂಜಾರಿ ಹಂದಟ್ಟು, ಗ್ರಾಮದ ಹಿರಿಯರಾದ ರಾಮಚಂದ್ರ ನಾಯಿರಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts