More

    ಉದ್ಯೋಗ ಪರ್ವಕ್ಕೆ ಅಗ್ನಿಪಥ

    ಉದ್ಯೋಗಾಕಾಂಕ್ಷಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಗುಡ್​ನ್ಯೂಸ್ ನೀಡಿದ್ದಾರೆ. ನಿರುದ್ಯೋಗ ಸಮಸ್ಯೆ ನಿವಾರಣೆಯತ್ತ ಮಹತ್ವದ ಹೆಜ್ಜೆ ಇರಿಸಿರುವ ಮೋದಿ, ಕೇಂದ್ರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 10 ಲಕ್ಷ ಹುದ್ದೆಗಳನ್ನು ಒಂದೂವರೆ ವರ್ಷದೊಳಗೆ ತುರ್ತು ನೇಮಕ ಮಾಡುವಂತೆ ಸೂಚಿಸಿದ್ದಾರೆ. ಏತನ್ಮಧ್ಯೆ ಮೂರೂ ಸೇನಾಪಡೆಗಳಲ್ಲಿ 46 ಸಾವಿರ ಅಗ್ನಿವೀರರ ಭರ್ತಿಗೆ ಕೇಂದ್ರ ಅನುಮತಿ ನೀಡಿದೆ. ಇತ್ತೀಚಿನ ವರ್ಷಗಳಲ್ಲಿ ಇದು ದೇಶದ ಬಹುದೊಡ್ಡ ನೇಮಕಾತಿ ಪರ್ವ ಆಗಲಿದೆ.

    10 ಲಕ್ಷ ಹುದ್ದೆಗಳ ನೇಮಕಾತಿ

    ನವದೆಹಲಿ: ಆರ್ಥಿಕ ಸವಾಲುಗಳ ನಡುವೆಯೂ ನಿರುದ್ಯೋಗ ಸಮಸ್ಯೆ ಮೆಟ್ಟಿನಿಲ್ಲಲು ದಿಟ್ಟ ನಿರ್ಧಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಮುಂದಿನ ಒಂದೂವರೆ ವರ್ಷದಲ್ಲಿ ಕೇಂದ್ರ ಸರ್ಕಾರದ 10 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವಂತೆ ಸೂಚಿಸಿದ್ದಾರೆ. ಎಲ್ಲ ಸಚಿವಾಲಯ ಮತ್ತು ಇಲಾಖೆಗಳಲ್ಲಿನ ಮಾನವ ಸಂಪನ್ಮೂಲ ಲಭ್ಯತೆಯನ್ನು ಪರಿಶೀಲಿಸಿರುವ ಪ್ರಧಾನಿ, ಸಮರೋಪಾದಿಯಲ್ಲಿ ನೇಮಕಾತಿ ನಡೆಸುವಂತೆ ಆದೇಶ ನೀಡಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ (ಪಿಎಂಒ) ತಿಳಿಸಿದೆ.

    ಉದ್ಯೋಗ ಸೃಜನೆಯ ಭರವಸೆ ಬರಿ ಬೂಟಾಟಿಕೆಯಾಗಿದ್ದು, ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಸದೆ ಹುದ್ದೆಗಳನ್ನೇ ರದ್ದು ಮಾಡುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಪದೇಪದೆ ಟೀಕಿಸುತ್ತಿರುವ ನಡುವೆಯೇ, ಮೋದಿ ನೇಮಕಾತಿ ಪರ್ವಕ್ಕೆ ಮುಂದಾಗಿದ್ದಾರೆ.

    ಕೇಂದ್ರದಲ್ಲಿ 8.72 ಲಕ್ಷ ಹುದ್ದೆ ಖಾಲಿ: 2020ರ ಮಾ. 1ರ ಅಂಕಿ-ಅಂಶದ ಅನುಸಾರ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 8.72 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಕಳೆದ ಬಜೆಟ್ ಅಧಿವೇಶನದ ವೇಳೆ ಸರ್ಕಾರ ಸಂಸತ್​ಗೆ ಮಾಹಿತಿ ನೀಡಿತ್ತು. 40 ಲಕ್ಷ ಮಂಜೂರಾದ ಹುದ್ದೆಗಳ ಪೈಕಿ 32 ಲಕ್ಷ ಹುದ್ದೆಗಳು ಭರ್ತಿಯಾಗಿವೆ. ಬಾಕಿ ಇರುವ ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ನಡೆಯುತ್ತಿದ್ದರೂ ಅದು ವೇಗವಾಗಿಲ್ಲ ಎಂದು ಹೇಳಿತ್ತು.

    ಸಿಬ್ಬಂದಿ ಕೊರತೆಯಿಂದ ಕೆಲಸಗಳು ಚುರುಕಿನಿಂದ ಆಗುತ್ತಿಲ್ಲ. ಸಿಬ್ಬಂದಿ ಮೇಲೆ ಹೊರೆ ಹೆಚ್ಚಾಗಿದೆ. ಮಂಜೂರಾದ ಹುದ್ದೆಗಳೇ ಭರ್ತಿ ಆಗದೆ ಬಾಕಿ ಹುದ್ದೆಗಳ ಸಂಖ್ಯೆ ಏರುತ್ತಿದೆ. ಹೊಸ ನೇಮಕಾತಿ ಇಲ್ಲ ಎನ್ನುವಂತಾಗಿದೆ.

    | ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿ

    ಧನ್ಯವಾದ ಹೇಳಿದ ವರುಣ್ ಗಾಂಧಿ: ಖಾಲಿ ಇರುವ ಸರ್ಕಾರಿ ಹುದ್ದೆಗಳಿಗೆ ಸಮರೋಪಾದಿಯಲ್ಲಿ ನೇಮಕಾತಿ ನಡೆಸುವಂತೆ ಪ್ರಧಾನಿ ಮೋದಿ ಸೂಚನೆ ನೀಡಿರುವುದಕ್ಕೆ ಬಿಜೆಪಿ ಸಂಸದ ವರುಣ್ ಗಾಂಧಿ ಧನ್ಯವಾದ ಹೇಳಿದ್ದಾರೆ. ನಿರುದ್ಯೋಗಿಗಳ ಸಂಕಟವನ್ನು ಪ್ರಧಾನಿ ಮೋದಿಯವರು ಅರ್ಥ ಮಾಡಿಕೊಂಡಿದ್ದಕ್ಕೆ ಧನ್ಯವಾದ. ಖಾಲಿ ಇರುವ ಹುದ್ದೆಗಳ ಭರ್ತಿ ಜತೆಗೆ ಹೊಸ ನೇಮಕಾತಿ ನಡೆಸಲು ಸೂಚಿಸಿರುವುದು ಸಂತಸದಾಯಕ ಬೆಳವಣಿಗೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆಯನ್ನು ಈಡೇರಿಸಬೇಕಾಗಿದೆ. ಹೀಗಾಗಿ ಈ ಪ್ರಕ್ರಿಯೆಯು ವೇಗವಾಗಿ ನಡೆಯಬೇಕು ಎಂದು ಟ್ವೀಟ್ ಮಾಡಿದ್ದಾರೆ.

    ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದು, ಕೇಂದ್ರ ಮತ್ತು ರಾಜ್ಯಗಳಲ್ಲಿ 60 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ವರುಣ್ ಪ್ರತಿಕ್ರಿಯಿಸಿ ಸರ್ಕಾರದ ಮಂದಗತಿಯ ಧೋರಣೆಯನ್ನು ಸೋಮವಾರಷ್ಟೆ ಟೀಕಿಸಿದ್ದರು.

    28 ಲಕ್ಷ ಹುದ್ದೆಗಳು ಖಾಲಿ ಉಳಿದಿವೆ, ಕಾಂಗ್ರೆಸ್ ಟೀಕೆ: ಕೇಂದ್ರ ಸರ್ಕಾರದಲ್ಲಿ 28 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ. ಕೋಟ್ಯಂತರ ಜನರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಆದರೆ, ಸರ್ಕಾರ ನೇಮಕಾತಿಯನ್ನೇ ನಡೆಸುತ್ತಿಲ್ಲ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ದುಡಿಯುವ ಕೈಗಳಿಗೆ ಕೆಲಸ ನೀಡಿದ ಸರ್ಕಾರ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ಬುಲ್ಡೋಜರ್ ಹರಿಸುತ್ತಿದೆ. ಈಗ ನೇಮಕಾತಿ ವಿಷಯದಲ್ಲಿ ಪ್ರಧಾನಿ ಮೋದಿ ಹೊಸದಾಗಿ ಟ್ವಿಟರ್ ಆಟ ಶುರು ಮಾಡಿದ್ದಾರೆ ಎಂದು ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲಾ ಆಪಾದಿಸಿದ್ದಾರೆ.

    ಷಾ, ರಾಜನಾಥ ಸ್ವಾಗತ: ನೇಮಕಾತಿ ಕುರಿತಂತೆ ಪ್ರಧಾನಿ ಮೋದಿ ಸೂಚನೆಯನ್ನು ಸಚಿವರಾದ ಅಮಿತ್ ಷಾ ಮತ್ತು ರಾಜನಾಥ ಸಿಂಗ್ ಸ್ವಾಗತಿಸಿದ್ದಾರೆ. ನವಭಾರತವು ಯುವ ಶಕ್ತಿಯಿಂದ ಮುನ್ನಡೆಯಲಿದೆ ಎಂದು ಹೇಳಿದ್ದಾರೆ. ಯುವ ಸಮುದಾಯದ ಸಬಲೀಕರಣಕ್ಕೆ ಪ್ರಧಾನಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇದರ ಭಾಗವಾಗಿಯೇ 10 ಲಕ್ಷ ಹುದ್ದೆಗಳ ನೇಮಕಾತಿಗೆ ಅವರು ಸೂಚನೆ ನೀಡಿದ್ದಾರೆ ಎಂದು ಅಮಿತ್ ಷಾ ಟ್ವೀಟ್ ಮಾಡಿದ್ದಾರೆ.

    ನವೋದಯ, ಕೆವಿಗಳಲ್ಲಿನ ಹುದ್ದೆಗಳು ಶೀಘ್ರ ಭರ್ತಿ: ಉನ್ನತ ಶಿಕ್ಷಣ ಸಂಸ್ಥೆಗಳು (ಎಚ್​ಇಐ), ಕೇಂದ್ರೀಯ ವಿದ್ಯಾಲಯ (ಕೆವಿ) ಮತ್ತು ಜವಾಹರ್ ನವೋದಯ ವಿದ್ಯಾಲಯಗಳಲ್ಲಿ ಖಾಲಿ ಇರುವ ಎಲ್ಲ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಮಂಗಳವಾರ ತಿಳಿಸಿದ್ದಾರೆ. ಮುಂದಿನ ಒಂದೂವರೆ ವರ್ಷಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲು ಬದ್ಧವಾಗಿರುವುದಾಗಿ ಕೌಶಲಾಭಿವೃದ್ಧಿ ಸಚಿವರೂ ಆಗಿರುವ ಪ್ರಧಾನ್ ಹೇಳಿದ್ದಾರೆ.

    ಎಲ್ಲಿವೆ ಹೆಚ್ಚು ಅವಕಾಶಗಳು?: ಅಂಚೆ, ರಕ್ಷಣೆ (ಸಿವಿಲ್), ರೈಲ್ವೆ, ಕಂದಾಯ, ಗೃಹ ಇಲಾಖೆ ಗಳಲ್ಲಿ ಅತಿ ಹೆಚ್ಚು ಹುದ್ದೆಗಳು ಖಾಲಿ ಉಳಿದಿವೆ. ರೈಲ್ವೆಯಲ್ಲಿ 15 ಲಕ್ಷ ಹುದ್ದೆಗಳು ಮಂಜೂರಾಗಿದ್ದು, 2.30 ಲಕ್ಷ ಖಾಲಿ ಇವೆ. ರಕ್ಷಣಾ (ಸಿವಿಲ್) ಇಲಾಖೆಯಲ್ಲಿ 6.33 ಲಕ್ಷ ಹುದ್ದೆಗಳಿದ್ದರೂ 2.50 ಲಕ್ಷ ಭರ್ತಿಯಾಗಿಲ್ಲ. ಅಂಚೆ ಇಲಾಖೆಯಲ್ಲಿ 2.67 ಲಕ್ಷ ಹುದ್ದೆಗಳಿದ್ದು, 90 ಸಾವಿರ ಖಾಲಿ ಇವೆ. ಕಂದಾಯ ಇಲಾಖೆಯಲ್ಲಿ 1.78 ಲಕ್ಷ ಹುದ್ದೆಗಳಿದ್ದು, 74 ಸಾವಿರ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಗೃಹ ಸಚಿವಾಲಯದಲ್ಲಿ 10.80 ಲಕ್ಷ ಮಂಜೂರಾದ ಹುದ್ದೆಗಳ ಪೈಕಿ 1.30 ಲಕ್ಷ ಅವಕಾಶಗಳಿವೆ.

    ಮುಖ್ಯಾಂಶಗಳು

    • ಒಂದೂವರೆ ವರ್ಷದಲ್ಲಿ 10 ಲಕ್ಷ ಉದ್ಯೋಗ ಎಂದರೆ ಪ್ರತಿದಿನ ಸರಾಸರಿ 1850 ಹುದ್ದೆ ಭರ್ತಿಯಾಗಬೇಕು
    • ನೇಮಕಾತಿ ಪ್ರಾಧಿಕಾರಗಳಾದ ಯುಪಿಎಸ್​ಸಿ, ಎಸ್​ಎಸ್​ಸಿ, ಆರ್​ಆರ್​ಬಿಗಳಿಗೆ ಭರ್ಜರಿ ಕೆಲಸ
    • ಈ ಸಂಸ್ಥೆಗಳಿಂದ ಆರು ವರ್ಷಗಳಲ್ಲಿ (2014-2020ರವರೆಗೆ) 5.6 ಲಕ್ಷ ಹುದ್ದೆಗಳ ಭರ್ತಿ

    ಸೇನೆಗೆ 46,000 ಅಗ್ನಿವೀರರು

    ಉದ್ಯೋಗ ಪರ್ವಕ್ಕೆ ಅಗ್ನಿಪಥನವದೆಹಲಿ: ವಾಯು ಪಡೆ, ನೌಕಾ ಪಡೆ ಹಾಗೂ ಭೂಸೇನೆಯ ನೇಮಕಾತಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿರುವ ಕೇಂದ್ರ ಸರ್ಕಾರ ‘ಅಗ್ನಿಪಥ’ ಯೋಜನೆಗೆ ಒಪ್ಪಿಗೆ ನೀಡಿದೆ. ಮೋದಿ ನೇತೃತ್ವದ ಆರ್ಥಿಕ ವ್ಯವಹಾರ ಕುರಿತ ಸಂಪುಟ ಉಪಸಮಿತಿ ಈ ಯೋಜನೆಗೆ ಅನುಮೋದನೆ ನೀಡಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ. ಹದಿನೇಳೂವರೆ ವರ್ಷದಿಂದ 21 ವರ್ಷದೊಳಗಿನ 46 ಸಾವಿರ ಜನರನ್ನು 4 ವರ್ಷಗಳ ಅಲ್ಪಾವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

    ನಾಲ್ಕು ವರ್ಷದಲ್ಲಿ ಆರು ತಿಂಗಳ ತರಬೇತಿ ಅವಧಿಯೂ ಸೇರಿದೆ. ನೇಮಕಾತಿ ಪ್ರಕ್ರಿಯು ಇಂದಿನಿಂದ ಮೂರು ತಿಂಗಳಲ್ಲಿ ಮುಗಿಯಲಿದ್ದು, 2023ರ ಜುಲೈನಲ್ಲಿ ಮೊದಲ ಬ್ಯಾಚ್ ಸೇವೆಗೆ ಸಿದ್ಧವಾಗಲಿದೆ ಎಂದು ಸಿಂಗ್ ಹೇಳಿದರು. ಅರ್ಹತೆ ಆಧಾರದಲ್ಲಿ ಪ್ರತಿ ಬ್ಯಾಚ್​ನಲ್ಲಿ ಶೇ.25ರಷ್ಟು ಯೋಧರಿಗೆ ಸೇನೆಯಲ್ಲಿ ಮುಂದುವರಿಯಲು ಅವಕಾಶ ದೊರೆಯಲಿದೆ ಮತ್ತು ಇಂಥವರು ಅಧಿಕಾರೇತರ ಶ್ರೇಣಿಯಲ್ಲಿ 15 ವರ್ಷ ಸೇವೆ ಸಲ್ಲಿಸಬಹುದು ಎಂದರು.

    ಈ ನೇಮಕಾತಿಯಿಂದ ಸೇನೆಯ ವಾರ್ಷಿಕ ವೆಚ್ಚದಲ್ಲಿ ದೊಡ್ಡ ಉಳಿತಾಯ ಆಗಲಿದೆ. ಸೇನೆಗೆ ಸರ್ಕಾರ ನೀಡುವ ಬಜೆಟ್​ನಲ್ಲಿ ಅರ್ಧದಷ್ಟು ಭಾಗ ವೇತನ ಮತ್ತು ಪಿಂಚಣಿಗೆ ಖರ್ಚಾಗುತ್ತದೆ. ‘ಅಗ್ನಿಪಥ’ ಯೋಜನೆಯಿಂದ ದೊಡ್ಡ ಮಟ್ಟದ ಉಳಿತಾಯ ಸಾಧ್ಯವಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

    ಸೇವಾ ನಿಧಿ ಪ್ಯಾಕೇಜ್: ಸೇವಾ ನಿಧಿ ಪ್ಯಾಕೇಜ್​ನಲ್ಲಿ ಮೊದಲ ವರ್ಷ ತಿಂಗಳಿಗೆ 30 ಸಾವಿರ ರೂ. ವೇತನ ಇರಲಿದ್ದು, ನಾಲ್ಕನೇ ವರ್ಷದಲ್ಲಿ 40 ಸಾವಿರ ರೂ.ಗೆ ಏರಿಕೆ ಆಗಲಿದೆ. ಸಿಬ್ಬಂದಿಯಿಂದ 9 ಸಾವಿರ ರೂ. ಮತ್ತು ಸರ್ಕಾರದ 9 ಸಾವಿರ ರೂ.ಗಳ ವಂತಿಗೆಯಿಂದ ಪ್ರತಿ ತಿಂಗಳು 18 ಸಾವಿರ ರೂ.ಗಳ ಪಿಎಫ್ ಸೌಲಭ್ಯ ಇರಲಿದೆ. ಒಟ್ಟಾರೆ ವಾರ್ಷಿಕ ಆದಾಯಕ್ಕೆ ತೆರಿಗೆಯಿಂದ ವಿನಾಯಿತಿ ಇದೆ. 48 ಲಕ್ಷ ರೂಪಾಯಿವರೆಗಿನ ವಿಮಾ ಸೌಲಭ್ಯ ಇರಲಿದ್ದು, ಇದಕ್ಕೆ ಸೈನಿಕರು ವಂತಿಗೆ ಕಟ್ಟಬೇಕಿಲ್ಲ. ನಾಲ್ಕು ವರ್ಷದ ಸೇವಾವಧಿ ಪೂರ್ಣಗೊಂಡ ನಂತರ 11.70 ಲಕ್ಷ ರೂ. ನಿವೃತ್ತಿಯ ಪ್ಯಾಕೇಜ್ ಸಿಗಲಿದೆ. ಆದರೆ, ಪಿಂಚಣಿ ಸೌಲಭ್ಯವಿರುವುದಿಲ್ಲ.

    ಸೇವಾ ಸಮಯದಲ್ಲಿ ಜೀವಹಾನಿಯಾದರೆ ಸೈನಿಕರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಗಳ ಪರಿಹಾರ ಸಿಗಲಿದೆ. ಜತೆಗೆ ಉಳಿದ ಸೇವಾ ಅವಧಿಯ ಸಂಬಳ ಪ್ರಾಪ್ತವಾಗಲಿದೆ. ಅಂಗವೈಕಲ್ಯ ಉಂಟಾದರೆ ಅದರ ಗಂಭೀರತೆಯ ಆಧಾರದಲ್ಲಿ ಪರಿಹಾರ ಸಿಗಲಿದೆ. ಸಾಮಾನ್ಯವಾಗಿ ಇದು 44 ಲಕ್ಷ ರೂಪಾಯಿವರೆಗೆ ಇರಲಿದೆ. ಜತೆಗೆ ಸೇವೆಯ ಉಳಿದ ಭಾಗದ ಸಂಬಳ ದೊರೆಯಲಿದೆ.

    ವೃತ್ತಿಪರತೆಗೆ ಧಕ್ಕೆ: ಈ ಯೋಜನೆಗೆ ಕೆಲವು ಆಕ್ಷೇಪಗಳು ವ್ಯಕ್ತವಾಗಿವೆ. ಸೇನೆಯಲ್ಲಿ ವೃತ್ತಿಪರತೆ, ಸ್ಪೂರ್ತಿ, ಹೋರಾಡುವ ಕೆಚ್ಚನ್ನು ಈ ಯೋಜನೆ ಕುಗ್ಗಿಸಲಿದೆ. ಈ ಯೋಜನೆಯಲ್ಲಿ ನೇಮಕವಾದವರು ಅಪಾಯದ ಕ್ಷೇತ್ರಗಳಿಗೆ ಹೋಗದೆ ಇರುವ ಸಾಧ್ಯತೆಯೂ ಇದೆ ಎಂಬ ಟೀಕೆ ಕೇಳಿಬಂದಿದೆ.

    ಹೊಸ ಸಿಡಿಎಸ್ ನೇಮಕ ಶೀಘ್ರ: ಮೂರೂ ಸೇನೆಗಳ ಪ್ರಧಾನ ದಂಡನಾಯಕ (ಸಿಡಿಎಸ್) ಹುದ್ದೆಯ ನೇಮಕ ಪ್ರಕ್ರಿಯೆಯಲ್ಲಿದ್ದು, ಶೀಘ್ರ ನೇಮಕಾತಿ ನಡೆಯಲಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

    ಸಿಡಿಎಸ್ ಹುದ್ದೆಯ ಅರ್ಹತೆಯನ್ನು ವಿಸ್ತರಿಸಿ ಸರ್ಕಾರ ಈ ತಿಂಗಳ ಮೊದಲವಾರ ಅಧಿಸೂಚನೆ ಪ್ರಕಟಿಸಿದ್ದು, ಭೂಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಶ್ರೇಣಿ, ವಾಯುಪಡೆಯಲ್ಲಿ ಏರ್ ಮಾರ್ಷಲ್, ನೌಕಾದಳದಲ್ಲಿ ವೈಸ್ ಅಡ್ಮಿರಲ್ ಹುದ್ದೆಯ ಅಥವಾ ಅದಕ್ಕೂ ಮೇಲ್ಪಟ್ಟ ರ್ಯಾಂಕ್​ನ ಹಾಲಿ ಅಥವಾ ನಿವೃತ್ತರು, 62 ವರ್ಷದೊಳಗಿರುವವರು ಅರ್ಹರು ಎಂದು ಹೇಳಿತ್ತು.

    ಕಳೆದ ಡಿಸೆಂಬರ್ 8ರಂದು ಊಟಿ ಸಮೀಪ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಸಾವನ್ನಪ್ಪಿದರು. ನಂತರ ಈ ಹುದ್ದೆ ಖಾಲಿ ಇದೆ. ಭೂಸೇನೆಯ ಮುಖ್ಯಸ್ಥರಾಗಿ ನಿವೃತ್ತರಾದ ಬಳಿಕ ರಾವತ್, 2020ರ ಜನವರಿ 1ರಂದು ಸಿಡಿಎಸ್ ಹುದ್ದೆಯನ್ನು ವಹಿಸಿಕೊಂಡಿದ್ದರು.

    ಅಗ್ನಿಪಥ ಯೋಜನೆಯಿಂದ ಸೇನೆಯಲ್ಲಿ ಆಮೂಲಾಗ್ರ ಬದಲಾವಣೆಯ ನಿರೀಕ್ಷೆ ಇದ್ದು, ಸೇನೆ ಯುವ ಬಲದಿಂದ ಸಶಕ್ತವಾಗಲಿದೆ. ಇದರಿಂದ ತಾಂತ್ರಿಕ ಮತ್ತು ಬೌದ್ಧಿಕವಾಗಿ ಹೆಚ್ಚು ಯುದ್ಧ ಕೌಶಲ ಹೊಂದಲು ಸಾಧ್ಯ. ಸೇನೆ ಸೇರಬೇಕೆಂಬ ಕನಸು, ಸೈನಿಕನೆಂದು ಕರೆಯಿಸಿಕೊಳ್ಳುವ ಹೆಮ್ಮೆಯು ಈ ಯೋಜನೆ ಮೂಲಕ ಯುವ ಜನರಿಗೆ ಪ್ರಾಪ್ತವಾಗಲಿದೆ. ಜತೆಗೆ ಉದ್ಯೋಗಾವಕಾಶವನ್ನು ಹೆಚ್ಚಿಸಲಿದೆ.

    | ರಾಜನಾಥ ಸಿಂಗ್ ರಕ್ಷಣಾ ಸಚಿವ

    ಬದಲಾವಣೆ ಕಾಣುತ್ತಿರುವ ಈ ಕಾಲಮಾನದಲ್ಲಿ ಸೇನೆಗೆ ಯುವ ಸಮುದಾಯದ ಹುಮ್ಮಸ್ಸು ಹಾಗೂ ಉತ್ಸಾಹವನ್ನು ಈ ಯೋಜನೆ ನೀಡಲಿದೆ. ಜತೆಗೆ ತಾಂತ್ರಿಕ ಪರಿವರ್ತನೆ ಮೂಲಕ ಹೆಚ್ಚಿನ ಸಾಮರ್ಥ್ಯ ಸೇನೆಗೆ ಸಿಗಲಿದೆ.

    | ಅನಿಲ್ ಪುರಿ, ಲೆಫ್ಟಿನೆಂಟ್ ಜನರಲ್

    ಆಯ್ಕೆ- ಸೇವಾ ಸೌಲಭ್ಯ: ಅಭ್ಯರ್ಥಿಗಳ ಆಯ್ಕೆ ಆನ್​ಲೈನ್ ಮೂಲಕ ಕೇಂದ್ರೀಯ ವ್ಯವಸ್ಥೆಯಡಿ ಪಾರದರ್ಶಕವಾಗಿ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ’ಅಗ್ನಿವೀರ’ ಎಂದು ಕರೆಯಲಾಗುತ್ತದೆ. ಸೇನೆ ಸೇರಲು ಇರುವ ವಿದ್ಯಾರ್ಹತೆ (10 ಇಲ್ಲವೇ 12ನೇ ತರಗತಿ), ದೇಹದಾರ್ಢ್ಯತೆಯ ಮಾನದಂಡಗಳು ಇದಕ್ಕೂ ಅನ್ವಯ ಆಗಲಿವೆ. ‘ಅಗ್ನಿಪಥ’ ನೇಮಕಾತಿ ಯೋಜನೆಯಲ್ಲಿ ಮಹಿಳೆಯರಿಗೂ ಅವಕಾಶ ಇದೆ. ನಾಲ್ಕು ವರ್ಷದ ಸೇವಾವಧಿಯನ್ನು ಮುಗಿಸಿದವರು ಕಾಯಂ ಸಿಬ್ಬಂದಿಯಾಗಲು ಅರ್ಜಿ ಸಲ್ಲಿಸಬಹುದು.

    ಯಾವ ಕೆಲಸ?: ಯೋಧರು, ಏರ್​ವೆುನ್, ನಾವಿಕರು

    ವಯೋಮಿತಿ: 17ವರೆ ವರ್ಷದಿಂದ 21 ವರ್ಷ

    ವೇತನ/ಭತ್ಯೆ

    • ಮೊದಲ ವರ್ಷ ಮಾಸಿಕ 30 ಸಾವಿರ ರೂ.
    • ನಾಲ್ಕನೇ ವರ್ಷ 40 ಸಾವಿರ ರೂ.ವರೆಗೆ ಏರಿಕೆ
    • ಇತರ ಭತ್ಯೆಗಳು ಅನ್ವಯ
    • 48 ಲಕ್ಷ ರೂ. ಮೊತ್ತದ ಜೀವ ವಿಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts