More

    ಬೆಂಗಳೂರಲ್ಲಿ ಅತಿ ಎತ್ತರದ ಸ್ಕೈಡೆಕ್​ ನಿರ್ಮಾಣಕ್ಕೆ ಡಿಕೆಶಿ ಪ್ರಸ್ತಾಪ: ಆಲದಮರ ಪರಿಕಲ್ಪನೆಯ ಸ್ಕೈಡೆಕ್​ ಹೀಗಿರಲಿದೆ ನೋಡಿ…

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸವಾಲಾಗಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸುರಂಗ ಮಾರ್ಗದ ಪರಿಕಲ್ಪನೆಯನ್ನು ತೆರೆದಿಟ್ಟಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಇದೀಗ ಮತ್ತೊಂದು ಮೆಗಾ ಯೋಜನೆಯ ಜಾರಿಗೆ ತರುವ ಆಲೋಚನೆ ಮಾಡುತ್ತಿದ್ದಾರೆ. ಏನದು ಆ ಮೆಗಾ ಯೋಜನೆ ಅಂದರೆ ಭಾರತದ ಟೆಕ್​ ರಾಜಧಾನಿ ಎಂದೇ ಖ್ಯಾತಿಯಾಗಿರುವ ಸಿಲಿಕಾನ್​ ಸಿಟಿಯಲ್ಲಿ 250 ಮೀಟರ್​ ಎತ್ತರದ ಸ್ಕೈಡೆಕ್ ನಿರ್ಮಾಣಕ್ಕೆ ಡಿಕೆಶಿ ಪ್ರಸ್ತಾಪ ಮಾಡಿದ್ದಾರೆ.

    ಒಂದು ವೇಳೆ ಈ ಪ್ರಸ್ತಾಪ, ಕಾರ್ಯರೂಪಕ್ಕೆ ಬಂದಲ್ಲಿ ನಿರ್ಮಾಣವಾಗುವ ಸ್ಕೈಡೆಕ್​ ದೇಶದಲ್ಲೇ ಅತಿಎತ್ತರದ ವೀಕ್ಷಣಾ ಗೋಪುರ ಎಂಬ ಹೆಗ್ಗಳಿಕೆಯನ್ನು ಹೊಂದಲಿದೆ.

    ಉಪಮುಖ್ಯಮಂತ್ರಿ ಮಾತ್ರವಲ್ಲದೆ, ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಕೆಶಿ, ಮಂಗಳವಾರ (ಅ.17) ಈ ಯೋಜನೆಗೆ ಬೇಕಾದ ಹಣಕಾಸಿನ ವೆಚ್ಚ ಮತ್ತು ಸ್ಥಳದ ಅವಶ್ಯಕತೆ ಸೇರಿದಂತೆ ಯೋಜನೆಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದಾರೆ. ಉದ್ದೇಶಿತ ಲ್ಯಾಂಡ್​ಮಾರ್ಕ್​ ನಿರ್ಮಾಣಕ್ಕಾಗಿ ರಾಜಧಾನಿಯ ಹೃದಯಭಾಗದಲ್ಲಿ 8 ರಿಂದ 10 ಎಕರೆ ಜಾಗವನ್ನು ಗುರುತಿಸುವಂತೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಡಿಕೆಶಿ ಸೂಚನೆ ಸಹ ನೀಡಿದ್ದಾರೆ.

    ನಿರ್ಮಾಣ ಮಾಡುವ ಕಂಪನಿ
    ಸ್ಕೈಡೆಕ್​ ಪ್ರಸ್ತಾವನೆಯನ್ನು ಆಸ್ಟ್ರೀಯಾ ಮೂಲದ ವಿನ್ಯಾಸ ಮತ್ತು ವಾಸ್ತುಶಿಲ್ಪ ಸಂಸ್ಥೆ ಕೂಪ್​ ಹಿಮ್ಮೆಲ್ಬ್​ (I) ಎಯು ವಿನ್ಯಾಸಗೊಳಿಸಿದೆ. ಈ ಸಂಸ್ಥೆ ಬೆಂಗಳೂರಿನ ವಿಶ್ವ ವಿನ್ಯಾಸ ಸಂಸ್ಥೆ (WDO) ಸಹಯೋಗದೊಂದಿಗೆ ಫ್ರಾನ್ಸ್​ನಲ್ಲಿ ಮ್ಯೂಸಿ ಡೆಸ್ ಕನ್ಫ್ಲುಯೆನ್ಸ್ (ಲಿಯಾನ್) ಮತ್ತು ಜರ್ಮನಿಯಲ್ಲಿ ಯೂರೂಪಿಯನ್​ ಸೆಂಟ್ರಲ್​ ಬ್ಯಾಂಕ್​ (ಫ್ರಾಂಕ್‌ಫರ್ಟ್) ನಂತಹ ಕಟ್ಟಡ ನಿರ್ಮಾಣಗಳಿಗೆ ಹೆಸರುವಾಸಿಯಾಗಿದೆ.

    ಸ್ಕೈಡೆಕ್​ ಮಾದರಿ ಹೇಗಿರಲಿದೆ?
    ಉಪಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿಗಳ ಪ್ರಕಾರ, ಮೆಗಾ ಸ್ಕೈಡೆಕ್​ ವಿನ್ಯಾಸವು ಭವ್ಯವಾದ ಆಲದ ಮರದ ವಿಸ್ತಾರವಾದ ಕೊಂಬೆಗಳು, ನೇತಾಡುವ ಬೇರುಗಳು ಮತ್ತು ಹೂಬಿಡುವ ಹೂವುಗಳ ನೈಸರ್ಗಿಕ ಬೆಳವಣಿಗೆಯಿಂದ ಪ್ರೇರಿತವಾಗಿದೆ ಎಂದು ಹೇಳಲಾಗುತ್ತದೆ. ಇದೇ ಕಲ್ಪನೆಯಲ್ಲಿ ಸ್ಕೈಡೆಕ್​ ಅನ್ನು ಬೇಸ್​, ಟ್ರಂಕ್​ ಮತ್ತು ಬ್ಲಾಸ್ಸಮ್​ ಎಂಬ ಮೂರು ಭಾಗಗಳಲ್ಲಿ ವಿಂಗಡಿಸಲಾಗಿದ್ದು, ಈ 250 ಮೀಟರ್ ಎತ್ತರದ ಅದ್ಭುತ ರಚನೆಯು ಪ್ರವಾಸಿಗರಿಗೆ ಪ್ರಕೃತಿಯ ಅಪ್ಪುಗೆಯಲ್ಲಿ ಮುಳುಗಿರುವ ಭಾವನೆಯನ್ನು ನೀಡಲಿದೆ. ಸ್ಕೈಡೆಕ್​ ಬೇಸ್​ನಲ್ಲಿ ನಗರ ಮತ್ತು ಸ್ಥಳದ ಇತಿಹಾಸ ಹೊಂದಿರಲಿದೆ. ಟ್ರಂಕ್​ ಭಾಗವು ಆಲದ ಮರದ ಬೆಳವಣಿಗೆಯನ್ನು ನೆನಪಿಸುವ ಅಮೋಘ ಪ್ರಯಾಣವನ್ನು ಸೂಚಿಸುತ್ತದೆ ಮತ್ತು ಮೂರನೇ ಭಾಗ ಬ್ಲಾಸ್ಸಮ್, ಅರಳಿದ ಹೂವಿನಿಂದ ಪ್ರೇರಿತವಾದ ದಾರಿದೀಪವನ್ನು ಹೋಲುತ್ತದೆ​ ಎಂದು ಅಧಿಕಾರಿಗಳು ವಿವರಣೆ ನೀಡಿದರು.

    ಇದನ್ನೂ ಓದಿ: ಕೊಡಗಿನ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ: ಕಾವೇರಮ್ಮನ ದರ್ಶನಕ್ಕೆ ಹರಿದು ಬಂದ ಭಕ್ತರ ದಂಡು

    ಶಕ್ತಿ ಉತ್ಪಾದನೆ
    ಈ ಸ್ಕೈಡೆಕ್​ ಅನ್ನು ಶಕ್ತಿ-ಸಮರ್ಥ ಮಾನದಂಡಗಳನ್ನು ಅಳವಡಿಸಿಕೊಂಡು ನಿರ್ಮಿಸಲಾಗುತ್ತದೆ. ಮೇಲ್ಭಾಗದಲ್ಲಿರುವ ವಿಂಗ್​ ಕ್ಯಾಚರ್ ಗಾಳಿಯ ದಿಕ್ಕನ್ನು ಎದುರಿಸಲು ತಿರುಗುತ್ತದೆ ಮತ್ತು ರೋಲರ್-ಕೋಸ್ಟರ್ ಡೆಕ್‌ನಲ್ಲಿರುವ ಸೌರ ಫಲಕಗಳು ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಅಲ್ಗಾರಿದಮಿಕ್ ಆಧಾರಿತ ಬೇಸ್ ರಚನೆಗಳು ಸಾಕಷ್ಟು ಗಾಳಿಯನ್ನು ಹಾದುಹೋಗಲು ಅನುವು ಮಾಡಿಕೊಡುತ್ತದೆ ಎಂದು ಅಧಿಕಾರಿಗಳು ಹೇಳಿದರು.

    ಸ್ಕೈಡೆಕ್​ನಲ್ಲಿ ಏನೇನು ಇರಲಿವೆ?
    ಈ ಸ್ಕೈಡೆಕ್​ ಒಮ್ಮೆ ಸಿದ್ಧವಾದರೆ, ಬಹುಮನರಂಜನಾ ಸೌಲಭ್ಯಗಳೊಂದಿಗೆ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯಲಿದೆ. ಬೇಸ್​ನಲ್ಲಿ ಶಾಪಿಂಗ್ ಪ್ಯಾಸೇಜ್​, ರೆಸ್ಟೋರೆಂಟ್​ಗಳು, ಚಿತ್ರಮಂದಿರ ಮತ್ತು ಸ್ಕೈಗಾರ್ಡನ್​ನಂತಹ ಹಲವು ಸೌಲಭ್ಯಗಳನ್ನು ಹೊಂದಿರಲಿದೆ. ಮೇಲ್ಭಾಗದಲ್ಲಿ ಒಂದು ರೋಲರ್​ ಕೋಸ್ಟರ್​ ನಿಲ್ದಾಣ, ಪ್ರದರ್ಶನ ಸಭಾಂಗಣ, ಸ್ಕೈಲಾಬಿ, ವಿಹಂಗಮ ನೋಟಕ್ಕಾಗಿ ಸ್ಕೈಡೆಕ್, ರೆಸ್ಟೋರೆಂಟ್​, ಬಾರ್​ ಮತ್ತು ವಿಐಪಿ ಏರಿಯಾ ಇರಲಿದೆ.

    ಡಿಕೆಶಿ ಹೇಳಿದ್ದೇನು?
    ಈ ಯೋಜನೆಯ ಬಗ್ಗೆ ಡಿ.ಕೆ. ಶಿವಕುಮಾರ್​ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದು, ಆಸ್ಟ್ರೀಯಾ ಮೂಲದ COOP HIMMELB(L)AU ಸಂಸ್ಥೆಯು ವರ್ಲ್ಡ್‌ ಡಿಸೈನ್ ಆರ್ಗನೈಸೇಶನ್ ಸಹಕಾರದೊಂದಿಗೆ ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಕೈ ಡೆಸ್ಕ್ ಯೋಜನೆಯನ್ನು ಪರಿಶೀಲಿಸಿದೆ. ಇದು ನಿರ್ಮಾಣವಾದ ನಂತರ ದೇಶದಲ್ಲೇ ಅತಿ ಎತ್ತರದ ವೀಕ್ಷಣಾ ಗೋಪುರ ಎನ್ನುವ ಕೀರ್ತಿಗೆ ಪಾತ್ರವಾಗಲಿದೆ. ಯೋಜನೆಯ ಅನುಷ್ಠಾನಕ್ಕೆ ಸೂಕ್ತವಾದ 8-10 ಎಕರೆ ಭೂಮಿಯನ್ನು ಗುರುತಿಸುವುದರ ಜೊತೆಗೆ ಆರ್ಥಿಕ ಕಾರ್ಯಸಾಧ್ಯತೆಯನ್ನು ನಿರ್ಣಯಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದಿದ್ದಾರೆ.

    ನಮ್ಮ ಹೃದಯದ ಆರೋಗ್ಯಕ್ಕಾಗಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಿಕೊಳ್ಳುವುದು ಹೇಗೆ? ಇಲ್ಲಿದೆ ಉಪಯುಕ್ತ ಸಲಹೆಗಳು…

    ಗಾಜಾದ ಆಸ್ಪತ್ರೆಯ ಮೇಲೆ ಭೀಕರ ಬಾಂಬ್​ ದಾಳಿ: 200 ಮಂದಿ ಸಾವು, ಹಮಾಸ್​ ಆರೋಪಕ್ಕೆ ಇಸ್ರೇಲ್​ ತಿರುಗೇಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts