More

    ಹಬ್ಬದ ನಂತರ ತೆರವು ಚುರುಕು

    ಹುಬ್ಬಳ್ಳಿ: ಅಂತು ಇಂತು ಬಿಆರ್​ಟಿಎಸ್ ಯೋಜನೆಯಡಿ ಸುಧಾರಣೆ ಕಾರ್ಯಕ್ರಮಗಳು ಒಂದೊಂದಾಗಿ ಜಾರಿಗೆ ಬರುತ್ತಿದ್ದು, ಜನರಿಗೆ ಸುಗಮ ಸಂಚಾರದ ಭರವಸೆ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ.

    ಪ್ರಸ್ತುತ ಹುಬ್ಬಳ್ಳಿ- ಧಾರವಾಡ ಮಧ್ಯೆ ಪಾದಚಾರಿ ಮಾರ್ಗ ನಿರ್ವಣಕ್ಕೆ ಮುಂದಡಿ ಇಟ್ಟಿರುವ ಬಿಆರ್​ಟಿಎಸ್ ಅಧಿಕಾರಿಗಳು ಅದಕ್ಕಾಗಿ ಎಲ್ಲೆಲ್ಲಿ ಅತಿಕ್ರಮಣವಾಗಿದೆಯೋ ಅಲ್ಲಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ.

    ಇಲ್ಲಿಯ ಹೊಸೂರಿನಿಂದ ಕಿಮ್ಸ್​ವರೆಗೆ ಫುಟ್​ಪಾತ್ ಅತಿಕ್ರಮಣ ತೆರವು ಮಾಡಲಾಗಿದ್ದು, ಅಲ್ಲಿ ಪಾದಚಾರಿಗಳು ಸುಗಮವಾಗಿ ಸಂಚರಿಸಲು ಬೇಕಾದ ವ್ಯವಸ್ಥೆ ಮಾಡಲಾಗುತ್ತಿದೆ.

    ಹಾಗೆ ನೋಡಿದರೆ 2012ರಲ್ಲಿ ಆರಂಭವಾದ ಬಿಆರ್​ಟಿಎಸ್ ಯೋಜನೆ 2015-16ರ ವೇಳೆಗೆ ಪೂರ್ಣಗೊಳ್ಳಬೇಕಾಗಿತ್ತು. ಸರ್ಕಾರಗಳ ಬದಲಾವಣೆ, ಬಿಆರ್​ಟಿಎಸ್ ವ್ಯವಸ್ಥಾಪಕ ನಿರ್ದೇಶಕರ ಬದಲಾವಣೆ ಸೇರಿ ಹತ್ತಾರು ಕಾರಣಗಳಿಗೆ ಕಾಮಗಾರಿಗಳು ತಡವಾಗಿವೆ. ಇದುವರೆಗೂ ನವಲೂರ ಬಳಿ ಒಂದು ಸೇತುವೆ ಕೂಡ ಆಗಿಲ್ಲ.

    ಇಂತಹ ಹಲವು ಇಲ್ಲಗಳ ಮಧ್ಯೆಯೂ ಬಿಆರ್​ಟಿಎಸ್ ಯೋಜನೆಯನ್ನು ಕಳೆದ ಫೆಬ್ರವರಿಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಲೋಕಾರ್ಪಣೆ ಮಾಡಿದ್ದಾರೆ. ಬಿಆರ್​ಟಿಎಸ್ ಕಾರಿಡಾರ್​ಗುಂಟ ನಿತ್ಯ ನೂರಕ್ಕೂ ಹೆಚ್ಚು ಚಿಗರಿ ಬಸ್​ಗಳು ಈಗ ಸಂಚಾರ ಮಾಡುತ್ತಿವೆ. ಹುಬ್ಬಳ್ಳಿಯ ಸಿಬಿಟಿಯಿಂದ ಧಾರವಾಡದ ಹೊಸ ಬಸ್ ನಿಲ್ದಾಣದವರೆಗೆ ಚಿಗರಿ ಸೇವೆ ಲಭ್ಯವಾಗುತ್ತಿದೆ.

    ಆದರೆ, ಕಾರಿಡಾರ್ ಅಕ್ಕಪಕ್ಕದ ಮಿಶ್ರ ಸಂಚಾರ ವ್ಯವಸ್ಥೆಯನ್ನು ನಿರ್ಲಕ್ಷ್ಯ ಮಾಡಿದ ಪರಿಣಾಮ ಸಾರ್ವಜನಿಕ ವಾಹನಗಳ ಸಂಚಾರ ದುಸ್ತರವಾಗುತ್ತಿದೆ. ಇಕ್ಕಟ್ಟು ರಸ್ತೆ, ಎಲ್ಲೆಂದರಲ್ಲಿ ವಾಹನಗಳ ರ್ಪಾಂಗ್, ಫುಟ್​ಪಾತ್ ಜಾಗ ಅತಿಕ್ರಮಣ ಮಾಡಿ ಜನರ ಬಳಕೆಗೆ ಸಿಗದಂತೆ ಮಾಡಿರುವುದು ಮುಂತಾದ ಕಾರಣಗಳಿಗೆ ಜನ ಓಡಾಡಲು ಪರದಾಡಬೇಕಿದೆ.

    ಕನಿಷ್ಠ ಪಕ್ಷ ನಗರ ವ್ಯಾಪ್ತಿಯಲ್ಲಿ ಫುಟ್​ಪಾತ್ ಮಾಡಿಕೊಡಿ ಎಂದು ಜನರು ದುಂಬಾಲು ಬಿದ್ದರೂ ಇದುವರೆಗೂ ಬಿಆರ್​ಟಿಎಸ್ ಅಧಿಕಾರಿಗಳು ಕಿವಿಗೆ ಹಾಕಿಕೊಂಡಿರಲಿಲ್ಲ. ಇದೀಗ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಅತಿಕ್ರಮಣ ತೆರವು ಕಾರ್ಯಕ್ಕೆ ಕೈ ಹಾಕಿದ್ದಾರೆ.

    ಸದ್ಯ ಹುಬ್ಬಳ್ಳಿ ಹೊಸೂರ ಭಾಗದಲ್ಲಿ ಅತಿಕ್ರಮಣ ತೆರವು ನಡೆದಿದೆ. ತೆರವು ಮಾಡಿದ ಜಾಗದಲ್ಲಿ ಸಾರ್ವಜನಿಕರ ಸುಗಮ ಓಡಾಟಕ್ಕೆ ಫುಟ್​ಪಾತ್ ನಿರ್ವಿುಸಿ ಕೊಡಲಾಗಿದೆ. ಇದೇ ರೀತಿ ಬೇರೆ ಎಲ್ಲ ಕಡೆ ತೆರವು ಹಾಗೂ ಫುಟ್​ಪಾತ್ ನಿರ್ಮಾಣ ನಡೆಯಲಿದೆ ಎನ್ನುತ್ತಾರೆ ಬಿಆರ್​ಟಿಎಸ್ ಅಧಿಕಾರಿಗಳು.

    ಆದರೆ, ದೀಪಾವಳಿ ಹಬ್ಬ ಮುಗಿಯುವವರೆಗೂ ಕೆಲವರು ಸ್ವಯಂ ಅತಿಕ್ರಮಣ ತೆರವಿಗೆ ಅವಕಾಶ ಕೇಳಿದ್ದು, ಅದಕ್ಕಾಗಿ ಒಂದಿಷ್ಟು ಬಿಡುವು ನೀಡಲಾಗಿದೆ. ಹಬ್ಬದ ನಂತರ ಮತ್ತೆ ಕಾರ್ಯಾಚರಣೆ ನಡೆಸುವ ಆಲೋಚನೆಯಲ್ಲಿ ಕಂಪನಿ ಇದೆ.

    ಅತಿಕ್ರಮಣ ಹೇಗೆ?: ಅವಳಿ ನಗರ ಮಧ್ಯೆ ಅದರಲ್ಲೂ ನಗರ ವ್ಯಾಪ್ತಿಯಲ್ಲಿ ಫುಟ್​ಪಾತ್ ಅತಿಯಾಗಿ ಅತಿಕ್ರಮಣವಾಗಿದೆ. ವಾಣಿಜ್ಯ ಮಳಿಗೆಗಳ ಮಾಲೀಕರು ಕಟ್ಟೆ, ಮೆಟ್ಟಿಲು ನಿರ್ಮಾಣ ಅಷ್ಟೇ ಅಲ್ಲ ಗೋಡೆಗಳನ್ನೂ ಕಟ್ಟಿಕೊಂಡು ಜನರು ನಡೆದಾಡಲು ತೊಂದರೆ ಪಡುವಂತೆ ಮಾಡಿದ್ದಾರೆ.

    ಬಿಆರ್​ಟಿಎಸ್ ಯೋಜನೆಯಲ್ಲಿ ಅವಳಿ ನಗರ ಮಧ್ಯೆ ಸುಸಜ್ಜಿತ ಫುಟ್​ಪಾತ್ ನಿರ್ವಿುಸುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಅದರಂತೆ ಭೂಸ್ವಾಧೀನ ಮಾಡಿಕೊಂಡು ಜಾಗದ ಮಾಲೀಕರಿಗೆ ಈಗಾಗಲೇ ಪರಿಹಾರ ಹಣ ಕೂಡ ನೀಡಲಾಗಿದೆ. ಹಾಗಿದ್ದರೂ ಫುಟ್​ಪಾತ್ ಇಲ್ಲದೇ ಜನ ಪರದಾಡುವಂತಾಗಿದೆ.

    ಪರಿಹಾರ ಕೊಟ್ಟರೂ… : ಯೋಜನೆಗೆ ಬೇಕಾದ ಒಟ್ಟು ಸುಮಾರು 72 ಎಕರೆ ಭೂಮಿಗಾಗಿ ಮಾಲೀಕರಿಗೆ 356 ಕೋಟಿ ರೂ. ಪರಿಹಾರ ನೀಡಲಾಗಿದೆ. ಇಷ್ಟೆಲ್ಲ ಪರಿಹಾರ ನೀಡಿದ್ದರೂ ಅಧಿಕಾರಿಗಳು ಭೂಸ್ವಾಧೀನ ಸರಿಯಾಗಿ ಮಾಡದೇ ಇರುವುದರಿಂದ ರಸ್ತೆ ಅತಿಕ್ರಮಣವಾಗಿದೆ. ಇದರಿಂದ ಆಗಾಗ ಟ್ರಾಫಿಕ್ ಜಾಮ್ ಸಾಮಾನ್ಯ ಎಂಬಂತಾಗಿದೆ. ಫುಟ್​ಪಾತ್ ನಿರ್ವಣದ ಜವಾಬ್ದಾರಿ ಹೊತ್ತಿರುವ ಕರ್ನಾಟಕ ರೋಡ್ ಡೆವಲಪಮೆಂಟ್ ಕಾಪೋರೇಶನ್ ಲಿಮಿಟೆಡ್ (ಕೆಆರ್​ಡಿಸಿಎಲ್) ಅಧಿಕಾರಿಗಳು ಅತಿಕ್ರಮಣ ತೆರವು ಮಾಡಿಕೊಟ್ಟರೆ ಕಾಮಗಾರಿ ಮಾಡಲು ಸಿದ್ಧ ಎನ್ನುತ್ತಾರೆ. ಹುಬ್ಬಳ್ಳಿ- ಧಾರವಾಡ ಅವಳಿನಗರ ಮಧ್ಯೆ ಮಿಶ್ರ ಸಂಚಾರ ರಸ್ತೆ ಪಕ್ಕ ಫುಟ್​ಪಾತ್ ನಿರ್ವಿುಸಲಾಗುತ್ತದೆ. ಅದಕ್ಕಾಗಿ ಎಲ್ಲೆಲ್ಲಿ ಅತಿಕ್ರಮಣವಾಗಿದೆಯೋ ಅಲ್ಲಿ ತೆರವು ಮಾಡಲಾಗುತ್ತದೆ. ಈಗಾಗಲೇ ಕೆಲವೆಡೆ ಅತಿಕ್ರಮಣ ತೆರವು ಮಾಡಿ ಫುಟ್​ಪಾತ್ ಮಾಡಲಾಗಿದೆ. ದೀಪಾವಳಿ ನಂತರ ಸ್ವಯಂ ತೆರವಿಗೆ ಕೆಲವರು ಸಮ್ಮತಿಸಿದ್ದಾರೆ. ಆದಾಗ್ಯೂ ಹಬ್ಬದ ನಂತರ ಮತ್ತೆ ಕಾರ್ಯಾಚರಣೆ ಪುನಾರಂಭವಾಗಲಿದೆ ಎಂದು ಬಿಆರ್​ಟಿಎಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಜಡೇನವರ ಪ್ರತಿಕ್ರಿಯಿಸಿದ್ದಾರೆ.

    ಎಲ್ಲಿದೆ ವಿಶ್ವದರ್ಜೆ?; ಬಿಆರ್​ಟಿಎಸ್ ಯೋಜನೆ ಬಂದಾಗಿನಿಂದ ಜನಪ್ರತಿನಿಧಿಗಳಿಂದ ಹಿಡಿದು ಅಧಿಕಾರಿಗಳು ಎಲ್ಲರೂ ಅತ್ಯಾಧುನಿಕ, ವರ್ಲ್ಡ್ ಕ್ಲಾಸ್ ಕಾಮಗಾರಿ, ಸೇವೆ ಎಂದೆಲ್ಲ ಹೇಳುತ್ತ ಬಂದಿದ್ದಾರೆ. ಆದರೆ, ಕಾರಿಡಾರ್ ಅಕ್ಕಪಕ್ಕ ಜನರ ಪರದಾಟ ಹೇಳತೀರದಾಗಿದೆ. ಹೇಳಿಕೊಳ್ಳಲಷ್ಟೇ ಇದು ವಿಶ್ವದರ್ಜೆ ಕಾರಿಡಾರ್ ಎನ್ನುವಂತಾಗಿದೆ. ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲ್ಪಟ್ಟ ಯೋಜನೆ ಕಾಮಗಾರಿ ಪೂರ್ಣಗೊಂಡರೆ ಅವಳಿನಗರ ಮಧ್ಯೆ ನುಣುಪಾದ ರಸ್ತೆಯಾಗಲಿದ್ದು, ಯಾವುದೇ ತೊಂದರೆ ಇಲ್ಲದೇ ಸುಗಮವಾಗಿ ಸಂಚಾರ ಮಾಡಬಹುದು ಎಂದು ಅಧಿಕಾರಿಗಳು ಕನಸಿನ ಗೋಪುರ ಕಟ್ಟಿದ್ದಾರೆ. ಅದನ್ನು ಸಾಕಾರಗೊಳಿಸುವ ಜವಾಬ್ದಾರಿಯೂ ಅವರ ಮೇಲಿದೆ.

    ಅರ್ಧಂಬರ್ಧ ಕಾಮಗಾರಿಯಿಂದಾಗಿ ಫುಟ್​ಪಾತ್ ಕಾಣುತ್ತಿಲ್ಲ. ಗಿಡಗಂಟಿಗಳು ಬೆಳೆದು ಪೊದೆಗಳು ರಸ್ತೆಗೆ ಬಂದಿವೆ. ರಸ್ತೆ ಬದಿ ಎಲ್ಲೆಂದರಲ್ಲಿ ವಾಹನ ರ್ಪಾಂಗ್ ಮಾಡಲಾಗುತ್ತಿದೆ. ಇಂತಹ ಯಡವಟ್ಟುಗಳಿಂದಾಗಿ ಈ ರಸ್ತೆ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts