More

    ಏ. 15 ನಂತರ ಸ್ಟಾರ್ ಪ್ರಚಾರಕರ ಲಗ್ಗೆ

    ಹುಬ್ಬಳ್ಳಿ : ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಈ ಮಧ್ಯೆ ಸ್ಟಾರ್ ಪ್ರಚಾರಕರನ್ನು ಕರೆಯಿಸಿ, ಮತದಾರರನ್ನು ಸೆಳೆಯುವ ತಂತ್ರಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೆರೆಡೂ ಮುಂದಾಗಿವೆ.

    ರಾಜ್ಯದಲ್ಲಿ 2 ಹಂತದಲ್ಲಿ ಮತದಾನ ನಡೆಯಲಿದ್ದು, ಧಾರವಾಡ ಲೋಕಸಭೆ ಕ್ಷೇತ್ರಕ್ಕೆ 2ನೇ ಹಂತದಲ್ಲಿ ಮತದಾನ ನಡೆಯಲಿದೆ. ಹೀಗಾಗಿ, ಏ. 15ರ ನಂತರವೇ ಎರಡೂ ರಾಷ್ಟ್ರೀಯ ಪಕ್ಷಗಳ ಸ್ಟಾರ್ ಪ್ರಚಾರಕರು ಕ್ಷೇತ್ರಕ್ಕೆ ಕಾಲಿಡುವ ನಿರೀಕ್ಷೆ ಇದೆ.

    ಏ. 25 ಮತ್ತು ಮೇ 2 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರ ಪ್ರಚಾರ ಮಾಡಲಿದ್ದಾರೆ. ಆದರೆ, ಕ್ಷೇತ್ರದ ಯಾವ ಸ್ಥಳದಲ್ಲಿ ಪ್ರಚಾರ ಸಮಾವೇಶ ಆಯೋಜಿಸಬೇಕೆಂಬುದು ಇನ್ನೂ ನಿಗದಿಗೊಂಡಿಲ್ಲ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರೂ ಚುನಾವಣೆ ಪ್ರಚಾರಕ್ಕೆ ಬರಲಿದ್ದಾರೆ. ಆದರೆ, ಇನ್ನೂ ದಿನ ನಿಗದಿಯಾಗಿಲ್ಲ. ಮೂಲಗಳ ಪ್ರಕಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಧಾರವಾಡ ಕ್ಷೇತ್ರಕ್ಕೆ ಬರುವ ಸಾಧ್ಯತೆ ಕಡಿಮೆ. ಕಾಂಗ್ರೆಸ್​ನ ಇನ್ನೂ ಹಲವಾರು ರಾಷ್ಟ್ರೀಯ ನಾಯಕರು ಬರುವ ನಿರೀಕ್ಷೆ ಇದೆ. ಆದರೆ, ನಾಯಕರ ಹೆಸರು, ದಿನ ಮತ್ತು ಸ್ಥಳ ಇನ್ನೂ ಸ್ಪಷ್ಟಗೊಂಡಿಲ್ಲ.

    ಧಾರವಾಡ ಕ್ಷೇತ್ರಕ್ಕೆ ಬಿಜೆಪಿ ಸ್ಟಾರ್ ಪ್ರಚಾರಕರಾದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಸ್ಮೃತಿ ಇರಾನಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮುಖಂಡರಾದ ಬಿ.ಎಸ್. ಯಡಿಯೂರಪ್ಪ, ಗೋವಿಂದ ಕಾರಜೋಳ, ಸಿ.ಟಿ. ರವಿ, ಪ್ರತಾಪ ಸಿಂಹ, ಬಸನಗೌಡ ಪಾಟೀಲ ಯತ್ನಾಳ, ಪಿ. ರಾಜೀವ ಬರುವ ನಿರೀಕ್ಷೆ ಇದೆ. ಚಿತ್ರನಟರಾದ ಸಂಸದೆ ಸುಮಲತಾ, ತಾರಾ ಅನುರಾಧಾ, ಜಗ್ಗೇಶ ಅವರು ಬರುವ ನಿರೀಕ್ಷೆ ಇದೆ. ಏ. 15ರಂದು ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ನಾಮಪತ್ರ ಸಲ್ಲಿಸಲಿದ್ದಾರೆ. ತದನಂತರವೇ ಬಿಜೆಪಿ ಸ್ಟಾರ್ ಪ್ರಚಾರಕರ ದಿನ ಮತ್ತು ಸ್ಥಳ ನಿಗದಿಗೊಳ್ಳಲಿದೆ. ಇದರೊಂದಿಗೆ ಬಿಜೆಪಿ ಪರ ಚುನಾವಣೆ ಪ್ರಚಾರಕ್ಕೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ನಿಖಿಲ್ ಕುಮಾರಸ್ವಾಮಿ ಅವರೂ ಬರುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts