More

    ಮುಂದುವರಿದ ಸಾರಿಗೆ ಮುಷ್ಕರ

    ಬೆಳಗಾವಿ: ಆರನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ಆಗ್ರಹಿಸಿ ಸಾರಿಗೆ ಸಂಸ್ಥೆಯ ನೌಕರರು ಎರಡನೇ ದಿನವೂ ಮುಷ್ಕರ ಮುಂದುವರಿಸಿದರು. ಗುರುವಾರವೂ ಸರ್ಕಾರಿ ಬಸ್‌ಗಳ ಸಂಚಾರ ಆರಂಭವಾಗದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.

    ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ, ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಹಲವು ಮಾರ್ಗಗಳಿಗೆ ಖಾಸಗಿ ಬಸ್ ಮತ್ತು ವಾಹನಗಳು ಕಾರ್ಯಾಚರಣೆ ನಡೆಸಿದವು. ಆದರೆ, ಎಂದಿನಂತೆ ಎಲ್ಲ ಮಾರ್ಗಗಳಲ್ಲಿ ಸಾರಿಗೆ ಸೌಲಭ್ಯವಿರಲಿಲ್ಲ. ಅದರಲ್ಲೂ, ಬೆಳಗಾವಿಯಿಂದ ಗ್ರಾಮೀಣ ಪ್ರದೇಶಗಳಿಗೆ ತೆರಳಲು ಬಸ್ ಸಿಗದೆ ಜನರು ಪ್ರಯಾಸಪಟ್ಟರು. ಮುಷ್ಕರದ ಲಾಭ ಪಡೆದ ಕೆಲ ಆಟೋರಿಕ್ಷಾ ಚಾಲಕರು, ಬೆಳಗಾವಿಯಲ್ಲಿ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದರು.

    ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಚಾಲಕರು, ನಿರ್ವಾಹಕರಿಗೆ ಕರೆ ಮಾಡಿ ಕೋರುತ್ತಿದ್ದೇವೆ. ಆದರೆ, ಒಂದಿಲ್ಲೊಂದು ನೆಪ ಹೇಳಿ ಗೈರಾಗುತ್ತಿದ್ದಾರೆ. ಆದರೂ, ಮನವೊಲಿಕೆ ಪ್ರಯತ್ನ ಮುಂದುವರಿಸಿದ್ದೇವೆ. ಒಂದುವೇಳೆ ನೌಕರರು ಹಠ ಮುಂದುವರಿಸಿದರೆ, ಸರ್ಕಾರದ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗದ ಸಂಚಾರ ಅಧಿಕಾರಿ ಕೆ.ಕೆ.ಲಮಾಣಿ ‘ವಿಜಯವಾಣಿ’ಗೆ ತಿಳಿಸಿದರು. ಬೆಳಗಾವಿ ವಿಭಾಗದಲ್ಲಿ ನಿತ್ಯ 660 ಬಸ್ ಕಾರ್ಯಾಚರಣೆ ನಡೆಸುತ್ತಿದ್ದವು. ಆದರೆ, ಗುರುವಾರ 3 ಬಸ್ ಮಾತ್ರ ಸಂಚರಿಸಿವೆ ಎಂದು ಮಾಹಿತಿ ನೀಡಿದರು.

    ಮನೆ ಸೌಲಭ್ಯ ರದ್ದು ಎಚ್ಚರಿಕೆ: ಸಾರಿಗೆ ಸಂಸ್ಥೆಯ ವಸತಿ ಸಮುಚ್ಚಯದಲ್ಲಿ ಹಂಚಿಕೆಯಾಗಿರುವ ಮನೆಯಲ್ಲಿ ವಾಸವಿದ್ದರೂ, ತುರ್ತು ಸಂದರ್ಭದಲ್ಲೂ ಕರ್ತವ್ಯಕ್ಕೆ ಹಾಜರಾಗದ ನೌಕರರಿಗೂ ಗುರುವಾರ ನೋಟಿಸ್ ಜಾರಿಗೊಳಿಸಲಾಗಿದೆ. ಕುಟುಂಬಸ್ಥರ ವಾಸಕ್ಕೆ ಅನುಕೂಲವಾಗಲೆಂದು ನೌಕರರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಆದರೂ, ಕೆಲಸಕ್ಕೆ ಅನಧಿಕೃತವಾಗಿ ಗೈರು ಹಾಜರಾದರೆ, ಮನೆ ಹಂಚಿಕೆ ರದ್ದುಪಡಿಸಬೇಕಾಗುತ್ತದೆ. ಹೀಗಾಗಿ ತಕ್ಷಣ ಕೆಲಸಕ್ಕೆ ಹಾಜರಾಗಬೇಕು ಎಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ. ಸಂಸ್ಥೆಯ ಭದ್ರತಾ ವಿಭಾಗದ ಸಿಬ್ಬಂದಿಯೇ ನೌಕರರ ಮನೆಗೆ ಹೋಗಿ ನೋಟಿಸ್ ನೀಡಿ ಬಂದಿದ್ದಾರೆ. ಆದರೂ, ಶುಕ್ರವಾರದಿಂದ ಕೆಲಸಕ್ಕೆ ಹಾಜರಾಗದಿದ್ದರೆ ನೌಕರರ ವಿರುದ್ಧ ಕ್ರಮ ಜರುಗಿಸುವುದು ಅನಿವಾರ್ಯ ಎಂದು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವ ಮುಂಜಿ ತಿಳಿಸಿದ್ದಾರೆ.

    ಕರ್ತವ್ಯಕ್ಕೆ ಹಾಜರಾಗಲು ತರಬೇತಿ ನೌಕರರಿಗೆ ನೋಟಿಸ್

    ಸಾರಿಗೆ ನೌಕರರು ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಬೆಂಬಲಿಸಿ ಗೈರು ಹಾಜರಾಗಿರುವ 36 ತರಬೇತಿ ನೌಕರರು ಏ. 9ರ ಒಳಗಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವ ಮುಂಜಿ ಸೂಚನೆ ನೀಡಿದ್ದಾರೆ. ಬೆಳಗಾವಿ, ಬೈಲಹೊಂಗಲ, ರಾಮದುರ್ಗ ಹಾಗೂ ಖಾನಾಪುರ ಘಟಕಗಳ ಚಾಲಕ, ತಾಂತ್ರಿಕ ಸಹಾಯಕ, ಚಾಲಕ-ಕಂ-ನಿರ್ವಾಹಕ, ನಿರ್ವಾಹಕ, ಕುಶಲಕರ್ಮಿಗಳು ಸೇರಿ ಒಟ್ಟು 36 ನೌಕರರು ತಮ್ಮ ತರಬೇತಿ ಅವಧಿಯಲ್ಲಿ, ಸರ್ಕಾರಿ ಆದೇಶದಲ್ಲಿನ ಷರತ್ತು ಉಲ್ಲಂಘನೆ ಮಾಡಿ ಗೈರು ಹಾಜರಾಗಿದ್ದಾರೆ. ಕರ್ತವ್ಯಕ್ಕೆ ಹಾಜರಾಗದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts