ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಸೂರ್ಯನತ್ತ ಪಯಣಿಸುತ್ತಿರುವ ಆದಿತ್ಯ ಎಲ್-1 ನೌಕೆಯಲ್ಲಿರುವ ಸೌರ ಮಾರುತ ಅಧ್ಯಯನಕ್ಕೆ ಸಂಬಂಧಿಸಿದ ಮತ್ತೊಂದು ಉಪಕರಣವು ದಕ್ಷತೆಯಿಂದ ಕಾರ್ಯನಿರ್ವಹಣೆ ಆರಂಭಿಸಿದೆ.
ಆದಿತ್ಯ-L1 ಉಪಗ್ರಹದಲ್ಲಿರುವ ಆದಿತ್ಯ ಸೌರ ಮಾರುತದ ಕಣ ಪ್ರಯೋಗ (Aditya Solar wind Particle Experiment- ASPEX) ಪೇಲೋಡ್ ತನ್ನ ಕಾರ್ಯಾಚರಣೆ ಪ್ರಾರಂಭಿಸಿದೆ. ASPEX ಪೇಲೋಡ್ ಎರಡು ಉಪಕರಣಗಳನ್ನು ಒಳಗೊಂಡಿದೆ. ಸೌರ ಮಾರುತ ಅಯಾನ್ ಸ್ಪೆಕ್ಟ್ರೋಮೀಟರ್ (ಸ್ವಿಸ್) ಮತ್ತು ಸುಪ್ರಾಥರ್ಮಲ್ – ಎನರ್ಜಿಟಿಕ್ ಪಾರ್ಟಿಕಲ್ ಸ್ಪೆಕ್ಟ್ರೋಮೀಟರ್ (ಸ್ಟೆಪ್ಸ್ ) ಇವುಗಳೇ ಆ ಎರಡು ಉಪಕರಣಗಳು.
ಸ್ಟೆಪ್ಸ್ ಉಪಕರಣವನ್ನು ಕಳೆದ ಸೆಪ್ಟೆಂಬರ್ 10 ಕಾರ್ಯಗತಗೊಳಿಸಿದರೆ, ಸ್ವಿಸ್ ಉಪಕರಣವನ್ನು ಈಗ ಸಕ್ರಿಯಗೊಳಿಸಲಾಗಿದೆ. ಇವೆರಡೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.
ಈ ಉಪಕರಣವು ಸೌರ ಮಾರುತ ಅಯಾನುಗಳನ್ನು, ಪ್ರಾಥಮಿಕವಾಗಿ ಪ್ರೋಟಾನ್‌ಗಳು ಮತ್ತು ಆಲ್ಫಾ ಕಣಗಳನ್ನು ಯಶಸ್ವಿಯಾಗಿ ಅಳೆಯುತ್ತದೆ. ಇದು ಸೌರ ಮಾರುತದ ನಡವಳಿಕೆಯ ಸಮಗ್ರ ಚಿತ್ರಣ ಒದಗಿಸುತ್ತದೆ. ಸೌರ ಮಾರುತದ ಗುಣಲಕ್ಷಣಗಳು ಹಾಗೂ ಭೂಮಿಯ ಮೇಲೆ ಇವುಗಳ ಪ್ರಭಾವದ ಬಗ್ಗೆ ಅಧ್ಯಯನ ನಡೆಸಲು ಇವು ಗಮನಾರ್ಹ ಕೊಡುಗೆ ನೀಡುತ್ತದೆ.
ಜ. 7ರಂದು ಅಂತಿಮ ನೆಲೆಗೆ ಆದಿತ್ಯ ನೌಕೆ:
ಭಾರತದ ಮೊದಲ ಸೌರ ಮಿಷನ್ ಆದಿತ್ಯ-ಎಲ್ 1 ಸೆಪ್ಟೆಂಬರ್ 2ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾ ದ್ವೀಪದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (SDSC) ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗಿದೆ.
ಈ ಬಾಹ್ಯಾಕಾಶ ನೌಕೆಯು ಭೂಮಿಯಿಂದ 125 ದಿನಗಳಲ್ಲಿ ಅಂದಾಜು 15 ಲಕ್ಷ ಕಿಮೀ ಪ್ರಯಾಣಿಸಿದ ನಂತರ, ಸೂರ್ಯನಿಗೆ ಹತ್ತಿರವಿರುವ ಲಗ್ರಾಂಜಿಯನ್ ಪಾಯಿಂಟ್ ಎಲ್1 ಸುತ್ತ ಹಾಲೋ ಕಕ್ಷೆಯಲ್ಲಿ ನೆಲೆಗೊಳ್ಳಲಿದೆ.
ಕಳೆದ ವಾರ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರು ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯು ಅಂತಿಮ ಹಂತವನ್ನು ಸಮೀಪಿಸುತ್ತಿದ್ದು, ಎಲ್ 1 ಪಾಯಿಂಟ್‌ಗೆ ಪ್ರವೇಶಿಸುವ ಕುಶಲತೆಯು ಬರುವ ಜನವರಿ 7ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.