More

    ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ತಂಡ ಪ್ರಥಮ

    ಚನ್ನರಾಯಪಟ್ಟಣ: ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಮೈಸೂರು ವಿಶ್ವವಿದ್ಯಾಲಯ ಮಲೆನಾಡು ವಲಯ ಅಂತರ ಕಾಲೇಜುಗಳ ಪುರುಷರ ವಿಭಾಗದ ಕಬಡ್ಡಿ ಪಂದ್ಯಾವಳಿಯಲ್ಲಿ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ತಂಡ ಪ್ರಥಮ ಸ್ಥಾನಗಳಿಸಿದೆ.

    ಪಟ್ಟಣದ ಶ್ರೀ ಆದಿಚುಂಚನಗಿರಿ ಸಮೂಹ ವಿದ್ಯಾಸಂಸ್ಥೆಗಳ ಆವರಣದಲ್ಲಿ ಆಯೋಜಿಸಿದ್ದ ಅಂತಿಮ ಪಂದ್ಯದಲ್ಲಿ ಆದಿಚುಂಚನಗಿರಿ ಕಾಲೇಜು ಕಬಡ್ಡಿ ತಂಡ ತನ್ನ ಎದುರಾಳಿ ಹಾಸನದ ಸರ್ಕಾರಿ ವಿಜ್ಞಾನ ಕಾಲೇಜಿನ ತಂಡವನ್ನು 21-10 ಅಂಕಗಳಿಂದ ಪರಾಭವಗೊಳಿಸಿತು. ಹಾಸನದ ವಿಜ್ಞಾನ ಕಾಲೇಜು ತಂಡ ದ್ವಿತೀಯ ಸ್ಥಾನಗಳಿಸಿದರೆ, ಹೆತ್ತೂರು ಬಿಪಿನ್ ರಾವತ್ ಪ್ರಥಮ ದರ್ಜೆ ಕಾನ್‌ಸ್ಟಿಟ್ಯೂಷನ್ ಕಾಲೇಜು ತಂಡ ತೃತೀಯ ಸ್ಥಾನಗಳಿಸಿತು.

    ಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ತಂಡದ ಆಟಗಾರರಾದ ಉತ್ತಮ್ ಡಿ.ರಾಜ್, ಗಿರೀಶ್ ಉತ್ತಮ ಹಿಡಿತಗಾರ ಪ್ರಶಸ್ತಿ ಪಡೆದರೆ, ಅದೇ ಕಾಲೇಜಿನ ಕರಣ್ ಗೌಡ, ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು. ಹಾಸನದ ವಿಜ್ಞಾನ ಕಾಲೇಜು ತಂಡದ ಪ್ರಜ್ವಲ್, ಉತ್ತಮ ದಾಳಿಗಾರ ಪ್ರಶಸ್ತಿ ಪಡೆದರು. ಪ್ರಥಮ ಮತ್ತು ದ್ವಿತೀಯ ಸ್ಥಾನಗಳಿಸಿದ ಎರಡೂ ತಂಡಗಳು ಮೇನಲ್ಲಿ ಮೈಸೂರಿನಲ್ಲಿ ಏರ್ಪಡಿಸಿರುವ ಮೈಸೂರು ವಿಶ್ವವಿದ್ಯಾಲಯ ಅಂತರ ಕಾಲೇಜುಗಳ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿವೆ.

    ಬಹುಮಾನ ವಿತರಿಸಿ ಮಾತನಾಡಿದ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ವಿ.ಮಹೇಶ್, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕ ಕ್ಷಮತೆ ಉಂಟಾಗುತ್ತದೆ. ಸೋಲು-ಗೆಲವು ಮುಖ್ಯವಲ್ಲ. ಬದಲಾಗಿ ಪಾಲ್ಗೊಳ್ಳುವಿಕೆ ಮುಖ್ಯ. ಕಬಡ್ಡಿ ವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಕ್ರಿಕೆಟ್ ನಂತರ ಅತ್ಯಂತ ಹೆಚ್ಚು ವೀಕ್ಷಕರನ್ನು ಹೊಂದಿರುವ ಹೆಗ್ಗಳಿಕೆ ಕಬಡ್ಡಿಗೆ ಇದೆ ಎಂದು ಹೇಳಿದರು.

    ಕಾಲೇಜು ಪ್ರಾಂಶುಪಾಲ ಎಂ.ಕೆ.ಮಂಜುನಾಥ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಪಿ. ಪ್ರಕಾಶ್ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಜೆ.ಭಾಸ್ಕರ್, ತೀರ್ಪುಗಾರರಾದ ಚಿಕ್ಕೇಗೌಡ, ಮಂಜುಶೆಟ್ಟಿ, ರಾಘವೇಂದ್ರ, ನಂದೀಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts