More

    ಅಹಿತಕರ ಘಟನೆ ಮರುಕಳಿಸಿದರೆ ನಿರ್ದಾಕ್ಷಿಣ್ಯ ಕ್ರಮ ಖಡಕ್ ಎಚ್ಚರಿಕೆ ನೀಡಿದ ಎಡಿಜಿಪಿ ಅಲೋಕಕುಮಾರ

    ರಟ್ಟಿಹಳ್ಳಿ: ಪಟ್ಟಣವು ಕೇವಲ 20 ಸಾವಿರ ಜನಸಂಖ್ಯೆ ಇದೆ. ಇಲ್ಲಿ ಪದೇಪದೆ ಕೋಮುಗಲಭೆ, ಅಹಿತಕರ ಘಟನೆಗಳು ಸಂಭವಿಸಬಾರದು. ಇದೇ ಕೊನೆಯಾಗಬೇಕು. ಮತ್ತೊಮ್ಮೆ ಇಂತಹ ಘಟನೆ ಮರುಕಳಿಸದರೆ ಕಠಿಣ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕಕುಮಾರ ಖಡಕ್ ಎಚ್ಚರಿಕೆ ನೀಡಿದರು.

    ಪಟ್ಟಣದಲ್ಲಿ ಹಿಂದು ಮತ್ತು ಮುಸ್ಲಿಂ ಮುಖಂಡರ ಸಮ್ಮುಖದಲ್ಲಿ ಬುಧವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

    ಮಾ. 9 ಮತ್ತು 14ರಂದು ಪಟ್ಟಣದಲ್ಲಿ ಏರ್ಪಡಿಸಿದ್ದ ಘಟನೆಗಳ ಬಗ್ಗೆ ವಿಡಿಯೋ ದೃಶ್ಯಾವಳಿ ಪರಿಶೀಲಿಸಿ, ಸಾಕ್ಷ್ಯಾಧರಿತವಾಗಿ ಕಾನೂನು ಕ್ರಮ ಜರುಗಿಸಲಾಗುವುದು. ಅಮಾಯಕರಿಗೆ ತೊಂದರೆ ನೀಡುವುದಿಲ್ಲ ಎಂದರು.

    ಕಾನೂನು ಎಲ್ಲ ಧರ್ವಿುಯರಿಗೂ ಒಂದೇ. ಕಾನೂನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಹಬ್ಬ, ಮೆರವಣಿಗೆ ಮಾಡಲು ಆಯಾ ಧರ್ಮದವರಿಗೆ ಹಕ್ಕಿದೆ. ಆದರೆ, ಮೆರವಣಿಗೆ, ಆಚರಣೆ ವೇಳೆ ಪೊಲೀಸ್ ಇಲಾಖೆ ನೀಡುವ ಮಾರ್ಗ ಮತ್ತು ಸಮಯದ ನಿಬಂಧನೆ ಪಾಲಿಸಬೇಕಾಗುತ್ತದೆ. ಮನೆಗಳಲ್ಲಿ ಆಚರಣೆಗೆ ಆದ್ಯತೆ ನೀಡಬೇಕು. ಹೊರಗಡೆ ಯಾವುದೇ ಧರ್ಮದ ಹಬ್ಬಗಳನ್ನು ಆಚರಿಸುವಾಗ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.

    ಪಟ್ಟಣದಲ್ಲಿ ಆಯೋಜಿಸಿದ್ದ ಬೈಕ್ ರ್ಯಾಲಿಯಲ್ಲಿ ರಾಣೆಬೆನ್ನೂರ, ಕುಂದಾಪುರ ಸೇರಿದಂತೆ ಹೊರಗಿನ ಜನರು ಭಾಗವಹಿಸಿದ್ದಾರೆ. ಇದರಿಂದ ಶಾಂತಿ ಕದಡುತ್ತದೆ. ಸಮಾಜದ ಮುಖಂಡರು ಈ ರೀತಿ ಘಟನೆಗಳಿಗೆ ಆಸ್ಪದ ಸಿಗದಂತೆ ಎಚ್ಚರಿಕೆ ವಹಿಸಬೇಕು. ನಾವು ಬಂದರೆ ಇಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗುತ್ತದೆ. ಈ ಘಟನೆ ಇಲ್ಲಿಗೆ ನಿಲ್ಲಿಸಬೇಕು. ಕೋಮುಗಲಭೆ, ಜಾತಿ ಗಲಭೆ, ರಾಜಕೀಯ ಗಲಭೆಗಳು ಜರುಗಿದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

    ಡಿಐಜಿ ಡಾ. ತ್ಯಾಗರಾಜನ್ ಮಾತನಾಡಿ, ಹಾವೇರಿ ಜಿಲ್ಲೆಯಲ್ಲಿ ಪದೇಪದೆ ಅಹಿತಕರ ಘಟನೆಗಳಿಗೆ ರಟ್ಟಿಹಳ್ಳಿ ಹೆಸರು ಮೊದಲು ಕೇಳಿ ಬರುತ್ತಿದೆ. ಗಲಾಟೆಗಳು, ಅಹಿತಕರ ಘಟನೆಗಳು ಸಂಭವಿಸಿದಾಗ ಅಮಾಯಕ ಜನರಿಗೆ, ಯುವಕರಿಗೆ ತೊಂದರೆಯಾಗುತ್ತದೆ. ಪೊಲೀಸ್ ಇಲಾಖೆಯೊಂದಿಗೆ ಜನರು ಸಹಕರಿಸಿದಾಗ ಈ ರೀತಿಯ ಘಟನೆಗಳು ಉದ್ಭವವಾಗುವುದಿಲ್ಲ. ಕಾನೂನಿನ ಚೌಕಟ್ಟಿನಡಿ ಪ್ರತಿಯೊಬ್ಬರೂ ಸೌಹಾರ್ದಯುತವಾಗಿ ಇರಬೇಕಾಗುತ್ತದೆ ಎಂದರು.

    ಜಿಲ್ಲಾ ವರಿಷ್ಠಾಧಿಕಾರಿ ಡಾ. ಶಿವಕುಮಾರ ಗುಣಾರೆ, ಡಿವೈಎಸ್​ಪಿ ಶ್ರೀಧರ, ತಹಸೀಲ್ದಾರ್ ಪ್ರಭಾಕರ, ಪಿಎಸ್​ಐ ಪ್ರವೀಣಕುಮಾರ ವಾಲೀಕಾರ ಹಾಗೂ ಹಿಂದು, ಮುಸ್ಲಿಂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts