More

    ಅದ್ದೂರಿ ಕಿತ್ತೂರು ಉತ್ಸವಕ್ಕೆ 5 ಕೋಟಿ ರೂ. ಅನುದಾನಕ್ಕಾಗಿ ಪ್ರಸ್ತಾವನೆ

    ಚನ್ನಮ್ಮನ ಕಿತ್ತೂರು: ಐತಿಹಾಸಿಕ ಕಿತ್ತೂರು ಉತ್ಸವವನ್ನು ಅದ್ದೂರಿಯಾಗಿ 3 ದಿನಗಳ ಕಾಲ ಆಚರಿಸಲಾಗುವುದು. ಅದಕ್ಕಾಗಿ 5 ಕೋಟಿ ರೂ. ಅನುದಾನ ನೀಡುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

    ಪಟ್ಟಣದ ವೀರಭದ್ರೇಶ್ವರ ಸಭಾ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಿತ್ತೂರು ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸರ್ಕಾರದಿಂದ ಸಾಕಷ್ಟು ಅನುದಾನ ತಂದರೂ ಉತ್ಸವದಲ್ಲಿ ಕುಂದುಕೊರೆತೆ ಎದ್ದು ಕಾಣುತ್ತಿದ್ದವು. ಕಿತ್ತೂರು ಅಭಿವೈದ್ಧಿಗೊಳ್ಳಬೇಕಾದರೆ ಸರಿಯಾದ ರೂಪುರೇಷೆ ಜತೆಗೆ ಅಧಿಕಾರಿಗಳ ಸಹಕಾರದ ಅವಶ್ಯಕತೆಯೂ ಇದೆ ಎಂದರು.

    ಮೈಸೂರು ದಸರಾದಷ್ಟು ಪ್ರಾಮುಖ್ಯತೆ ಕಿತ್ತೂರು ಉತ್ಸವಕ್ಕೆ ದೊರೆಯುತ್ತಿಲ್ಲ, ಇದು ಬೇಸರ ಮೂಡಿಸಿದೆ. ದಸರಾ ಮಾದರಿಯಲ್ಲಿಯೇ ತಾಯಿ ಚನ್ನಮ್ಮಾಜಿಯ ಉತ್ಸವವಾಗಬೇಕೆನ್ನುವುದು ನಮ್ಮ ಆಶಯ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿರುವ ವೀರರ ಭಾವಚಿತ್ರಗಳನ್ನು ಮುಂದಿನ ಉತ್ಸವದಲ್ಲಿ ಅಳವಡಿಸಲಾಗುವುದು, ಇತಿಹಾಸ ಅರಿತಿರುವ ನಿರೂಪಕರನ್ನು ಆಯ್ಕೆ ಮಾಡುವುದು ಉತ್ತಮ ಎಂದು ಹೇಳಿದರು.

    ಕೋಟೆಯಲ್ಲಿ ಶೌಚಗೃಹ ನಿರ್ಮಾಣಕ್ಕೆ ಜಾಗದ ಕೊರೆತೆ ಇದೆ. ಲೋಕೋಪಯೋಗಿ ಇಲಾಖೆಯಿಂದ 50 ಸುಸಜ್ಜಿತ ಶೌಚಗೃಹ ನಿರ್ಮಿಸಲು ನಾವು ಸಿದ್ಧ. ಆದರೆ, ಇಲ್ಲಿ ಸ್ಥಳಾವಕಾಶದ ಕೊರತೆ ಇದೆ. ಸ್ಥಳೀಯರು ಸ್ಥಳ ನೀಡಿ, ಇಲ್ಲ ಪಟ್ಟಣ ಪಂಚಾಯಿತಿ ಸ್ಥಳ ನಿಗದಿ ಪಡಿಸಿ ಅಲ್ಲಿ ಇಲಾಖೆಯಿಂದ ಶೌಚಗೃಹ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಈ ಭಾರಿಯ ಉತ್ಸವದಲ್ಲಿ ಕ್ರೀಡೆ, ವಿಚಾರ ಸಂಕೀರ್ಣ, ಕವಿಗೋಷ್ಠಿ ಸೇರಿದಂತೆ ಎಲ್ಲ ಚಟುವಟಿಕೆಗಳು ವಿಶಿಷ್ಟವಾಗಿರಲಿವೆ ಎಂದರು.

    ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಕಿತ್ತೂರು ಕೋಟೆ ಇತಿಹಾಸದ ಮಾಹಿತಿ ನೀಡಲು ಗೈಡ್ಸ್ ನೇಮಿಸುವುದು, ವಾರದಲ್ಲಿ ಎರಡು ಬಾರಿ ಧ್ವನಿ ಮತ್ತು ಬೆಳಕು ಪ್ರದರ್ಶನ ಸೇರಿ ಇತರ ಕೆಲಸ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ರಾಷ್ಟ್ರೀಯ ಹೆದ್ದಾರಿ ಮೇಲೆ ಸೂಕ್ತವಾಗಿ ಲೈಟಿಂಗ್ ವ್ಯವಸ್ಥೆ ಮಾಡಲಾಗುವುದು. ಸ್ಥಳೀಯ ಕಲಾವಿದರ ಜತೆಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಲಾವಿದರಿಗೂ ಆಹ್ವಾನ ನೀಡಲಾಗುವುದು. ಎಲ್ಲರು ಸಹಕಾರ ನೀಡುವಂತೆ ತಿಳಿಸಿದರು.

    ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಆರ್ಶಿವಚನ ನೀಡಿ ಉತ್ಸವ ಆಚರಿಸುವಂತೆ ತಿಳಿಸಿದರು. ಚಂದ್ರಗೌಡ ಪಾಟೀಲ, ಸಂಜೀವ ಲೋಕಾಪುರ, ಬಸನಗೌಡ ಚಿಕ್ಕನಗೌಡ್ರ, ಡಾ.ಎಸ್.ಬಿ.ದಳವಾಯಿ, ಎಂ.ಎ್ ಜಕಾತಿ, ಪ್ರವೀಣ ಸರದಾರ, ಡಿಸಿ ನಿತೇಶ ಪಾಟೀಲ, ಎಸ್ಪಿ ಡಾ.ಭೀಮಾಶಂಕರ ಗುಳೇದ, ಸಿಇಒ ಹರ್ಷಲ್ ಭೋಯರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಎಸಿ ಪ್ರಭಾವತಿ ಕ್ಕಿರಪುರ ಇತರರಿದ್ದರು.

    ಕಲೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಯಾವ ಮಂತ್ರಿ ಹಾಗೂ ಶಾಸಕರ ಪತ್ರವನ್ನು ಕಡ್ಡಾಯಗೊಳಿಸದೆ ಹೊಸಬರಿಗೆ ಅವಕಾಶ ನೀಡಿ. ಅಲ್ಲದೆ ಸ್ಥಳೀಯ ಕಲಾವಿದರನ್ನು ಕಡೆಗಣಿಸಬೇಡಿ.
    | ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts