More

    ಹೆಳವ ಸಮಾಜ ಎಸ್‌ಟಿಗೆ ಸೇರ್ಪಡೆಗೊಳಿಸಿ – ಹೆಳವ ಸಮಾಜದಿಂದ ಬೃಹತ್ ಪ್ರತಿಭಟನೆ

    ಬಾಗಲಕೋಟೆ: ಅಲೆಮಾರಿ ಹಿಂದುಳಿದ ಹೆಳವ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಸಬೇಕೆಂದು ಆಗ್ರಹಿಸಿ ಜಿಲ್ಲೆಯ ಹೆಳವ ಸಮಾಜದವರು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

    ನವನಗರದ ಕಲಾಭವನದಿಂಧ ಆರಂಭವಾದ ಮೌನ ಪ್ರತಿಭಟನೆ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು.

    ಹೆಳವ ಸಮಾಜವು ಅಲೆಮಾರಿ ಜನಾಂಗವಾಗಿದೆ. ಶತಮಾನಗಳಿಂದ ಒಂದೆಡೆ ನೆಲೆ ನಿಂತಿಲ್ಲ. ಇಂದಿಗೂ ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಹಿನ್ನಡೆ ಅನುಭವಿಸಿದೆ. ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸ್ತುದೆ. ಹೆಳವ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಲು ಆಗ್ರಹಿಸಿ ಹಲವಾರು ವರ್ಷಗಳಿಂದ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನಮ್ಮ ಬೇಡಿಕೆ ಬಗ್ಗೆ ಯಾವ ಸರ್ಕಾರಗಳು ಗಮನ ಹರಿಸುತ್ತಿಲ್ಲ. ಇದರಿಂದ ಬೀದಿಗಿಳಿದು ಹೋರಾಟ ನಡೆಸಬೇಕಾಗುವ ಅನಿವಾರ್ಯತೆ ಎದುರಾಗಿದೆ. ಅಲೆಮಾರಿ ಸಣ್ಣ ಸಮುದಾಯಕ್ಕೆ ನ್ಯಾಯ ಒದಗಿಸಲು ಸರ್ಕಾರ ಇಚ್ಛಾಶಕ್ತಿ ತೋರಿಸದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

    1975ರಲ್ಲಿ ಎಲ್.ಜಿ. ಹಾವನೂರ ವರದಿ, 1992 ರಲ್ಲಿ ಡಿ.ಕೆ.ನಾಯ್ಕರ ವರದಿಯಲ್ಲಿ ಹೆಳವ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಸೇರಿಸಲು ಶಿಫಾರಸು ಮಾಡಲಾಗಿದೆ. ಅಲ್ಲದೆ, 2018 ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದ ಡಾ.ಎಲ್. ಶ್ರೀನಿವಾಸ ಅವರು ಹೆಳವ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ನಾಲ್ಕು ವರ್ಷಗಳಿಂದ ಈ ಕಡತ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಲ್ಲೇ ಬಿದ್ದಿದೆ. ಮೀಸಲಾತಿ ಪಡೆಯುವ ಎಲ್ಲ ಅರ್ಹತೆ ಇದ್ದರೂ ಈ ಸಮಾಜಕ್ಕೆ ಅನ್ಯಾಯವಾಗಿದೆ. ನಿರ್ಲಕ್ಷೃ ಧೋರಣೆ ಇಲ್ಲಿಗೆ ನಿಲ್ಲಬೇಕು ಎಂದು ಆಗ್ರಹಿಸಿದರು.

    ಹೆಳವ ಸಮಾಜದ ಕೋಡಿಹಳ್ಳಿ ಮಠದ ಬಸವ ಭೃಂಗೀಶ್ವರ ಸ್ವಾಮೀಜಿ, ಬೀದರ ಜಿಲ್ಲೆ ಧುಮ್ಮನಸೂರ ಮಠದ ಶಂಕರಲಿಂಗ ಸ್ವಾಮೀಜಿ, ಅಖಿಲ ಕರ್ನಾಟಕ ಹೆಳವ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಪ್ಪ ಹೆಳವರ, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಬಿ.ಎಚ್. ಹಾಗೂ ಅಮೃತ ದಪ್ಪಿನವರ, ಆಂತರಿಕ ಲೆಕ್ಕಪರಿಶೋಧಕ ಎಚ್.ಎನ್. ಗೋಗಿ, ಜಿಲ್ಲಾಧ್ಯಕ್ಷ ಅಶೋಕ ಹೆಳವರ, ಪ್ರಧಾನ ಕಾರ್ಯದರ್ಶಿ ಕುಮಾರ ಹೆಳವರ, ಯುವ ಮುಖಂಡ ಸುನೀಲ ಹೆಳವರ ಇತರರಿದ್ದರು.

    ಶ್ರದ್ಧಾಂಜಲಿ : ಇದಕ್ಕೂ ಮುನ್ನ ಪ್ರತಿಭಟನಾಕಾರರು ಸಚಿವ ಉಮೇಶ ಕತ್ತಿ ನಿಧನದ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಎರಡು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts