More

    ಕಥೆ ಕೇಳಿ ಕೈ ಮುಗಿದಿದ್ದೆ:  ರಾಘವೇಂದ್ರ ಸ್ಟೋರ್ಸ್​ನಲ್ಲಿ ಚಿಕ್ಕಿಯ ಮೂಗುತಿ ಧರಿಸಿದ ಶ್ವೇತಾ

    ‘ಸಿಂಪಲ್ಲಾಗ್ ಒಂದ್ ಲವ್​ಸ್ಟೋರಿ’, ‘ಕಿರಗೂರಿನ ಗಯ್ಯಾಳಿಗಳು’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ಶ್ವೇತಾ ಶ್ರೀವಾತ್ಸವ್, ಆರು ವರ್ಷಗಳ ಗ್ಯಾಪ್ ನಂತರ ‘ಹೋಪ್’ ಚಿತ್ರದ ಮೂಲಕ ಮತ್ತೆ ವಾಪಸ್ಸಾದರು. ಇದೀಗ ‘ರಾಘವೇಂದ್ರ ಸ್ಟೋರ್ಸ್’ ಮತ್ತು ‘ಚಿಕ್ಕಿಯ ಮೂಗುತಿ’ ಚಿತ್ರಗಳಲ್ಲಿ ನಟಿಸಿರುವ ಅವರು, ಕಮ್​ಬ್ಯಾಕ್​ನಲ್ಲಿ ಕಮಾಲ್ ಮಾಡಲು ಹೊರಟಿದ್ದಾರೆ. ಈ ಚಿತ್ರಗಳಲ್ಲಿನ ಪಾತ್ರ, ಮುಂದಿನ ಯೋಜನೆ, ಮಗಳ ಆರೈಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ್ದಾರೆ.

    | ಹರ್ಷವರ್ಧನ್ ಬ್ಯಾಡನೂರು ಬೆಂಗಳೂರು

    ವಿಭಿನ್ನ ಪಾತ್ರಗಳನ್ನಷ್ಟೇ ಒಪ್ಪಿಕೊಳ್ಳುತ್ತೇನೆ

    ಶ್ವೇತಾ ಶ್ರೀವಾತ್ಸವ್ ಭಿನ್ನ, ವಿಭಿನ್ನ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. ‘ಪ್ರತಿಯೊಂದು ಚಿತ್ರದಲ್ಲೂ ವಿಭಿನ್ನವಾದ ಪಾತ್ರವಿದ್ದರೆ ಮಾತ್ರ ಒಪ್ಪಿಕೊಳ್ಳುತ್ತೇನೆ. ಆಗಷ್ಟೇ ‘ಕೆಜಿಎಫ್’ ಹಿಟ್ ಆಗಿತ್ತು. ಆಗ ‘ರಾಘವೇಂದ್ರ ಸ್ಟೋರ್ಸ್’ ಆಫರ್ ಬಂತು. ಚಿತ್ರರಂಗದಿಂದ ದೂರವಿದ್ದಾಗ, ಹೊಂಬಾಳೆಯಂತಹ ನಿರ್ಮಾಣ ಸಂಸ್ಥೆಯಿಂದ ಅವಕಾಶ ಸಿಕ್ಕರೆ ಒಳ್ಳೆಯದೇ ಅಲ್ವಾ? ನಿರ್ದೇಶಕ ಸಂತೋಷ್ ಆನಂದರಾಮ್ ಕಥೆ, ಪಾತ್ರದ ಬಗ್ಗೆ ಹೇಳಿದರು. ನನಗೂ ಇಷ್ಟವಾಯಿತು. ಜಗ್ಗೇಶ್ ಅವರು ಎಲ್ಲ ವಯೋಮಾನದವರೂ ಇಷ್ಟಪಡುವ ನಟ. ಹೀಗಾಗಿ ಒಪ್ಪಿಕೊಂಡೆ’ ಎನ್ನುತ್ತಾರೆ.

    ಹಲವು ಶೇಡ್​ಗಳಿರುವ ಪಾತ್ರ

    ‘ರಾಘವೇಂದ್ರ ಸ್ಟೋರ್ಸ್’ ಚಿತ್ರದಲ್ಲಿ ಶ್ವೇತಾ, ಹಲವು ಶೇಡ್​ಗಳಿರುವ ಪಾತ್ರದಲ್ಲಿ ನಟಿಸಿದ್ದಾರಂತೆ. ‘ಮುಗ್ಧ ಹಳೇ ಕಾಲದ ಐಯಂಗಾರಿ ಸಂಗೀತಗಾರ್ತಿ ಪಾತ್ರದಲ್ಲಿ ನಟಿಸಿದ್ದೇನೆ. ಮನೆಯಲ್ಲೇ ಸಂಪ್ರದಾಯವಾಗಿ ಬೆಳೆದ ಹುಡುಗಿ. ಈ ಹಿಂದೆ ಗಟ್ಟಿ, ಮಹಿಳಾ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದೆ. ಈ ಪಾತ್ರದಲ್ಲಿ ಹಲವು ಶೇಡ್​ಗಳಿವೆ. ಎಲ್ಲ ಬಗೆಯ ಭಾವನೆಗಳಿರುವ, ಸಿಟ್ಟನ್ನು ತಡೆದುಕೊಂಡ, ತ್ಯಾಗಮಯಿ ಹೆಣ್ಣು. ಜತೆಗೆ ಹಾಸ್ಯದ ಸ್ಪರ್ಶವೂ ಇದೆ. ಪ್ರತಿಯೊಬ್ಬರ ಮನೆಯಲ್ಲೂ ಈ ರೀತಿಯ ಪಾತ್ರಗಳಿರುತ್ತವೆ. ಸೂಕ್ಷ್ಮವಾದ ವಿಷಯವನ್ನು ತಮಾಷೆಯಾಗಿ ಮನಮುಟ್ಟುವಂತೆ ಹೇಳುವ ಪ್ರಯತ್ನ ಮಾಡಿದ್ದಾರೆ ಸಂತೋಷ್’ ಎಂದು ಮಾಹಿತಿ ನೀಡುತ್ತಾರೆ.

    ಮಗು ಆದ ಬಳಿಕ ಬಿಜಿ

    ಮಗಳು ಆಶ್ಮಿತಾ ಹುಟ್ಟಿದ ಬಳಿಕ ಶ್ವೇತಾ ಶ್ರೀವಾತ್ಸವ್ ಅವರಿಗೆ ವಿಭಿನ್ನ ಪಾತ್ರಗಳಲ್ಲಿ ಅವಕಾಶಗಳು ಹೆಚ್ಚಾಗಿವೆ. ‘‘ಹೋಪ್’ ಚಿತ್ರದಲ್ಲಿ ಅವಕಾಶ ಸಿಕ್ಕಾಗಿ ಮಗಳಿಗೆ ಎರಡೂವರೆ ವರ್ಷ. ಬೆಂಗಳೂರಿನಲ್ಲೇ ಶೂಟಿಂಗ್ ಇತ್ತು. ಬೆಳಗ್ಗೆ ಮನೆಯಿಂದ ಹೊರಟು, ಸಂಜೆ ಮನೆಗೆ ಬರುತ್ತಿದ್ದೆ. ಮಗಳಿಗೆ ಸಮಯ ಕೊಡುತ್ತಿದ್ದೆ. ಆದರೆ, ‘ರಾಘವೇಂದ್ರ ಸ್ಟೋರ್ಸ್’ ಚಿತ್ರದ ಶೂಟಿಂಗ್​ಗಾಗಿ 40 ದಿನ ಬೆಂಗಳೂರಿನಿಂದ ಹೊರಗೆ ಇರಬೇಕಿತ್ತು. ಮಹಿಳೆಯರು ಮಕ್ಕಳನ್ನು ಬಿಟ್ಟು ಹೊರಗೆ ಹೋಗಿ ಕೆಲಸ ಮಾಡುವುದು ತುಂಬ ಕಷ್ಟ. ನಾನು ಮಗಳನ್ನು ಬಿಟ್ಟು ಇರಲಾಗುವುದಿಲ್ಲ, ಎಂದು ಕಂಡೀಷನ್ ಹಾಕಿದ್ದೆ. ನಿರ್ವಪಕರು ಒಪ್ಪಿದರು. ಮಗಳು ಬೆಳಗ್ಗೆ ಏಳುವ ಮುನ್ನ ಹೊರಟುಬಿಡುತ್ತಿದ್ದೆ. ಸಂಜೆ ಶೂಟಿಂಗ್​ನಿಂದ ವಾಪಸ್ ಹೋಗಿ ಆಶ್ಮಿತಾ ಜತೆ ಕಾಲ ಕಳೆಯುತ್ತಿದ್ದೆ. ರಾತ್ರಿ ನಾನೇ ಆಕೆಗೆ ಊಟ ಮಾಡಿಸಬೇಕಿತ್ತು. ಒಂದೊಳ್ಳೆ ತಂಡದ ಜತೆ ಒಂದೊಳ್ಳೆ ಸಿನಿಮಾ ಮಾಡಿದ ಖುಷಿಯಿದೆ’ ಎನ್ನುತ್ತಾರೆ ಶ್ವೇತಾ.

    ಮಹಿಳಾ ಪ್ರಧಾನ ಚಿಕ್ಕಿಯ ಮೂಗುತಿ

    ಶ್ವೇತಾ ‘ಚಿಕ್ಕಿಯ ಮೂಗುತಿ’ ಎಂಬ ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಗ್ರಾಮೀಣ ಭಾಗದಲ್ಲಿ ನಡೆಯುವ ಭ್ರೂಣಹತ್ಯೆ ಸಂಬಂಧಿಸಿದ ಕಥೆ. ನಿಮ್ಮನ್ನೇ ತಲೆಯಲ್ಲಿಟ್ಟುಕೊಂಡು ಬರೆದ ಕಥೆ ಎಂದರು. ದೈಹಿಕವಾಗಿ, ಮಾನಸಿಕವಾಗಿ ದಣಿವಿನ ಪಾತ್ರ. ನನಗೆ ಆಗುವುದಿಲ್ಲ ಎಂದು ಕೈಮುಗಿದಿದ್ದೆ. ಅವರು ಹಿಂದೆ ಬಿದ್ದುಬಿಟ್ಟರು. ಕಿರುಚಾಟ, ಹೊಡೆದಾಟ, ಬಡಿದಾಟ, ಕೂದಲು ಎಳೆದಾಡುವುದು ಅಬ್ಬಬ್ಬಾ… ನನ್ನ ಕರಿಯರ್​ನ ಅತ್ಯಂತ ಕಷ್ಟದ ಚಿತ್ರವಿದು. ಡಬ್ಬಿಂಗ್​ನಲ್ಲೂ ಕಷ್ಟವಾಗಿತ್ತು’ ಎಂದು ಹೇಳಿಕೊಳ್ಳುತ್ತಾರೆ.

    ಮದುವೆ ಆಗಲು ಇಷ್ಟವಿಲ್ಲ ಆದರೆ ಇದು ಓಕೆ! ಸೌಂದರ್ಯದ ಗಣಿ ಹನಿ ರೋಸ್​ ಅಚ್ಚರಿಯ ಹೇಳಿಕೆ

    ಹೊಟ್ಟೆಪಾಡಿಗಾಗಿ ಸಾಬೂನು ಮಾರಲು ಬಿಡದ ಕಾಮುಕರು: ವಿಡಿಯೋ ಮೂಲಕ ನಟಿ ಐಶ್ವರ್ಯಾ ಬೇಸರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts