More

    ಶಾರದೆ ಹುಡುಕಿಕೊಂಡು ಮಧುಗಿರಿಗೆ ಬಂದೆ : ನಟ ಜಗ್ಗೇಶ್

    ಮಧುಗಿರಿ : ಮನುಷ್ಯನಿಗೆ ಹುಟ್ಟು-ಸಾವು ನಿರಂತರ ಪ್ರಕ್ರಿಯೆ. ಪರೋಪಕಾರವೇ ಅಮರ. ಮಂಜಮ್ಮ, ರತ್ನಮ್ಮ ಸಹೋದರಿಯರ ಗಂಟಲಿನಲ್ಲಿರುವ ಶಾರದೆಯನ್ನು ಹುಡುಕಿಕೊಂಡು ನಾನು ಮಧುಗಿರಿಗೆ ಬಂದಿದ್ದೇನೆ ಎಂದು ನಟ ಜಗ್ಗೇಶ್ ತಿಳಿಸಿದರು.

    ಕಸಬಾ ವ್ಯಾಪ್ತಿಯ ಡಿ.ವಿ.ಹಳ್ಳಿ ಗ್ರಾಮದಲ್ಲಿ ಜಗ್ಗೇಶ್ ಅಭಿಮಾನಿಗಳ ಬಳಗ ಮತ್ತು ಫ್ರೆಂಡ್ಸ್ ಗ್ರೂಪ್ ವತಿಯಿಂದ ಗುರುವಾರ ಅಂಧ ಗಾನ ಕೋಗಿಲೆ ಸಹೋದರಿಯರಿಗೆ ನಿರ್ಮಿಸಿರುವ ಮನೆಯ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.

    ನಾನು ಮತ್ತು ನನ್ನ ಮಡದಿ ಮನೆಯಲ್ಲಿ ಸರಿಗಮಪ ಕಾರ್ಯಕ್ರಮ ವೀಕ್ಷಿಸುತ್ತಿದ್ದಾಗ ಅಂಧ ಸಹೋದರಿಯರು ಕಷ್ಟ ಹೇಳಿಕೊಂಡು ಕಣ್ಣೀರಿಟ್ಟಾಗ ಇವರಿಗೆ ಏನಾದರೂ ಶಾಶ್ವತವಾದುದನ್ನು ನೀಡಬೇಕೆಂಬ ಹಿನ್ನೆಲೆಯಲ್ಲಿ ಕೊರಟಗೆರೆಯ ಜಗ್ಗೇಶ್ ಅಭಿಮಾನಿಗಳ ಬಳಗ ಮತ್ತು ಫ್ರೆಂಡ್ಸ್ ಗ್ರೂಪ್‌ನ ಮಲ್ಲಯ್ಯ ಮತ್ತು ಕೆ.ಎನ್. ರವಿಕುಮಾರ್ ಅವರಿಗೆ ತಿಳಿಸಿದಾಗ ಸಕಾರಾತ್ಮಕವಾಗಿ ಸ್ಪಂದಿಸಿ ಶ್ರೀ ರಾಯರ ಅನುಗ್ರಹದಿಂದ ಮನೆ ನಿರ್ಮಿಸಿಕೊಟ್ಟಿದ್ದು, ಇವರ ಅಭಿಮಾನದಿಂದ ನನ್ನ ಹೃದಯ ತುಂಬಿ ಬಂದಿದೆ ಎಂದರು.

    ಒಬ್ಬ ವ್ಯಕ್ತಿಯಿಂದ ಆರಂಭವಾಗಿ 1700 ಜನರು ಫ್ರೆಂಡ್ಸ್ ಗ್ರೂಪ್ ಮಾಡಿಕೊಂಡು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಸಮಾಜ ಮುಖಿ ಕೆಲಸ ಮಾಡುತ್ತಿದ್ದು, ನನಗೆ 150 ಚಲನಚಿತ್ರಗಳಲ್ಲಿ ಅಭಿನಯಿಸಿದಾಗ ಹೆಮ್ಮೆ ಅನಿಸಲಿಲ್ಲ. ಇಂತಹ ಅಭಿಮಾನಿಗಳನ್ನು ಸಂಪಾದಿಸಿರುವುದೇ ನನಗೆ ಹೆಮ್ಮೆ ಎಂದರು.

    ಮಾನವ ಜನ್ಮ ದೇವರು ನೀಡಿದ ಶ್ರೇಷ್ಠ ಕೊಡುಗೆ. ನಾವು ಸತ್ತರೆ ನಮ್ಮ ಹಿಂದೆ ಯಾರೂ ಬರುವುದಿಲ್ಲ. ನಾವು ಮಾಡಿದ ಪುಣ್ಯದ ಕೆಲಸಗಳು ನಮ್ಮ ಕೈ ಹಿಡಿಯಲಿದ್ದು, ನಮ್ಮ ಶತ್ರುಗಳಿಗೂ ಒಳಿತನ್ನೇ ಬಯಸಬೇಕು. ಪ್ರತಿಯೊಬ್ಬರೂ ಮತ್ತೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದು ಜನತೆಗೆ ಕಿವಿ ಮಾತು ಹೇಳಿದರು.

    ಸಿದ್ಧರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಎಲ್ಲ ಶ್ರೀಮಂತರಿಗೂ ಇಂತಹ ಹೃದಯ ಶ್ರೀಮಂತಿಕೆ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ನಡೆದಾಗ ದೇವರು ಎಲ್ಲರನ್ನೂ ರಕ್ಷಿಸುತ್ತಾನೆ ಎಂದರು.

    ಕಾಮಧೆೇನು ಮಠದ ಶ್ರೀರಾಘವೇಂದ್ರ ಸ್ವಾಮೀಜಿ ಮಾತನಾಡಿ, ಪುಣ್ಯ ಭೂಮಿಯಲ್ಲಿ ಹುಟ್ಟಿದ ಯಾರೂ ಅನಾಥರಲ್ಲ. ಪ್ರತಿಯೊಬ್ಬರಲ್ಲೂ ರಾಯರಿರುತ್ತಾರೆ. ಬಡತನವನ್ನು ಅನುಭವಿಸಿರುವವರು ಬಡವರಿಗೆ ಸಹಾಯ ಮಾಡುತ್ತಾರೆ. ನಟ ಜಗ್ಗೇಶ್‌ರವರು ಅಪ್ಪಟ ರಾಯರ ಭಕ್ತರಾಗಿದ್ದು, ರಾಯರ ಅನುಗ್ರಹದಿಂದ ಅಂಧ ಗಾನ ಸಹೋದರಿಯರ ಕಷ್ಟಕ್ಕೆ ಸ್ಪಂದಿಸಿ ಅವರಿಗೆ ನೆರವಿನ ಹಸ್ತ ಚಾಚಿದ್ದಾರೆ ಅವರಿಗೆ ಶುಭವಾಗಲಿ ಎಂದರು.

    ಪರಿಮಳಾ ಜಗ್ಗೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಶ್ರೀಧರ್, ಪುರಸಭಾ ಸದಸ್ಯ ಎಂ.ಎಲ್.ಗಂಗರಾಜು, ಮುಖಂಡ ತುಂಗೋಟಿ ರಾಮಣ್ಣ, ಡಿ.ವಿ.ಹಳ್ಳಿ ಗ್ರಾಪಂ ಉಪಾಧ್ಯಕ್ಷ ಆರ್.ಟಿ.ಪ್ರಭು, ಲತಾ ನಾರಾಯಣ್, ಜಗ್ಗೇಶ್ ಅಭಿಮಾನಿ ಬಳಗ ಮತ್ತು ಫ್ರೆಂಡ್ಸ್ ಗ್ರೂಪ್‌ನ ಪದಾಧಿಕಾರಿಗಳಾದ ಮುರಳಿ, ಶಿವಕುಮಾರ್, ನಟರಾಜು, ಪ್ರದೀಪ್, ಶ್ರೀಕಾಂತ್ ಗಿರೀಶ್ ಇತರರಿದ್ದರು.

    ಉಡಿ ತುಂಬಿದ ಸಹೋದರಿಯರು: ಅಂಧ ಗಾನ ಕೋಗಿಲೆಗಳಿಗೆ ಕಾಮಧೇನು ಮಠದಿಂದ 25 ಸಾವಿರ ರೂಪಾಯಿ, ಬೆಂಗಳೂರಿನ ಪೊಲೀಸ್ ಇಲಾಖೆ ವತಿಯಿಂದ 15 ಸಾವಿರ ರೂಪಾಯಿ, ರೈಲ್ವೆ ಇಲಾಖೆಯಿಂದ ಜೀವನ ಪರ್ಯಂತ ಸಂಚರಿಸಲು ಉಚಿತ ರೈಲ್ವೆ ಪಾಸ್ ವಿತರಿಸಲಾಯಿತು. ಕಷ್ಟಕ್ಕೆ ಸ್ಪಂದಿಸಿದ ಜಗ್ಗೇಶ್ ದಂಪತಿಯನ್ನು ಅಂಧ ಗಾಯಕಿಯರು ಸತ್ಕರಿಸಿದರು. ತಮ್ಮ ತಾಯಿಯನ್ನು ನೆನೆದು ಪರಿಮಳ ಜಗ್ಗೇಶ್ ಅವರಿಗೆ ತಾಯಿ ಸ್ಥಾನ ನೀಡಿ ಉಡಿತುಂಬಿ ಧನ್ಯತಾಭಾವ ವ್ಯಕ್ತಪಡಿಸಿದ ಹೃದಯ ಸ್ಪರ್ಶಿ
    ಘಟನೆಗೆ ಗ್ರಾಮಸ್ಥರು ಸಾಕ್ಷಿಯಾದರು.

    ಮಧುಗಿರಿಯ ದಂಡಿನ ಮಾರಮ್ಮ ದೇವಸ್ಥಾನದ ಬಳಿ ಹಾಡು ಹೇಳಿ ಜೀವನ ಸಾಗಿಸುತ್ತಿದ್ದ ಮಂಜಮ್ಮ ಮತ್ತು ರತ್ನಮ್ಮನವರ ಕಂಠಕ್ಕೆ ಇಡೀ ಕರ್ನಾಟಕವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜೀವನ ಪರ್ಯಂತ ಮಂಜಮ್ಮ, ರತ್ನಮ್ಮ ಕುಟುಂಬದವರಿಗೆ ದಿನಸಿ ಸಾಮಗ್ರಿ ಕೊಡಿಸುವುದಾಗಿ ಭರವಸೆ ನೀಡಿದ್ದು, ಪ್ರತಿಯೊಂದು ಹೃದಯವೂ ಇವರ ಕಷ್ಟಕ್ಕೆ ಸ್ಪಂದಿಸಲಿದೆ.
    ಜಗ್ಗೇಶ್ ಚಲನಚಿತ್ರ ನಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts