More

    ಖಾತೆ ಬದಲಾವಣೆಗೆ ಕಾರ್ಯಕರ್ತರ ಕ್ಯಾತೆ!

    ಗದಗ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರ ಖಾತೆ ಬದಲಿಸಿ ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕ್ರಮ ಜಿಲ್ಲಾ ಬಿಜೆಪಿಯಲ್ಲಿ ಕೊಂಚ ಬೇಸರ ಮೂಡಿಸಿದೆ.

    ಗಣಿ ಮತ್ತು ಭೂವಿಜ್ಞಾನ ಖಾತೆ ಹೊಂದಿದ್ದ ಸಿ.ಸಿ. ಪಾಟೀಲ ಅವರಿಗೆ ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ ನೀಡಲಾಗಿದೆ. ಮುರುಗೇಶ ನಿರಾಣಿ ಅವರು ಗಣಿ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

    ಈ ಕುರಿತು ಬಿಜೆಪಿ ಮುಖಂಡರು, ಕಾರ್ಯಕರ್ತರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿಲ್ಲವಾದರೂ ಆಪ್ತರೆದುರು ತಮ್ಮ ಸಂಕಟ ತೋಡಿಕೊಳ್ಳುತ್ತಿದ್ದಾರೆ. ಸಿ.ಸಿ. ಪಾಟೀಲ ಅವರು ಮುಖ್ಯಮಂತ್ರಿ ಅವರ ಪರಮಾಪ್ತರ ಪೈಕಿ ಒಬ್ಬರಾಗಿದ್ದಾರೆ. ಆದರೂ ಅವರ ಖಾತೆ ಬದಲಾವಣೆ ಮಾಡಿರುವುದು ಅನೇಕ ಕಾರ್ಯಕರ್ತರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ನುಂಗುವಂತೆಯೂ ಇಲ್ಲ. ಉಗುಳುವಂತೆಯೂ ಇಲ್ಲ ಎಂಬಂಥ ಸಂದಿಗ್ಧದಲ್ಲಿ ಸಚಿವರ ಆಪ್ತರು ಪೇಚಾಡುತ್ತಿದ್ದಾರೆ.

    ಕಳೆದ ಒಂದೂವರೆ ವರ್ಷದಿಂದ ಸಿ.ಸಿ. ಪಾಟೀಲ ಅವರು ಗಣಿ ಮತ್ತು ಭೂವಿಜ್ಞಾನ ಮತ್ತು ಕೆಲ ದಿನಗಳ ಕಾಲ ಅರಣ್ಯ ಖಾತೆಯನ್ನೂ ಅತ್ಯಂತ ಸಮರ್ಪಕವಾಗಿ ನಿಭಾಯಿಸಿದ್ದಾರೆ. ಇಲಾಖೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಆದರೂ ಪ್ರಬಲ ಖಾತೆ ಕಸಿದುಕೊಂಡು ಬೇರೊಂದು ಖಾತೆ ನೀಡಿರುವುದು ಸರಿಯಲ್ಲ. ಏನೇ ಆದರೂ ಖಾತೆ ಬದಲಾವಣೆ ಮಾಡಿರುವ ಕುರಿತು ಮುಖ್ಯಮಂತ್ರಿ ಅವರು ಇನ್ನೊಂದು ಸಲ ಯೋಚನೆ ಮಾಡಬೇಕು ಎಂದು ಹೆಸರು ಹೇಳಲಿಚ್ಛಿಸದ ಮುಖಂಡರೊಬ್ಬರು ‘ವಿಜಯವಾಣಿ’ ಜತೆ ಮಾತನಾಡಿದರು.

    ಪ್ರತಿಕ್ರಿಯೆ ನೀಡಲು ಹಿಂದೇಟು

    ಸಚಿವ ಸಿ.ಸಿ. ಪಾಟೀಲ ಅವರ ಖಾತೆ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಲು ಜಿಲ್ಲಾ ಮುಖಂಡರು, ಕಾರ್ಯಕರ್ತರು ಹಿಂದೇಟು ಹಾಕಿದರು. ಈ ಕುರಿತು ಅಭಿಪ್ರಾಯ ಪಡೆಯಲು ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ ಸೇರಿ ಹಲವು ಮುಖಂಡರ ಮೊಬೈಲ್ ಫೋನ್​ಗೆ ಕರೆ ಮಾಡಿದರೆ ನಾಟ್ ರಿಚೇಬಲ್ ಉತ್ತರ ಬಂದಿತು.

    ಖಾತೆ ಬದಲಾವಣೆ ಮಾಡಿರುವ ವಿಷಯದಲ್ಲಿ ನನಗೆ ಯಾವುದೇ ಅಸಮಾಧಾನ ಇಲ್ಲ. ಖಾತೆ ಹಂಚಿಕೆ, ಪುನರ್ ರಚನೆ ಮಾಡುವುದು ಮುಖ್ಯಮಂತ್ರಿ ಅವರ ಪರಮಾಧಿಕಾರ. ಈ ಹೀಗಾಗಿ ಇದರಲ್ಲಿ ಅಸಮಾಧಾನ ಆಗಿದೆ ಎಂಬ ಪ್ರಶ್ನೆಯೇ ಉದ್ಭವಿಸಲ್ಲ. ಈ ಹಿಂದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ, ಸಣ್ಣ ಕೈಗಾರಿಕೆ, ಅರಣ್ಯ ಮತ್ತು ಇಲ್ಲಿಯವರೆಗೆ ಇದ್ದ ಗಣಿ ಖಾತೆಯನ್ನೂ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ಇದೀಗ ನೀಡಿರುವ ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ ಖಾತೆಯನ್ನು ಅಷ್ಟೇ ಸಂತೋಷದಿಂದ ನಿಭಾಯಿಸುತ್ತೇನೆ. ನೀಡಿರುವ ಖಾತೆಯಲ್ಲಿ ಅಭಿವೃದ್ಧಿ ಕಾರ್ಯ ಮಾಡಲು ಪ್ರಯತ್ನಿಸುತ್ತೇನೆ.
    | ಸಚಿವ ಸಿ.ಸಿ. ಪಾಟೀಲ ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts