More

    ಕಿಡಿಗೇಡಿಗಳ ವಿರುದ್ಧ ಕ್ರಮ ನಿಶ್ಚಿತ: ಸಚಿವ ಮಧು ಭರವಸೆ

    ಶಿವಮೊಗ್ಗ: ರಾಗಿಗುಡ್ಡದ ಫ್ಲೆಕ್ಸ್ ವಿವಾದಕ್ಕೆ ಸಂಬಂಧಿಸಿದಂತೆ ಹಿರಿಯರು ಬುದ್ಧಿ ಹೇಳಿದರೂ ಕೆಲ ಹುಡುಗರು ಅದನ್ನು ಕೇಳಿಲ್ಲ. ಈ ಘಟನೆ ಬಗ್ಗೆ ವಿಷಾದವಿದೆ. ಇದು ಕಿಡಿಗೇಡಿಗಳ ಕೃತ್ಯ. ಧರ್ಮ, ಪಕ್ಷ ಎಲ್ಲವನ್ನೂ ಬಿಟ್ಟು ಇಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

    ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟದಲ್ಲಿ ನಷ್ಟ ಅನುಭವಿಸಿದ ಕೆಲವು ಕುಟುಂಬಗಳನ್ನು ಮಂಗಳವಾರ ಭೇಟಿ ಮಾಡಿ, ಮೆಗ್ಗಾನ್‌ನಲ್ಲಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲವೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರು ಅವರ ಕೆಲಸವನ್ನು ಸ್ವತಂತ್ರವಾಗಿ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
    ನಾನು ರಾಗಿಗುಡ್ಡ ಘಟನೆಯ ಪ್ರತಿ ಮಾಹಿತಿಯನ್ನೂ ಪಡೆಯುತ್ತಿದ್ದೇನೆ. ಈಗ ಕಾನೂನು ಸುವ್ಯವಸ್ಥೆ ಸ್ಥಾಪನೆಗೆ ಹೆಚ್ಚು ಒತ್ತು ನೀಡಬೇಕು. ಘಟನೆ ಏಕಾಯಿತು? ಹೇಗಾಯಿತು? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡುವುದು ಸರಿಯಲ್ಲ ಎಂದರು.
    ಸೆಕ್ಷನ್‌ಗೆ ಸಿಎಂ ಸೂಚಿಸಿದ್ರು: ಶಿವಮೊಗ್ಗದಲ್ಲಿ ನಿಷೇಧಾಜ್ಞೆ ವಿಧಿಸಲು ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಸೂಚಿಸಿದ್ದರು. ರಾಗಿಗುಡ್ಡದಲ್ಲಿ ನಡೆದಿರುವ ಘಟನೆಯ ಬಿಸಿ ಶಿವಮೊಗ್ಗದ ಬೇರೆ ಬಡಾವಣೆಗಳಿಗೆ ತಟ್ಟಬಾರದೆಂಬ ಕಾಳಜಿಯಿಂದ ಸಿಎಂ ನಿಷೇಧಾಜ್ಞೆ ವಿಧಿಸುವುದು ಸೂಕ್ತ ಎಂದು ತಿಳಿಸಿದ್ದರು. ಇದರಲ್ಲಿ ಜನರಿಗೆ ತೊಂದರೆ ಮಾಡಬೇಕೆಂಬ ಉದ್ದೇಶವಿಲ್ಲ ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
    ರಾಗಿಗುಡ್ಡ ಹೊರತುಪಡಿಸಿ ಶಿವಮೊಗ್ಗದ ವಿವಿಧ ಭಾಗಗಳಲ್ಲಿ ನಿಷೇಧಾಜ್ಞೆ ಸಂಪೂರ್ಣ ತೆರವು ಮಾಡಿಲ್ಲ. ಆದರೆ ಸ್ವಲ್ಪ ಸಡಿಲ ಮಾಡಿ ವ್ಯಾಪಾರ, ವಹಿವಾಟು, ಜನರು ಹಾಗೂ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ಆದರೆ ರಾಗಿಗುಡ್ಡದಲ್ಲಿ ಮಾತ್ರ ಕಠಿಣ ನಿರ್ಬಂಧ ಮುಂದುವರಿದಿದೆ. ಅಲ್ಲಿ ಪರಿಸ್ಥಿತಿ ಗಮನಿಸಿ ಕ್ರಮೇಣ ನಿಷೇಧಾಜ್ಞೆ ತೆರವು ಮಾಡಲಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts