More

    ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕ್ರಮ

    ಕಾರವಾರ: ಬಿನ್ ಶೇತ್ಗಿ ಮುಂತಾದ ಭೂ ಪರಿವರ್ತನೆಗೆ ಸರ್ಕಾರ ಜಾರಿಗೆ ತಂದಿರುವ ಅಫಿಡವಿಟ್ ಬೇಸ್ಡ್ ಲ್ಯಾಂಡ್ ಕನ್ವರ್ಶನ್ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಬಡ ರೈತರಿಗೆ ಆಗುವ ಅನ್ಯಾಯ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಮತ್ತಷ್ಟು ಕ್ರಮ ವಹಿಸಲಾಗಿದೆ ಎಂದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರತ್ಯೇಕ ಲಾಗಿನ್ ಹೊಂದಿರುವ ಎಲ್ಲ ಇಲಾಖೆಯ ಮುಖ್ಯಸ್ಥರು 15 ದಿನದಲ್ಲಿ ತಂತ್ರಾಂಶದಲ್ಲೇ ತಮ್ಮ ಅಭಿಪ್ರಾಯ ನೀಡಬೇಕು. ಒಂದೊಮ್ಮೆ ಪ್ರತಿಕೂಲ ಅಭಿಪ್ರಾಯ ನೀಡಿದಲ್ಲಿ ಅದಕ್ಕೆ ಸೂಕ್ತ ಕಾರಣವನ್ನೂ ನೀಡುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ ಎಂದಿದ್ದಾರೆ.

    ಭೂ ಪರಿವರ್ತನೆಯಲ್ಲಿ ಕಚೇರಿಯಿಂದ ಕಚೇರಿಗೆ ಅಲೆಯುವುದು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ತಂತ್ರಾಂಶ ಜಾರಿಗೆ ತರಲಾಗಿದೆ. ಆನ್​ಲೈನ್​ನಲ್ಲಿ ಒಂದು ಅರ್ಜಿ ಸಲ್ಲಿಕೆಯಾದರೆ 30 ದಿನಗಳ ಒಳಗೆ ಸಂಬಂಧಪಟ್ಟ ಎಲ್ಲ ಇಲಾಖೆ ಅಧಿಕಾರಿಗಳು ಅದಕ್ಕೆ ತಮ್ಮ ಅಭಿಪ್ರಾಯ ತಿಳಿಸಬೇಕು. 60 ದಿನಗಳ ಒಳಗೆ ಜಿಲ್ಲಾಧಿಕಾರಿ ಭೂ ಪರಿವರ್ತನೆಯ ಆದೇಶ ನೀಡಬೇಕು ಎಂದು ಸರ್ಕಾರದ ನಿಯಮ ಹೇಳುತ್ತದೆ. ಈ ವಿಧಾನವು ಸಂಪೂರ್ಣ ದಾಖಲೆಗಳ ಹಾಗೂ ತಂತ್ರಜ್ಞಾನ ಆಧಾರಿತವಾಗಿದೆ. ಎಲ್ಲಿಯೂ ಮದ್ಯವರ್ತಿಗಳ ಹಸ್ತಕ್ಷೇಪಕ್ಕೆ ಅವಕಾಶವೇ ಇಲ್ಲ. ದೋಷಮುಕ್ತ ಭೂ ಪರಿವರ್ತನೆ ಆದೇಶ ನೀಡುವ ದೃಷ್ಟಿಯಿಂದ ಅರ್ಜಿದಾರ ಭೂ ಪರಿವರ್ತನಾಪೂರ್ವ ನಕ್ಷೆಯನ್ನೂ ಕಡ್ಡಾಯ ಮಾಡಲಾಗಿದೆ. ಆದರೆ, ಕೆಲವು ಇಲಾಖೆಗಳು ಅವೈಜ್ಞಾನಿಕ ಕಾರಣ ನೀಡಿ ಭೂ ಪರಿವರ್ತನೆ ಪ್ರಕರಣ ತಿರಸ್ಕರಿಸುತ್ತಿರುವುದರಿಂದ ಮಾಲೀಕರಿಗೆ ತೊಂದರೆ ಉಂಟಾಗುತ್ತಿದೆ. ಮಧ್ಯವರ್ತಿಗಳ ಹಸ್ತಕ್ಷೇಪವಾಗುತ್ತಿದೆ ಎಂಬ ದೂರು ಬಂದಿದೆ. ಇದರಿಂದ ಮತ್ತಷ್ಟು ಕ್ರಮ ವಹಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

    ಇನ್ನಷ್ಟು ಜಾಗೃತಿ ಬೇಕು

    ಸರ್ವೆ ಮತ್ತು ಭೂ ದಾಖಲೆಗಳ ಇಲಾಖೆ ಭೂಮಿ ಉಸ್ತುವಾರಿ ಕೋಶದ ಮೂಲಕ 2019 ರ ಫೆ. 14 ರಿಂದ ಪ್ರಮಾಣಪತ್ರ ಆಧಾರಿತ ಭೂಮಿ ಪರಿವರ್ತನಾ ವ್ಯವಸ್ಥೆ ಜಾರಿಗೆ ತಂದಿದೆ. ಈ ಹಿಂದೆ ಭೂ ಪರಿವರ್ತನೆ ಅರ್ಜಿಗಳ ವಿಲೇವಾರಿಗೆ ಹಲವು ತಿಂಗಳು ಬೇಕಿತ್ತು. 30-40 ದಾಖಲೆಗಳನ್ನು ಸಲ್ಲಿಸಬೇಕಿತ್ತು. ಅರ್ಜಿದಾರರು ಜಿಲ್ಲಾಧಿಕಾರಿ ಕಚೇರಿಗೆ ಅಲೆಯಬೇಕಿತ್ತು. ಅಂಥ ಸಮಸ್ಯೆ ತಪ್ಪಿದೆ. ಆದರೆ, ಅರ್ಜಿದಾರರಲ್ಲಿ ಈ ವ್ಯವಸ್ಥೆಯ ಬಗ್ಗೆ ಸಮಪರ್ಕ ಮಾಹಿತಿ ಇಲ್ಲ ಇದರಿಂದ ದಾಖಲೆ ಕಲೆ ಹಾಕಲು ಹಾಗೂ ಅರ್ಜಿ ಸಲ್ಲಿಕೆಗಾಗಿ ಜಮೀನಿನ ಒಡೆಯರು ಮಧ್ಯವರ್ತಿಗಳ ಮೊರೆ ಹೋಗುತ್ತಿದ್ದಾರೆ ಎಂಬ ಮಾಹಿತಿ ಇದೆ.

    ಅರ್ಜಿ ಸಲ್ಲಿಕೆ ಹೇಗೆ

    ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸುವವರು ಮೊದಲ ಹಂತದಲ್ಲಿ ತಮ್ಮ ಮಾಹಿತಿಗಳನ್ನು ಆನ್​ಲೈನ್​ನಲ್ಲಿ ಭರ್ತಿ ಮಾಡಿ ಅಫಿಡವಿಟ್ ಕ್ರಿಯೇಟ್ ಮಾಡಬೇಕು. ನಂತರ ನೋಟರಿಯಿಂದ ಸಹಿ ಮಾಡಿಸಿ ತಮ್ಮ ಸಹಿ ಮತ್ತು ಅರ್ಜಿದಾರರ ಸಹಿಯೊಂದಿಗೆ ತಂತ್ರಾಂಶದಲ್ಲಿ ದಾಖಲೆಗಳನ್ನು ಅಪ್​ಲೋಡ್ ಮಾಡಬೇಕು. ಅರ್ಜಿಗೆ ನಿರ್ದಿಷ್ಟ ಸಂಖ್ಯೆ ನೀಡಲಾಗುತ್ತದೆ. ಅರ್ಜಿದಾರರು ಅದನ್ನು ಬಳಸಿಕೊಂಡು ತಮ್ಮ ಅರ್ಜಿ ಯಾವ ಹಂತದಲ್ಲಿದೆ. ಯಾರ ಟೇಬಲ್ ಮೇಲಿದೆ ಎಂಬುದನ್ನು ಟ್ರ್ಯಾಕ್ ಮಾಡಬಹುದಾಗಿದೆ.

    ತಂತ್ರಾಂಶದಲ್ಲಿ ಹೆಚ್ಚಿನ ಸುಧಾರಣೆ ತರಲು ಸತತವಾಗಿ ಸರ್ಕಾರ ಶ್ರಮಿಸಿ ಸೂಕ್ತ ಬದಲಾವಣೆ ತರುತ್ತಿದೆ.

    ಡಾ.ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts