More

    ಅನಧಿಕೃತ ಲೇಔಟ್​ಗೆ ಕಡಿವಾಣ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಅವಳಿ ನಗರದಲ್ಲಿ ಸ್ವಂತ ಮನೆ, ಆಸರೆ ಇಲ್ಲದವರಿಗಾಗಿ ಸುಮಾರು 10 ಸಾವಿರ ನಿವೇಶನ ಅಭಿವೃದ್ಧಿ ಪಡಿಸಿ ಹಂಚಿಕೆ ಮಾಡುವ ಜೊತೆಗೆ ಅನಧಿಕೃತ ವಸತಿ ವಿನ್ಯಾಸಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ನಾಗೇಶ ಕಲಬುರ್ಗಿ ಎಚ್ಚರಿಕೆ ನೀಡಿದ್ದಾರೆ.

    ಇಲ್ಲಿಯ ನವನಗರದ ಹುಡಾ ಕಚೇರಿಯಲ್ಲಿ ಶುಕ್ರವಾರ ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆರೇಳು ವರ್ಷದಿಂದ ಹೊಸ ವಸತಿ ಯೋಜನೆ ರೂಪುಗೊಂಡಿಲ್ಲ. ಇದರಿಂದ ಸಾವಿರಾರು ಕುಟುಂಬಗಳು ಸ್ವಂತ ಸೂರು ಇಲ್ಲದೇ ಬಳಲುತ್ತಿವೆ. ಇದು ನಮ್ಮ ಗಮನದಲ್ಲಿದೆ. ಅದಕ್ಕಾಗಿ ಹುಬ್ಬಳ್ಳಿ, ಧಾರವಾಡ, ನವನಗರ ಇತರೆಡೆಗಳಲ್ಲಿ ಜಮೀನು ಗುರುತಿಸಿ ವಸತಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಅದಕ್ಕಾಗಿ ರೈತರೊಂದಿಗೆ ಮಾತುಕತೆ ನಡೆಸಿ ಪ್ರತಿಶತ 50:50 ಅನುಪಾತದಲ್ಲಿ ಲೇಔಟ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ಗುಂಪು ವಸತಿ ಯೋಜನೆ 2016ರಲ್ಲೇ ಸಿದ್ಧಪಡಿಸಲಾಗಿದ್ದು, ಅದು ಯಾವ ಹಂತದಲ್ಲಿ ಇದೆ ಎಂಬುದನ್ನು ನೋಡಿ ಮುಂದಿನ ಪ್ರಕ್ರಿಯೆ ಚುರುಕುಗೊಳಿಸಲಾಗುವುದು ಎಂದರು.

    ಎಚ್ಚರಿಕೆ: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ತಲೆ ಎತ್ತಿರುವ ಅನಧಿಕೃತ ವಸತಿ ವಿನ್ಯಾಸಗಳ ಪಟ್ಟಿ ಮಾಡಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಮತ್ತು ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಯಾರೂ ಅಕ್ರಮ, ಅನಧಿಕೃತ ಲೇಔಟ್ ನಿರ್ಮಾಣ ಮಾಡುವಂತಿಲ್ಲ. ಅಕ್ರಮ ತಡೆಯಲು ಅಧಿಕಾರಿಗಳ ತಂಡ ರಚಿಸಲಾಗುವುದು. ನಾಳೆಯಿಂದಲೇ ಅಕ್ರಮ ಲೇಔಟ್​ಗಳ ಪಟ್ಟಿ ಮಾಡಿಸಲಾಗುವುದು ಎಂದರು.

    ಹಂಚಿಕೆ: ಈಗಾಗಲೇ ಪ್ರಾಧಿಕಾರ ರಚನೆ ಮಾಡಿರುವ ಲಕಮನಹಳ್ಳಿ, ಅಮರಗೋಳ ಮುಂತಾದೆಡೆಯ ಹಂಚಿಕೆಯಾಗದಿರುವ ನಿವೇಶನಗಳನ್ನು ತಿಂಗಳೊಳಗೆ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ವಿವಿಧ ವಸತಿ ವಿನ್ಯಾಸಗಳಲ್ಲಿ ನಾಗರಿಕ ಉದ್ದೇಶಕ್ಕೆ (ಸಿಎ) ಮೀಸಲಾಗಿರುವ ನಿವೇಶನಗಳನ್ನು ಅರ್ಹ ಹಾಗೂ ಉತ್ತಮ ಸಂಘ ಸಂಸ್ಥೆಗಳಿಗೆ ಒದಗಿಸ ಲಾಗುವುದು ಎಂದು ನಾಗೇಶ ಹೇಳಿದರು.

    ಸಿಡಿಪಿ ಪ್ರಕಾರ ಯೋಜನಾಬದ್ಧ ನಗರ ನಿರ್ವಣಕ್ಕೆ ಆದ್ಯತೆ ನೀಡಲಾಗುವುದು. ಸಾರ್ವಜನಿಕರು ಸಹ ಕಾನೂನು ಬದ್ಧ ನಿವೇಶನ ಮಾತ್ರ ಖರೀದಿಸಬೇಕು. ಹುಡಾದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವೆ ಎಂದರು.

    ಹುಡಾ ಆಯುಕ್ತ ಎನ್.ಎಚ್. ಕುಮ್ಮಣ್ಣವರ, ನಗರಯೋಜನಾ ಸದಸ್ಯ ವಿವೇಕ ಕಾರೇಕರ, ಮಾಜಿ ಶಾಸಕ ಅಶೋಕ ಕಾಟವೆ, ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ, ಎಪಿಎಂಸಿ ಸದಸ್ಯ ಚನ್ನು ಹೊಸಮನಿ, ಇತರ ಗಣ್ಯರು ಉಪಸ್ಥಿತರಿದ್ದರು.

    ಪೂಜೆ ಸಲ್ಲಿಸಿ ಅಧಿಕಾರ ಸ್ವೀಕಾರ: ಹುಡಾ ಅಧ್ಯಕ್ಷರ ಕಚೇರಿಯಲ್ಲಿ ಅರ್ಚಕರಿಂದ ಪೂಜೆ ಸಲ್ಲಿಸಿದ ನಂತರ ನಾಗೇಶ ಕಲಬುರ್ಗಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಜಗದೀಶ ಶೆಟ್ಟರ್, ಪ್ರಲ್ಹಾದ ಜೋಶಿ, ಬಿಜೆಪಿ ಶಾಸಕರು, ಕಾರ್ಯಕರ್ತರಿಗೆ ನಾಗೇಶ ಧನ್ಯವಾದ ಸಲ್ಲಿಸಿದರು. ‘ಈ ಹಿಂದೆ 2001ರಲ್ಲಿ ಮಹಾನಗರ ಪಾಲಿಕೆ ಸದಸ್ಯ ಹಾಗೂ 2009ರಲ್ಲಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯನಾಗಿ ಕಾರ್ಯನಿರ್ವಹಿಸಿದ ಅನುಭವ ತಮಗಿದೆ. ಈ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ’ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts