More

    ಕೋವಿಡ್ ಕರ್ತವ್ಯ ನಿರಾಕರಿಸಿದರೆ ಕ್ರಮ

    ಹಾವೇರಿ: ಜಿಲ್ಲೆಯ ಖಾಸಗಿ ನರ್ಸಿಂಗ್ ಹೋಮ್ಳಲ್ಲಿರುವ ಹಾಸಿಗೆಗಳಲ್ಲಿ ಶೇ. 50ರಷ್ಟನ್ನು ಕೋವಿಡ್ ಚಿಕಿತ್ಸೆಗಾಗಿ ಕಾಯ್ದಿರಿಸುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಹಾಗೂ ತಾಲೂಕು ಭಾರತೀಯ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ತಹಸೀಲ್ದಾರ್​ಗಳೊಂದಿಗೆ ಕೋವಿಡ್ ನಿಯಂತ್ರಣ ಮತ್ತು ಚಿಕಿತ್ಸೆಗೆ ಖಾಸಗಿ ವೈದ್ಯಕೀಯ ಸೇವೆ ಬಳಕೆ ಕುರಿತು ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.

    ಕೋವಿಡ್ ಆಸ್ಪತ್ರೆಗಳಾಗಿ ಪರಿವರ್ತಿಸಲು ಹಾಗೂ ಕೋವಿಡ್ ಟೆಸ್ಟ್​ಗೆ ಖಾಸಗಿ ಲ್ಯಾಬ್​ಗಳು, ಖಾಸಗಿ ನರ್ಸಿಂಗ್ ಹೋಮ್ಳು ಮುಂದೆ ಬಂದರೆ ಅನುಮತಿ ನೀಡಲಾಗುವುದು. ಸರ್ಕಾರದ ಮಾರ್ಗಸೂಚಿಯಂತೆ ಚಿಕಿತ್ಸೆ ಮತ್ತು ತಪಾಸಣೆ ನಡೆಸಬೇಕಾಗುತ್ತದೆ. ವೈದ್ಯಕೀಯ ವೆಚ್ಚವನ್ನು ಸರ್ಕಾರದಿಂದ ಭರಿಸಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ತೊಂದರೆ, ರೆಮ್​ಸಿವಿರ್ ಸೇರಿದಂತೆ ಲಸಿಕೆಗಳ ಕೊರತೆಯಿದ್ದರೆ, ಜಿಲ್ಲಾಡಳಿತದಿಂದಲೇ ಪೂರೈಕೆಗೆ ಕ್ರಮ ವಹಿಸಲಾಗುವುದು. ಹೆಚ್ಚುವರಿಯಾಗಿ ಆಮ್ಲಜನಕದ ಸಿಲಿಂಡರ್​ಗಳ ಪೂರೈಕೆ ಹಾಗೂ ರೆಮ್​ಸಿವಿರ್ ಲಸಿಕೆ ಪೂರೈಕೆಗೆ ಬೇಡಿಕೆ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಆಮ್ಲಜನಕ ಮತ್ತು ರೆಮ್​ಸಿವಿರ್ ಲಸಿಕೆ ಕೊರತೆಯಿಲ್ಲ ಎಂದರು.

    ಕೋವಿಡ್ ಚಿಕಿತ್ಸೆಗೆ ಬೆಡ್​ಗಳನ್ನು ನೀಡಲು ನಿರಾಕರಿಸುವ ಹಾಗೂ ಕೋವಿಡ್ ಕರ್ತವ್ಯ ನಿರ್ವಹಿಸಲು ನಿರಾಕರಿಸುವ ಖಾಸಗಿ ನರ್ಸಿಂಗ್ ಹೋಮ್ ಹಾಗೂ ವೈದ್ಯರನ್ನು ಕೆಂಪುಪಟ್ಟಿಗೆ ಸೇರಿಸಿ ಕಾಯ್ದೆಯಂತೆ ನಿರ್ದ್ಯಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಜಿಲ್ಲೆಯ ಪ್ರತಿ ನರ್ಸಿಂಗ್ ಹೋಮ್ಳಲ್ಲಿರುವ ಸಾದಾ ಬೆಡ್​ಗಳ ಸಂಖ್ಯೆ, ಐಸಿಯು, ಆಕ್ಸಿಜನ್ ಬೆಡ್​ಗಳ ಸಂಖ್ಯೆ ಸೇರಿದಂತೆ ಒಟ್ಟಾರೆ ಬೆಡ್​ಗಳ ಸಂಖ್ಯೆಯ ಮಾಹಿತಿ ಹಾಗೂ ಜಿಲ್ಲೆಯ ನರ್ಸಿಂಗ್ ಹೋಮ್ ಖಾಸಗಿ ಕ್ಲಿನಿಕ್​ನಲ್ಲಿ ಸೇವೆಯಲ್ಲಿರುವ ವೈದ್ಯರ ಮಾಹಿತಿಯನ್ನು ಲಿಖಿತವಾಗಿ ಡಿಎಚ್​ಒಗೆ ನೀಡಬೇಕು ಎಂದರು.

    ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳ ಬೆಡ್​ಗಳ ಬಳಕೆ ಹಾಗೂ ಕೋವಿಡ್ ಕರ್ತವ್ಯಕ್ಕೆ ಖಾಸಗಿ ವೈದ್ಯರ ಸೇವೆ ಬಳಸಿಕೊಳ್ಳಲಾಗುವುದು. ಜಿಲ್ಲೆಯ ಎಲ್ಲ ಖಾಸಗಿ ನರ್ಸಿಂಗ್ ಹೋಮ್ ಕ್ಲಿನಿಕ್, ಆಯುಷ್, ದಂತ ವೈದ್ಯರು, ಬ್ಲೆಡ್ ಬ್ಯಾಂಕ್, ಲ್ಯಾಬೋಟರಿಯಲ್ಲಿ ಕೆಲಸ ಮಾಡುವ ತಜ್ಞ ವೈದ್ಯರು, ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಹೆಸರು, ಕಾಯಂ ವಿಳಾಸ, ಸೇವಾ ಮಾಹಿತಿ ಪಟ್ಟಿ ಮಾಡಿ ಸಲ್ಲಿಸಬೇಕು ಎಂದು ಡಿಎಚ್​ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ ಅವರಿಗೆ ಸೂಚಿಸಿದರು.

    ಜಿಪಂ ಸಿಇಒ ಮಹಮ್ಮದ ರೋಷನ್ ಮಾತನಾಡಿ, ಖಾಸಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಐಎಲ್​ಎ ಮತ್ತು ಸಾರಿ ಲಕ್ಷಣಗಳಿದ್ದರೆ ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಬೇಕು. ನಿಮ್ಮಲ್ಲಿ ವ್ಯವಸ್ಥೆ ಇಲ್ಲದಿದ್ದರೆ ತಾಲೂಕು ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿ. ತಾಲೂಕಾಸ್ಪತ್ರೆಯ ತಂಡ ತಪಾಸಣೆ ಮಾಡಲಿದೆ. ರೆಮ್​ಸಿವಿರ್ ಲಸಿಕೆಯನ್ನು ಸರ್ಕಾರದ ಮಾರ್ಗಸೂಚಿಯಂತೆ ಬಳಸಬೇಕು ಎಂದರು.

    ಆರಂಭದಲ್ಲಿ ಜಿಲ್ಲೆಯ ಪ್ರತಿ ತಾಲೂಕಿಗೊಂದು 50 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಸಿದ್ಧವಾಗಿರಲಿ. ಸ್ವಚ್ಛತೆ, ವೈದ್ಯಕೀಯ ತ್ಯಾಜ್ಯದ ನಿರ್ವಹಣೆ, ಹಾಸಿಗೆ, ಊಟದ ವ್ಯವಸ್ಥೆ, ಪಿಪಿಇ ಕಿಟ್, ಸಿಬ್ಬಂದಿ ನಿಯೋಜನೆಗೆ ಮಾರ್ಗಸೂಚಿಯಂತೆ ಕ್ರಮ ವಹಿಸಬೇಕು. ಈ ಸೆಂಟರ್​ಗಳಲ್ಲಿ ಯಾವುದೇ ಅವ್ಯವಸ್ಥೆಯ ದೂರು ಬಂದರೆ ತಹಸೀಲ್ದಾರಗಳನ್ನು ಹೊಣೆಗಾರರನ್ನಾಗಿಸಿ ಅಮಾನತುಗೊಳಿಸಲಾಗುವುದು. ಸರ್ಕಾರ ಹೊರಡಿಸುವ ಮಾರ್ಗಸೂಚಿಯಂತೆ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದರು.

    ಐಎಂಎ ಜಿಲ್ಲಾಧ್ಯಕ್ಷ ಡಾ. ರವಿಕುಮಾರ ಮಲ್ಲಾಡದ, ಡಾ. ಎಂ. ಜಯಾನಂದ, ಡಾ. ದೇವರಾಜ, ಡಾ. ನೀಲೇಶ, ತಹಸೀಲ್ದಾರ್ ಗಿರೀಶ ಸ್ವಾದಿ, ಐಎಂಎ ಎಲ್ಲ ತಾಲೂಕು ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.

    ಜನರಿಗೆ ತೊಂದರೆಯಾದ್ರೆ, ನಿಮಗೆ ಸಂಕಷ್ಟ ತಪ್ಪಿದ್ದಲ್ಲ…

    ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ವ್ಯವಸ್ಥೆ ಸಮನ್ವಯವಾಗಿ ಕಾರ್ಯನಿರ್ವಹಿಸಿದರೆ, ಕೋವಿಡ್ ನಿಯಂತ್ರಣ ಮಾಡುವುದು ಕಷ್ಟವಾಗುವುದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಖಾಸಗಿ ವೈದ್ಯರು ಕೋವಿಡ್ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿವೆ. ನಿತ್ಯ ನೂರರ ಗಡಿಗೆ ಬರುತ್ತಿದೆ. ಹೀಗೆ ಮುಂದುವರಿದರೆ ಪರಿಸ್ಥಿತಿ ಗಂಭೀರವಾಗಲಿದೆ. ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಜತೆ ಖಾಸಗಿ ವೈದ್ಯರು ಕೈಜೋಡಿಸಬೇಕು. ಜಿಲ್ಲೆಯಲ್ಲಿ ಕೋವಿಡ್​ನಿಂದ ಸಾವುಗಳು ಉಂಟಾಗಬಾರದು. ಜನರಿಗೆ ತೊಂದರೆಯಾದರೆ ವೈದ್ಯರಿಗೆ ನಾನು ತೊಂದರೆ ಕೊಡುವೆ. ಸರಿಯಾದ ಸಮಯದಲ್ಲಿ ಸರಿಯಾದ ವೈದ್ಯಕೀಯ ಮಾರ್ಗದರ್ಶನ ಹಾಗೂ ಚಿಕಿತ್ಸೆ ದೊರೆತರೆ ಕೋವಿಡ್​ನಿಂದ ಉಂಟಾಗುವ ಸಾವುಗಳನ್ನು ತಡೆಯಬಹುದು. ಪ್ರತಿ ವೈದ್ಯರು ಸಮನ್ವಯ, ಸಂವಹನ ಮುಕ್ತವಾಗಿರಿಸಿಕೊಂಡು ಕೋವಿಡ್ ನಿಯಂತ್ರಣ ಮತ್ತು ಚಿಕಿತ್ಸೆಗಾಗಿ ಶ್ರಮಿಸಲು ಸ್ವಯಂ ಪ್ರೇರಣೆಯಿಂದ ಮುಂದೆ ಬರಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts