More

    ಮದ್ದೂರು ತಾಲೂಕಿನ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಕ್ರಮ

    ಕೆ.ಎಂ.ದೊಡ್ಡಿ: ಮದ್ದೂರು ತಾಲೂಕಿನಲ್ಲಿರುವ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಶೀಘ್ರ ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

    ಸಮುದಾಯ ಆರೋಗ್ಯ ಕೇಂದ್ರ ಅಭಿವೃದ್ಧಿ, ವೈದ್ಯಾಧಿಕಾರಿಗಳು, ದಾದಿಯರು ಮತ್ತು ಡಿ ಗ್ರೂಪ್ ನೌಕರರ ವಸತಿಗೃಹ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಕೆ.ಎಂ.ದೊಡ್ಡಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೊಸದಾಗಿ ಸುಮಾರು 30 ಹಾಸಿಗೆಯುಳ್ಳ ಹೊಸ ಕೊಠಡಿಯನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗಿದೆ ಎಂದರು.

    ತಾಲೂಕು ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳ ಅಭಿವೃದ್ಧಿ ವಿಚಾರದಲ್ಲಿ ಶಾಸಕರು ಹಾಗೂ ಅಧಿಕಾರಿಗಳು ಪಟ್ಟಿ ನೀಡಿದರೆ ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸಲಾಗುವುದು ಎಂದ ಅವರು, ರಾಜ್ಯದ ಜನತೆಗೆ ಉಚಿತ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಎಲ್ಲರೂ ಸಾಂಘಿಕವಾಗಿ ಶ್ರಮಿಸಬೇಕು ಎಂದು ತಿಳಿಸಿದರು.

    ಆರೋಗ್ಯ ಇಲಾಖೆಗಳಲ್ಲಿ ವೈದ್ಯರು, ಸಿಬ್ಬಂದಿ, ಶುಶ್ರೂಷಕರ ಕೊರತೆ ಇದ್ದು, ಸಿಬ್ಬಂದಿ ನೇಮಕಾತಿಗೆ ಆದೇಶ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಲಾಗಿದೆ. ಅಲ್ಲದೆ ರಾಜ್ಯದ 220 ಕೇಂದ್ರಗಳಿಗೆ ಡಯಾಲಿಸಿಸ್ ಯಂತ್ರ ನೀಡಲು ಇಲಾಖೆ ಮುಂದಾಗಿದೆ. ಇನ್ನು ಹೊಸದಾಗಿ ಆಶಾಕಿರಣ ಯೋಜನೆ ಜಾರಿಗೊಳಿಸಿದ್ದು, ಕಣ್ಣಿನ ತಪಾಸಣೆ ನಡೆಸುವುದರ ಜತೆಗೆ ಶಸ್ತ್ರ ಚಿಕಿತ್ಸೆಯೊಂದಿಗೆ ಕನ್ನಡಕವನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಇದರೊಂದಿಗೆ ರಾಜ್ಯದಲ್ಲಿ ಎಂಟು ಹೊಸ ಆಸ್ಪತ್ರೆ ಸ್ಥಾಪನೆ ಮಾಡಿ 25 ಹೊಸ ಕಿಮೋಥೆರೆಪಿ ಯಂತ್ರಗಳನ್ನು ನೀಡಲಾಗುವುದು ಎಂದರು.

    ಗೃಹ ಆರೋಗ್ಯ ಯೋಜನೆಯನ್ನು ಮುಂದಿನ ದಿನಗಳಲ್ಲಿ ಜಾರಿಗೊಳಿಸಲಾಗುತ್ತದೆ. ರಾಜ್ಯದ ಪ್ರತಿ ಗ್ರಾಮದಲ್ಲಿ ಮೂರು ತಿಂಗಳಿಗೊಮ್ಮೆ 30 ವರ್ಷ ಮೇಲ್ಪಟ್ಟವರಿಗೆ ಆರೋಗ್ಯ ತಪಾಸಣೆ ನಡೆಸಿ ಔಷಧ ನೀಡಲಾಗುತ್ತದೆ. ಲೋಕಸಭಾ ಚುನಾವಣೆ ನಂತರ ಈ ಯೋಜನೆಯನ್ನು ಅಭಿವೃದ್ಧಿಪಡಿಸಿ ಜಾರಿಗೊಳಿಸಲಾಗುವುದು ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮದ್ದೂರು ಶಾಸಕ ಕದಲೂರು ಉದಯ್, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ ಆಸ್ಪತ್ರೆಯನ್ನು ನವೀಕರಣಗೊಳಿಸಿ ಸಾರ್ವಜನಿಕ ಸೇವೆಗೆ ನೀಡಲಾಗುತ್ತಿದೆ. ಇದರೊಂದಿಗೆ ಸುಸಜ್ಜಿತ ಕೊಠಡಿಗಳನ್ನೂ ತುರ್ತಾಗಿ ನಿರ್ಮಾಣ ಮಾಡಲಾಗಿದೆ ಎಂದರು.
    ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದುದ್ದನ್ನು ಗಮನಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಹೊಸದಾಗಿ ಶವಾಗಾರ ನಿರ್ಮಾಣ ಮಾಡಲಾಗಿದೆ. ತಾಲೂಕಿನ ಆಸ್ಪತ್ರೆಗಳಿಗೆ ಅವಶ್ಯಕವಾಗಿ ಬೇಕಾಗಿರುವ ಸವಲತ್ತುಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

    ಡಿಎಚ್‌ಒ ಮೋಹನ್, ಟಿಎಚ್‌ಒ ರವೀಂದ್ರಗೌಡ, ಕೆ.ಎಂ.ದೊಡ್ಡಿ ಗ್ರಾಪಂ ಅಧ್ಯಕ್ಷೆ ಕೌಸಲ್ಯಾ, ವೈದ್ಯಾಧಿಕಾರಿ ಜಗದೀಶ್, ಕಾಂಗ್ರೆಸ್ ಮುಖಂಡ ಸ್ಟಾರ್ ಚಂದ್ರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts