More

    ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಮ

    ಯಳಂದೂರು: ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ಬಳಿ 2 ಎಕರೆ ಪ್ರದೇಶದಲ್ಲಿ 200 ಮೀ. ಟ್ರ್ಯಾಕ್‌ವುಳ್ಳ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.

    ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮಂಗಳವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

    ಯಳಂದೂರು ಚಿಕ್ಕ ತಾಲೂಕಾಗಿದೆ. 1958ರಲ್ಲಿ ಇದೇ ದ್ವಿಸದಸ್ಯ ವಿಧಾನಸಭಾ ಕ್ಷೇತ್ರವಾಗಿತ್ತು. ಇಲ್ಲಿಂದಲೇ ನಮ್ಮ ತಂದೆ ಬಿ. ರಾಚಯ್ಯ ಹಾಗೂ ರಾಜಶೇಖರಮೂರ್ತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಇಲ್ಲಿ ಅನೇಕ ಸರ್ಕಾರಿ ಶಾಲೆ, ಕಾಲೇಜುಗಳಿದ್ದರೂ ಸುಸಜ್ಜಿತ ಕ್ರೀಡಾಂಗಣವಿಲ್ಲ. ಮೆಳ್ಳಹಳ್ಳಿ ಗ್ರಾಮದ ಬಳಿ ಈ ಹಿಂದೆ ಅಗ್ನಿಶಾಮಕ ಠಾಣೆ ನಿರ್ಮಿಸಲು 2 ಎಕರೆ ನಿವೇಶನ ಗುರುತಿಸಲಾಗಿತ್ತು. ಈಗ ಈ ಸ್ಥಳವನ್ನೇ ಕ್ರೀಡಾಂಗಣ ನಿರ್ಮಿಸಲು ಮರು ಮಂಜೂರಾತಿ ನೀಡಬೇಕು ಎಂದು ಈಗಾಗಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಇಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಿಸಲು ನಾನು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದರು.

    ಎರಡು ಎಕರೆ ಜಾಗ ಮಾತ್ರ ಇರುವುದರಿಂದ 200 ಮೀ. ಟ್ರ್ಯಾಕ್‌ನ ಕ್ರೀಡಾಂಗಣ ನಿರ್ಮಿಸಲಾಗುವುದು. ಇದರಿಂದ ತಾಲೂಕಿನ ಗ್ರಾಮೀಣ ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ತಾಲೂಕು ದೈಹಿಕ ಶಿಕ್ಷಕ ಪರಿವೀಕ್ಷಕ ಎಸ್.ಲಿಂಗರಾಜು, ಪ್ರಾಂಶುಪಾಲ ಎಲ್.ಮಹೇಶ್ ಉಪಪ್ರಾಂಶುಪಾಲ ಆರ್. ನಂಜುಂಡಸ್ವಾಮಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಶಿವಸ್ವಾಮಿ ಮಾತನಾಡಿದರು. ರಂಗಸ್ವಾಮಿ, ದೊರೆಸ್ವಾಮಿ, ಮಧು, ತೇಜಸ್, ಮಂಜುನಾಥ್, ಪಪಂ ಸದಸ್ಯರಾದ ಮಹೇಶ್, ಮಂಜು, ಬಿ.ರವಿ, ಮಹದೇವನಾಯಕ, ತಾಪಂ ಮಾಜಿ ಅಧ್ಯಕ್ಷ ಎಚ್.ವಿ. ಚಂದ್ರು, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮುರುಳೀಧರ್ ಸೇರಿದಂತೆ ಅನೇಕರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts