More

    ಕಚೇರಿಗೆ ಜನರನ್ನು ಅಲೆಸಿದರೆ ಪಿಡಿಒಗಳ ವಿರುದ್ಧ ಕ್ರಮ

    ಶ್ರೀರಂಗಪಟ್ಟಣ: ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರು ಹಾಗೂ ಗ್ರಾಮೀಣ ಜನರ ಕೆಲಸ ಕಾರ್ಯಗಳನ್ನು ಸಕಾಲದಲ್ಲಿ ಮಾಡಿಕೊಡದೆ ಅಲೆದಾಡಿಸುವ ದೂರುಗಳು ಕೇಳಿಬಂದಲ್ಲಿ ಪಿಡಿಒಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸೀಫ್ ತಾಕೀತು ಮಾಡಿದರು.


    ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಲಯದ ಸಭಾಂಗಣದಲ್ಲಿ ಬುಧವಾರ ತಾಲೂಕು ಆಡಳಿತದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


    ಗ್ರಾಮೀಣ ಜನರು ಹಲವು ಸಮಸ್ಯೆಗಳನ್ನು ಪರಿಹರಿಸಿಕೊಂಡು ಹಾಗೂ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಕಚೇರಿಗಳಲ್ಲೇ ಎಲ್ಲ ಸವಲತ್ತುಗಳನ್ನು ಸರ್ಕಾರ ಒದಗಿಸಿದೆ. ಪಿಡಿಒಗಳು ಸತಾಯಿಸಿ, ಅಲೆದಾಡಿಸುವುದು ಯಾವ ಕಾರಣಕ್ಕೆ? ತಡಗವಾಡಿ ಗ್ರಾಪಂ ಸೇರಿದಂತೆ ಕೆಲ ಪಂಚಾಯಿತಿಗಳಲ್ಲಿ ಇಂತಹ ನಡೆ ಸಲ್ಲದು. ಜನರ ಅವಶ್ಯಕ ಕೆಲಸಗಳು ನಿಗದಿತ ಸಮಯದಲ್ಲಿ ಆಗಬೇಕು. ಒಂದು ವೇಳೆ ಸರಿಯಾದ ದಾಖಲೆ ಅಥವಾ ಮಾಹಿತಿಗಳು ತಪ್ಪಿದ್ದರೆ ಅವುಗಳನ್ನು ಬಾಕಿ ಇಟ್ಟು ಪರಿಶೀಲಿಸಿ ಸಮಸ್ಯೆಗೆ ತಕ್ಕ ಹಿಂಬರಹ ನೀಡಿ ಅನೂರ್ಜಿತಗೊಳಿಸಿ ಇಲ್ಲವಾದರೆ ಪಿಡಿಒಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಾಕೀತು ಮಾಡಿದರು.


    ಗ್ರಾಮೀಣ ಭಾಗದಲ್ಲಿ ಜನರು ಅದರಲ್ಲೂ ವಿದ್ಯಾರ್ಥಿಗಳ ಮೇಲೆ ನಾಯಿ ದಾಳಿಯಾದ ಪ್ರಕರಣಗಳ ದೂರುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಪಶು ಇಲಾಖೆ ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಲಸಿಕೆ ನೀಡಿ ಕಡಿವಾಣ ಹಾಕಬೇಕು. ಗ್ರಾಮೀಣ ಭಾಗದ ಹಲವೆಡೆ ಜನರು ಕುಡಿಯುವ ನೀರಿನಿಂದಲೇ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಪ್ರಕರಣಗಳು ಹೆಚ್ಚಿದ್ದು, ತಕ್ಷಣ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿನ ನೀರು ಘಟಕಗಳನ್ನು ಶುಚಿಪಡಿಸಿ ಮತ್ತು ಕೆಟ್ಟಿರುವ ಘಟಕಗಳನ್ನು ಶೀಘ್ರ ದುರಸ್ತಿಗೊಳಿಸಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದರು.


    ರಾಜ್ಯದಲ್ಲಿ ರೇಷ್ಮೆ ಬೆಳೆ ಬೆಳೆಯಲು ಸರ್ಕಾರ ಆದ್ಯತೆ ನೀಡಿ ಬೇಡಿಕೆ ಹೆಚ್ಚಿಸಿದ್ದು, ತಾಲೂಕಿನಲ್ಲಿ ರೇಷ್ಮೆ ಬೆಳೆಯಲು ರೈತರು ಮುಂದಾಗಿಲ್ಲ. ಆದರೆ, ಈ ಬಗ್ಗೆ ರೇಷ್ಮೆ ಇಲಾಖೆ ಅಧಿಕಾರಿಗಳು ಸರಿಯಾದ ಮಾಹಿತಿಯನ್ನು ರೈತರಿಗೆ ನೀಡದ ಕಾರಣ ವರ್ಷದಲ್ಲಿ 4 ಲಕ್ಷ ರೂ. ಸಂಪಾದಿಸುವ ರೇಷ್ಮೆ ಬೆಳೆ ಬೆಳೆಯುವ ಬದಲು 20 ಸಾವಿರ ರೂ. ಸಿಗುವ ಭತ್ತದ ಬೆಳೆಗೆ ರೈತರು ಜೋತು ಬಿದ್ದಿದ್ದಾರೆ. ಇದಕ್ಕೆ ಇಲಾಖೆ ಅಧಿಕಾರಿಗಳ ತಾತ್ಸಾರ ಮತ್ತು ನಿರ್ಲಕ್ಷೃ ಕಾರಣ ಹೊರತು, ರೈತರು ಸೋಮಾರಿತನವಲ್ಲ ಎಂದು ರೇಷ್ಮೆ ಅಧಿಕಾರಿಗೆ ತರಾಟೆ ತೆಗೆದುಕೊಂಡು ತಾಲೂಕಿನಲ್ಲಿ ರೈತರಿಗೆ ಜಾಗೃತಿ ಮೂಡಿಸಿ ಎಂದು ಸೂಚನೆ ನೀಡಿದರು.


    ಪಟ್ಟಣದಲ್ಲಿ ಬುಧವಾರ ನಡೆದ ಕುಂದುಕೊರತೆ ಸಭೆ ಕುರಿತು ಸಾರ್ವಜನಿಕರು ಹಾಗೂ ಪತ್ರಕರ್ತರಿಗೆ ಮಾಹಿತಿ ನೀಡದೆ ಗೌಪ್ಯವಾಗಿ ಸಭೆ ಆಯೋಜಿಸಿದ್ದ ಕುರಿತು ಹಲವರಿಂದ ವಿರೋಧ ವ್ಯಕ್ತವಾಯಿತು. ಕೆಲ ಅಧಿಕಾರಿಗಳಿಂದ ಸಿಕ್ಕ ಮಾಹಿತಿಯ ಅನುಸಾರ ಕೇವಲ ಬೆರಳೆಣಿಕೆಯಷ್ಟು ಜನರು ಆಗಮಿಸಿ ತಮ್ಮ ಸಮಸ್ಯೆಯ ಅಹವಾಲು ಸಲ್ಲಿಸಿದರು.


    ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಉಪ ಕಾರ್ಯದರ್ಶಿ ಆನಂದ್ ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೇಣು, ಸಹಾಯಕ ನಿರ್ದೇಶಕ ರಮೇಶ್, ಪಂಚಾಯತ್ ರಾಜ್ ಇಲಾಖೆಯ ಮೃತ್ಯುಂಜಯ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts