More

    ಅನುದಾನ ಲ್ಯಾಪ್ಸ್ ತಪ್ಪಿತಸ್ಥರ ವಿರುದ್ಧ ಕ್ರಮ

    ಉಡುಪಿ: ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಸುಮಾರು 24 ಕೋಟಿ ರೂ. ಮೊತ್ತದ ಅನುದಾನ ಬಳಕೆಯಾಗದೆ ವಾಪಸ್ ಹೋಗಿದ್ದು, ಈ ಕುರಿತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮಂಗಳವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

    ಶಾಸಕ ರಘುಪತಿ ಭಟ್ ವಿಷಯ ಪ್ರಸ್ತಾಪಿಸಿ, 2019-20ನೇ ಸಾಲಿನಲ್ಲಿ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಮೂಲಕ ಕೈಗೊಂಡ ಕಾಮಗಾರಿಗಳಲ್ಲಿ, ಕಾಮಗಾರಿ ಮುಕ್ತಾಯಗೊಂಡು ಬಿಲ್ಲುಗಳು ಸಲ್ಲಿಕೆಯಾಗಿದ್ದರೂ ಖಜಾನೆಗೆ ಸಲ್ಲಿಕೆ ವಿಳಂಬವಾಗಿದೆ. ಈ ಹಿನ್ನಲೆಯಲ್ಲಿ 24 ಕೋಟಿ ರೂ. ಅನುದಾನ ವಾಪಸ್ ಹೋಗಿದೆ. ಈಗಾಗಲೇ ಕಾಮಗಾರಿಗಳು ಮುಕ್ತಾಯಗೊಂಡಿದ್ದು, ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಸಕಾಲದಲ್ಲಿ ಹಣ ಪಾವತಿಸದಿದ್ದರೆ ಮುಂದಿನ ದಿನದಲ್ಲಿ ಕಾಮಗಾರಿ ನಿರ್ವಹಿಸಲು ಯಾರು ಮುಂದೆ ಬರುತ್ತಾರೆ, ಆದ್ದರಿಂದ ಅನುದಾನದ ಸಮರ್ಪಕ ಬಳಕೆ ಮಾಡದ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

    ಈ ಕುರಿತು ಜಿಲ್ಲಾ ಪಂಚಾಯಿತಿ ವತಿಯಿಂದ ತನಿಖೆ ನಡೆಸಲು ಸಮಿತಿ ರಚಿಸಿದ್ದು, ಅದರ ವರದಿ ಕೂಡ ಶೀಘ್ರದಲ್ಲಿ ದೊರೆಯಲಿದೆ. ನಿರ್ಣಯ ಸಹ ಸಿದ್ಧಪಡಿಸಿ ಇಲಾಖಾ ಮುಖ್ಯಸ್ಥರಿಗೆ ಕಳುಹಿಸಲಾಗುವುದು ಎಂದು ಸಿಇಒ ಪ್ರೀತಿ ಗೆಹ್ಲೋಟ್ ತಿಳಿಸಿದರು.
    ಸದಸ್ಯೆ ಶಿಲ್ಪಾ ಜಿ. ಸುವರ್ಣ ಮಾತನಾಡಿ, ಮುದರಂಗಡಿ ಗ್ರಾಮ ಪಂಚಾಯಿತಿನಲ್ಲಿ ಜಿಲ್ಲಾ ಪಂಚಾಯಿತಿ ಅನುಮತಿ ಪಡೆಯದೇ ವಾಣಿಜ್ಯ ಕಟ್ಟಡ ಒಡೆದು ಹಾಕಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದರು. ಗ್ರಾಪಂ ಕಟ್ಟಡ ಒಡೆಯುವ ಸಂದರ್ಭದಲ್ಲಿ ಅಗತ್ಯ ನಿಯಮ ಪಾಲಿಸದಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಿಇಒ ತಿಳಿಸಿದರು.

    ಸದಸ್ಯೆ ಜ್ಯೋತಿ ಹರೀಶ್ ಮಾತನಾಡಿ, ವರಂಗ ಪಂಚಾಯಿತಿ ವ್ಯಾಪ್ತಿಯಲ್ಲಿ 1,100 ಎಕ್ರೆ ಜಮೀನು ಇದ್ದು, ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಜೈನ ಮಠದ ಆಕ್ಷೇಪವಿದೆ. ಹೀಗಾಗಿ ಸರ್ಕಾರಿ ಜಾಗ ಗುರುತಿಸಿ ಕೊಡಬೇಕು. ಹೆಬ್ರಿ-ಮುನಿಯಾಲು ಮಾರ್ಗದಲ್ಲಿ ಎಕ್ಸ್‌ಪ್ರೆಸ್ ಲೇನ್ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ತಡೆ ಆಗಿದ್ದು, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದರು.
    ಸದಸ್ಯ ಶಶಿಕಾಂತ ಪಡುಬಿದ್ರಿ ಮಾತನಾಡಿ, ಪಡುಬಿದ್ರಿಯಲ್ಲಿ ಸರ್ವೀಸ್ ರಸ್ತೆಯ ಕಾಮಗಾರಿ ವಿಳಂಬ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಪೂಣಗೊಳ್ಳದೆ ಮಳೆಗಾಲದಲ್ಲಿ ಸಮಸ್ಯೆಯಾಗಿದೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
    ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಜಿ. ಪುತ್ರನ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಉಪ ಕಾರ್ಯದರ್ಶಿ ಕಿರಣ್ ಫೆಡ್ನೇಕರ್, ಕುಂದಾಪುರ ವಲಯ ಅರಣ್ಯಾಧಿಕಾರಿ ಆಶೀಶ್ ರೆಡ್ಡಿ ಉಪಸ್ಥಿತರಿದ್ದರು.

    ಮರಳಿಗೆ ಏಕರೂಪದ ದರ: ಮರಳು ಸಮಸ್ಯೆ ಬಗ್ಗೆ ಸದಸ್ಯ ಜನಾದರ್ನ ತೋನ್ಸೆಯವರ ಪ್ರಶ್ನೆಗೆ ಉತ್ತರಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ರಾಂಜಿ ನಾಯ್ಕ, ರಾಜ್ಯದಲ್ಲಿ ಹೊಸದಾಗಿ ಕರ್ನಾಟಕ ಮರಳು ನೀತಿ -2020 ಜಾರಿಗೆ ಬಂದಿದ್ದು, ಆ ಪ್ರಕಾರ ಮರಳು ವಿತರಣೆ ನಡೆಯಲಿದೆ. ರಾಜ್ಯಾದ್ಯಂತ ಏಕರೂಪದ ದರ ನಿಗದಿಯಾಗಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts