More

    ಕೊಟ್ಟ ಮಾತಿನಂತೆ ನಡೆದುಕೊಳ್ಳಿ, ಸಿದ್ದರಾಮಯ್ಯಗೆ ಮಾದಿಗ ಮುಖಂಡರ ಆಗ್ರಹ 

    ಬೆಂಗಳೂರು: ನ್ಯಾ.ಸದಾಶಿವ ಆಯೋಗವನ್ನು ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಬೇಕು, ಕಾಂತರಾಜ್ ಆಯೋಗದ ವರದಿ ಸ್ವೀಕರಿಸಬೇಕು ಎಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲು ಕರ್ನಾಟಕ ಆದಿಜಾಂಭವ ಸಾಂಸ್ಕ್ರತಿಕ ಸಮಿತಿ ಮುಂದಾಗಿದೆ.

    ನ. 6ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಮಹಾರಾಣಿ ಕಾಲೇಜ್ ಸಮೀಪದ ಸ್ಕೌಟ್ ಆಂಡ್ ಗೈಡ್ಸ್‌ನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಮಾದಿಗ ಸಮುದಾಯದ ಪ್ರಮುಖ ಮುಖಂಡರ ಸಭೆ ಕರೆಯಲಾಗಿದೆ.

    ದಲಿತ ಸಂಘಟನೆಗಳು, ಸಾವಿರಾರು ಮುಖಂಡರು ನಡೆಸಿದ ಹೋರಾಟ ಹಾಗೂ ಸಮುದಾಯದ ಜನಪ್ರತಿನಿಧಿಗಳ ಒತ್ತಡದ ಫಲ ನ್ಯಾ.ಸದಾಶಿವ ಆಯೋಗದ ವರದಿ ಸರ್ಕಾರದ ಕೈಸೇರಿ ವರ್ಷಗಳೇ ಕಳೆದಿವೆ. ಜೊತೆಗೆ ಕಾಂತರಾಜ್ ಆಯೋಗ ಸಿದ್ದಪಡಿಸಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಜಾತಿ ಗಣತಿ ವರದಿಯನ್ನು ಸ್ವೀಕರಿಸಿಲ್ಲ. ಇಲ್ಲಿಯವರೆಗೂ ಈ ಎರಡು ವರದಿ ಅನುಷ್ಠಾನ ವಿಷಯದಲ್ಲಿ ಎಲ್ಲ ಸರ್ಕಾರಗಳು ನಿರ್ಲಕ್ಷ್ಯ ವಹಿಸಿವೆ ಎಂಬುದು ಮಾದಿಗ ಸಮುದಾಯದ ಮುಖಂಡರ ಆರೋಪ.

    ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಸಿದ್ದರಾಮಯ್ಯ ಅವರು, ಮೊದಲ ಅಧಿವೇಶನದಲ್ಲಿಯೇ ನ್ಯಾ.ಸದಾಶಿವ ಆಯೋಗದ ವರದಿ ಮಂಡಿಸಿ ಸುಧೀರ್ಘ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು. ಕಾಂತರಾಜ್ ಆಯೋಗ ವರದಿ ಸ್ವೀಕರಿಸಲಾಗುವುದು ಎಂದು ಮಾತು ಕೊಟ್ಡಿದ್ದರು. ಆದರೆ ಇಲ್ಲಿಯವರೆಗೂ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಎರಡು ವರದಿಗಳು ನೊಂದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸಲಿವೆ. ಆದ್ದರಿಂದ ಮುಂಬರುವ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಮಂಡಿಸಬೇಕು. ಜತೆಗೆ ಅಧಿವೇಶನ ಆರಂಭದೊಳಗೆ ಕಾಂತರಾಜ್ ಆಯೋಗದ ವರದಿ ಸ್ವೀಕರಿಸಬೇಕು. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ ಈ ಎರಡು ವಿಷಯದಲ್ಲಿ ಮಾತು ಕೊಟ್ಟಂತೆ ನಡೆದುಕೊಳ್ಳಬೇಕೆಂದು ಒತ್ತಾಯಿಸುವ ಹಿನ್ನೆಲೆಯಲ್ಲಿ ಮಾದಿಗ ಸಮುದಾಯದ ಮುಖಂಡರ ಸಭೆ ಆಯೋಜಿಸಲಾಗಿದೆ.

    ಸಚಿವರಾದ ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪೂರ, ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ, ಮಾಜಿ ಸಚಿವ ಎಚ್.ಆಂಜನೇಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ ಸೇರಿದಂತೆ ಸಮುದಾಯದ ಅನೇಕ ಪ್ರಮುಖ ಮುಖಂಡರು ಪಾಲ್ಗೊಳ್ಳಲಿದ್ದಾರೆ.
    ಎಂದು ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್, ಡಾ.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts