More

    ಕಾಯ್ದೆ ತಿದ್ದುಪಡಿಗೆ ರೈತ ಸಂಘ ವಿರೋಧ

    ಅಥಣಿ : ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂ ಸುಧಾರಣೆ ಕಾಯ್ದೆ ಮತ್ತು ಹೆಸ್ಕಾಂ ಖಾಸಗೀಕರಣ ಖಂಡಿಸಿ ರಾಜ್ಯ ರೈತ ಸಂಘ ಹಸಿರು ಸೇನೆಯ ತಾಲೂಕಾಘಟಕದಿಂದ ತಹಸೀಲ್ದಾರ್ ದುಂಡಪ್ಪ ಕೋಮಾರ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

    ಮುಖಂಡ ಮಹಾದೇವ ಮಡಿವಾಳ ಮಾತನಾಡಿ, ಸರ್ಕಾರ ಹಲವು ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ರೈತರಿಗೆ ಬದುಕಿಗೆ ಬರೆ ಎಳೆಯುತ್ತಿದೆ. ಎಪಿಎಂಸಿ ಮತ್ತು ಹೆಸ್ಕಾಂ ಇಲಾಖೆ ಕೂಡ ಖಾಸಗೀಕರಣ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಭೂ ಸುಧಾರಣೆ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಹೆಚ್ಚಾಗುವಂತೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದರು. ಸ್ಥಳಕ್ಕೆ ಆಗಮಿಸಿದ ಶಾಸಕ ಮಹೇಶ ಕುಮಠಳ್ಳಿ, ತಾಲೂಕಿನ ರೈತರ ಜತೆಗೆ ನಾವಿದ್ದೇವೆ. ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುತ್ತೇವೆ. ಡಿಸಿಎಂ ಸವದಿ ಅವರೊಂದಿಗೆ ಚರ್ಚಿಸಿ ಸರ್ಕಾರದ ಮಟ್ಟದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

    ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಲಕ್ಷ್ಮಣ ಸವದಿ, ರೈತರಿಗೆ ಯಾವುದೆ ಕಾಯ್ದೆ ಮಾರಕವಾಗುವುದಿಲ್ಲ. ಇದೆಲ್ಲ ವಿರೋಧ ಪಕ್ಷದವರು ಮಾಡುತ್ತಿರುವ ರಾಜಕೀಯ ಎಂದರು. ಪಾರೀಶ ಯಳಗೂಡ, ಬಾಳು ಲಂಗೂಟಿ, ಪಿಂಟು ಕಬಾಡಗಿ, ಚನಗೌಡ ಈಮಗೌಡರ, ಲಕ್ಕಪ್ಪ ಪೂಜಾರಿ ಇತರರು ಇದ್ದರು.

    ಚಿಕ್ಕೋಡಿ ವರದಿ: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈಬಿಡಲು ಹಾಗೂ ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಿ ಸೋಮವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
    ಭೂ ಸುಧಾರಣಾ ಕಾಯ್ದೆ ತಕ್ಷಣ ಕಾಯ್ದೆ ರದ್ದುಗೊಳಿಸಬೇಕು. ನದಿ ತೀರದ ರೈತರು ಕಳೆದ ವರ್ಷ ಮಹಾಪೂರ ಬಂದು ಮನೆ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಅವರಿಗೆ ಬಿಡಿಗಾಸು ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯ ಸರ್ಕಾರ ಕೊರೊನಾ ತಡೆಗಟ್ಟಲು ವಿಫಲವಾಗಿದೆ. ಖಾಸಗಿ ಆಸ್ಪತ್ರೆಗಳ ಮೇಲೆ ಸರ್ಕಾರದ ನಿಯಂತ್ರಣವಿಲ್ಲ ಎಂದು ಕಿಡಿಕಾರಿದರು. ರೈತ ಮುಖಂಡರಾದ ಭೀಮಸಿ ಗದಾಡಿ, ಗಣಪತಿ ಈಳಗೇರ, ಯಲ್ಲಪ್ಪ ಈಳಗೇರ, ಸತ್ಯೆಪ್ಪ ಮಲ್ಲಾಪುರೆ, ಮನೋಜ ಮನಗೂಳಿ, ಶಂಕರ ಪಡೇದ, ತ್ಯಾಗರಾಜ ಕದಂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts