More

    ಸಾಧಿಸುವ ಛಲ, ಸತತ ಪರಿಶ್ರಮವಿದ್ದಲ್ಲಿ ಸಾಧನೆ ಸಾಧ್ಯ

    ಹುಣಸೂರು : ನಿರ್ದಿಷ್ಟ ಗುರಿ ಇಲ್ಲದೇ ಸಾಧನೆ ಸಾಧ್ಯವಿಲ್ಲ. ಸಾಧಿಸುವ ಛಲ ಮತ್ತು ಸತತ ಪರಿಶ್ರಮವಿದ್ದಲ್ಲಿ ಸಾಧನೆಯ ಶಿಖರವೇರಲು ಸಾಧ್ಯ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯಪಟ್ಟರು.

    ನಗರದ ಜ್ಞಾನಧಾರಾ ಪ್ರಥಮದರ್ಜೆ ಕಾಲೇಜಿನ ಅನ್ನಪೂರ್ಣ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶಾರದಾ ಪೂಜೆ, ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಜೀವನದ ಮೊದಲ ಮೆಟ್ಟಿಲನ್ನು ಹತ್ತುತ್ತಿದ್ದೀರಿ. ಪದವಿ ವ್ಯಾಸಂಗ ಪೂರ್ಣಗೊಂಡ ನಂತರ ನಿಜಜೀವನವನ್ನು ಕಾಣುವಿರಿ. ಕಾಲೇಜಿನ ದಿನಗಳಂತೆ ನಿಜಜೀವನ ಇರುವುದಿಲ್ಲ. ಆದರೆ ಈಗಿಂದಲೇ ಮುಂದೆ ಏನಾಗಬೇಕೆಂಬ ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆಯಬೇಕು. ನಿಮ್ಮಲ್ಲಿರುವ ಪ್ರತಿಭೆ, ವಿಶೇಷತೆಯನ್ನು ನೀವೇ ಗುರುತಿಸಿಕೊಂಡು ಅದರತ್ತ ಹೆಚ್ಚು ಗಮನಹರಿಸಬೇಕು ಎಂದು ಸಲಹೆ ನೀಡಿದರು.

    ಸರ್ಕಾರಿ ಹುದ್ದೆಗಳಿಗಾಗಿಯೇ ಹಂಬಲಿಸುವ ಪರಿಪಾಠ ಬೇಡ. ಇದು ತಂತ್ರಜ್ಞಾನದ ಕಾಲವಾಗಿದ್ದು ಸಾಕಷ್ಟು ಅವಕಾಶಗಳು ಇವೆ. ಆಂಗ್ಲಭಾಷೆ ಮತ್ತು ಮಾತೃಭಾಷೆಯ ಮೇಲೆ ಉತ್ತಮ ಹಿಡಿತ ಸಾಧಿಸಿರಿ. ತಂದೆತಾಯಿಯರ ಶ್ರಮವನ್ನು ಅರಿತು ಕೆಲಸ ಮಾಡಿ ಎಂದು ಸಲಹೆ ನೀಡಿದರು.

    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪಿರಿಯಾಪಟ್ಟಣ ಅಕ್ಷರ ಪಿಯು ಕಾಲೇಜಿನ ಪ್ರಾಂಶುಪಾಲ ಧನಂಜಯ ಮಾತನಾಡಿ, ಆಧುನಿಕ ತಂತ್ರಜ್ಞಾನ, ಸಮೂಹ ಮಾಧ್ಯಮ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ಆದರೆ ವಿದ್ಯಾರ್ಥಿಗಳು ಅದನ್ನು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ಸಕಾರಾತ್ಮಕ ಮನೋಭಾವ ನಿಮ್ಮದಾಗಬೇಕು. ತುಳಿದು ಬದುಕುವವನು ಅಳಿಯುತ್ತಾನೆ. ಆದರೆ ತಿಳಿದು ಬದುಕುವವನು ಅಳಿದ ಮೇಲೂ ಉಳಿಯುತ್ತಾನೆ. ಇದಕ್ಕೆ ನಮ್ಮ ದೇಶದಲ್ಲಿ ಆಗಿಹೋದ ಸಾಕಷ್ಟು ಮಹನೀಯರು ನಮಗೆ ಮಾರ್ಗದರ್ಶಿಗಳಾಗಿದ್ದಾರೆ ಎಂದರು.

    ಗಾವಡಗೆರೆ ಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಡಾ.ಜೆ.ಸಿ.ನಾಗೇಂದ್ರ, ಜ್ಞಾನಧಾರ ಎಜುಕೇಷನ್ ಫೌಂಡೇಶನ್ ಅಧ್ಯಕ್ಷೆ ಸಿ.ಯಮುನಾ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗೋವಿಂದೇಗೌಡ, ಪ್ರಾಧ್ಯಾಪಕ ಡಾ.ಎಚ್.ಟಿ.ರವಿಕುಮಾರ್, ಪ್ರಾಂಶುಪಾಲ ಎಚ್.ಬಿ.ಕಾರ್ತಿಕ್ ಇದ್ದರು. ವಿವಿಧ ವಿಷಯಗಳಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗಣ್ಯರು ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts